ಗಾಂಧಿನಗರ: ತೀವ್ರ ಬಿಪರ್‌ಜೋಯ್ ಚಂಡಮಾರುತದ ಹಿನ್ನೆಲೆಯಲ್ಲಿ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೆಚ್ಚಿನ ಹಾವಳಿ ಎಚ್ಚರಿಕೆಯನ್ನು ನೀಡಿದೆ. ಹೀಗಾಗಿ ಹಲವು ಬಂದರುಗಳನ್ನು ಬಂದ್ ಮಾಡಲಾಗಿದ್ದು, ರೈಲುಗಳನ್ನು ಕ್ಯಾನ್ಸಲ್ ಮಾಡಲಾಗಿದೆ.
ಕರ್ನಾಟಕ ಕರಾವಳಿಯಲ್ಲಿ ಈಗಾಗಲೇ ಬಿಪರ್‌ಜೋಯ್ ಚಂಡಮಾರುತದ ಪರಿಣಾಮದಿಂದ ಮಳೆಯಾಗಿದೆ. ಆದರೆ ಊಹಿಸಿದಂತೆ ಗಾಳಿಯ ದುಷ್ಪರಿಣಾಮ ಆಗಿಲ್ಲ. ಆದರೆ ಮಳೆ ಮಾರುತಗಳನ್ನು ಇದು ಚದುರುವಂತೆ ಮಾಡಿರುವುದರಿಂದ, ಮುಂಗಾರು ಮತ್ತಷ್ಟು ವಿರಳವಾಗಿದೆ.
ಕಛ್, ದ್ವಾರಕಾ, ಪೋರಬಂದರ್, ಜಾಮ್‌ನಗರ ಮತ್ತು ಮೊರ್ಬಿಯ ತಗ್ಗು ಪ್ರದೇಶಗಳನ್ನು ಚಂಡಮಾರುತ ಮುಳುಗಿಸುವ ಸಾಧ್ಯತೆಯಿದೆ. ಸದ್ಯ ಬಿಪರ್‌ಜೋಯ್ ಅನಾಹುತಕಾರಿಯಾಗಬಹುದಾದ ತೀವ್ರತೆಯನ್ನು ಕಳೆದುಕೊಂಡಿದ್ದರೂ, ಸಾಕಷ್ಟು ತೀವ್ರವಾದ ಚಂಡಮಾರುತವಾಗಿ ಮಾರ್ಪಟ್ಟಿದೆ. ಮತ್ತೆ ವೇಗವನ್ನು ಪಡೆದುಕೊಳ್ಳಬಹುದು ಮತ್ತು ಗುಜರಾತ್ ಕರಾವಳಿಯಲ್ಲಿ ಭಾರಿ ವಿನಾಶ ಉಂಟುಮಾಡಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಅದಾನಿ ಗ್ರೂಪ್ ಪ್ರಮುಖವಾಗಿ ಕಾರ್ಯಾಚರಿಸುವ ಮುಂದ್ರಾ ಸೇರಿದಂತೆ ತೈಲ ಮತ್ತು ಕಂಟೈನರ್ ಬಂದರುಗಳಲ್ಲಿ ಸದ್ಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಹಲವು ರೈಲುಗಳನ್ನು ಕ್ಯಾನ್ಸಲ್ ಮಾಡಲಾಗಿದೆ.
ಚಂಡಮಾರುತ ಬಿಪರ್‌ಜೋಯ್ ಗುಜರಾತ್‌ನ ಜಖೌ ಬಂದರಿನ ನೈರುತ್ಯಕ್ಕೆ 290 ಕಿಮೀ ದೂರದಲ್ಲಿ ಈಶಾನ್ಯ ಅರಬ್ಬಿ ಸಮುದ್ರದ ಮೇಲೆ ಕೇಂದ್ರೀಕೃತವಾಗಿದೆ. ದ್ವಾರಕಾದಿಂದ 300 ಕಿಮೀ ಪಶ್ಚಿಮ-ನೈಋತ್ಯಕ್ಕೆ, ನಲಿಯಾದಿಂದ 310 ಕಿಮೀ ಪಶ್ಚಿಮ-ನೈಋತ್ಯಕ್ಕೆ, ಪಾಕಿಸ್ತಾನದ ಕರಾಚಿಯ ದಕ್ಷಿಣ-ನೈಋತ್ಯಕ್ಕೆ 370 ಕಿ.ಮೀ. ದೂರದಲ್ಲಿದೆ. ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ. ಜೂನ್ 15ರ ಸಂಜೆಯ ವೇಳೆಗೆ ಗಂಟೆಗೆ 150 ಕಿಮೀ ವೇಗದಲ್ಲಿ ಮಾಂಡ್ವಿ ಮತ್ತು ಕರಾಚಿ ನಡುವೆ ದಾಟುವ ಸಾಧ್ಯತೆಯಿದೆ.
ಇಂದು ಗುಜರಾತಿನ ಕರಾವಳಿ ಪ್ರದೇಶಗಳಲ್ಲಿ ಲಘುವಾಗಿ ಸಾಧಾರಣ ಮಳೆಯನ್ನು ತರಲಿದೆ ಎಂದು ನಿರೀಕ್ಷಿಸಲಾಗಿದೆ. ಪಶ್ಚಿಮ ರೈಲ್ವೆಯು, ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಚಲಿಸುವ ಮತ್ತು ಕೊನೆಗೊಳ್ಳುವ ಸುಮಾರು 95 ರೈಲುಗಳನ್ನು ಜೂನ್ 15ರವರೆಗೆ ರದ್ದುಗೊಳಿಸಿದೆ.
ಇದನ್ನೂ ಓದಿ: Cyclone Biporjoy: ಬಿಪರ್‌ಜಾಯ್ ಚಂಡಮಾರುತದಿಂದ ಮಳೆ; ಮುಂಗಾರು ಮತ್ತಷ್ಟು ದೂರ