Site icon Vistara News

Cyclone Michaung: ಪ್ರವಾಹ ಪೀಡಿತ ಚೆನ್ನೈಯಲ್ಲಿ ಕುಡಿಯುವ ನೀರು, ಹಾಲಿಗೂ ತತ್ವಾರ

chennai flood

chennai flood

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಮಿಚಾಂಗ್‌ ಚಂಡಮಾರುತದ (Cyclone Michaung) ಪರಿಣಾಮ ತಮಿಳುನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಚೆನ್ನೈ ಸೇರಿದಂತೆ ವಿವಿಧ ಕಡೆಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಮಳೆ ಕಡಿಮೆಯಾದರೂ ಚೆನ್ನೈ ಮತ್ತು ಅದರ ಉಪ ನಗರಗಳ ನಿವಾಸಿಗಳು ನೆರೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮಿಚುವಾಂಗ್ ಚಂಡಮಾರುತವು ವಿನಾಶವನ್ನುಂಟು ಮಾಡಿದ ಮೂರು ದಿನಗಳ ನಂತರ ಚೆನ್ನೈ ಮತ್ತು ಅದರ ಉಪನಗರಗಳ ಕೆಲವು ಭಾಗಗಳಲ್ಲಿ ನಿವಾಸಿಗಳು ಇನ್ನೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಕಡೆ ಅತ್ಯಗತ್ಯ ವಸ್ತುಗಳಾದ ಕುಡಿಯುವ ನೀರು, ಹಾಲಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ವಿದ್ಯುತ್‌ ಸಂಪರ್ಕವೂ ಕಡಿತಗೊಂಡಿದೆ (Chennai Floods).

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ (ಡಿಸೆಂಬರ್‌ 7) ತಮಿಳುನಾಡಿಗೆ ಭೇಟಿ ನೀಡಲಿದ್ದು, ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಲಾ-ಕಾಲೇಜು ಬಂದ್‌

ಪ್ರವಾಹದ ನೀರು ಇನ್ನೂ ಇಳಿಕೆಯಾಗದ ಕಾರಣ ಪಲ್ಲವರಂ, ತಾಂಬರಂ, ವಂಡಲೂರು, ತಿರುಪೊರೂರು, ಚೆಂಗಲ್ಪಟ್ಟು ಮತ್ತು ತಿರುಕಾಜುಕುಂದ್ರಂ ಸೇರಿ ಆರು ತಾಲೂಕುಗಳಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.

ಅಗತ್ಯ ವಸ್ತುಗಳ ಕೊರತೆ

ತೀವ್ರ ಪ್ರವಾಹದಿಂದಾಗಿ ಚೆನ್ನೈನಾದ್ಯಂತ ನಿವಾಸಿಗಳು ಕುಡಿಯುವ ನೀರು, ಹಾಲು ಮತ್ತು ಇತರ ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಲಾಜಿಸ್ಟಿಕ್ಸ್ ಸಮಸ್ಯೆಗಳಿಂದಾಗಿ ಈ ಕೊರತೆ ಉಂಟಾಗಿದೆ. ʼʼಪ್ರವಾಹದಿಂದಾಗಿ ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡಿದೆ. ಕೊರತೆ ಕಾಡುವ ಭಯದಿಂದ ಜನರು ಪೈಪೋಟಿಗೆ ಬಿದ್ದು ಖರೀದಿಗೆ ಮುಂದಾಗಿರುವುದು ಕೂಡ ಪರಿಸ್ಥಿತಿಯನ್ನು ಬಿಗಡಾಯಿಸಿದೆʼʼ ಎಂದು ಮೂಲಗಳು ತಿಳಿಸಿವೆ.

ಮೃತರ ಸಂಖ್ಯೆ 17ಕ್ಕೆ ಏರಿಕೆ

ತೀವ್ರ ಮಳೆಯಿಂದ ಉಂಟಾದ ಪ್ರವಾಹದಿಂದ ತಮಿಳುನಾಡಿನಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬಹುತೇಕರು ಚೆನ್ನೈಗೆ ಸೇರಿದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ವಿದ್ಯುತ್ ಸರಬರಾಜನ್ನು ಪುನಃಸ್ಥಾಪಿಸುವಂತೆ ಒತ್ತಾಯಿಸಿ ಚೆನ್ನೈನ ವ್ಯಾಸರ್ಪಾಡಿ ಪ್ರದೇಶದ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ವ್ಯಾಸರ್ಪಾಡಿ, ವೆಲಾಚೇರಿ ಮತ್ತು ತಾಂಬರಂ ಸೇರಿದಂತೆ ಇನ್ನೂ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಮುಖ್ಯಮಂತ್ರಿ ಭೇಟಿ

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೆಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು 5,060 ಕೋಟಿ ರೂ.ಗಳ ಮಧ್ಯಂತರ ಪ್ರವಾಹ ಪರಿಹಾರವನ್ನು ಕೋರಿ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕವೂ ಕೂಡ ಪ್ರವಾಹ ಪೀಡಿತ ಮನೆಗಳಲ್ಲಿ ಸಿಲುಕಿರುವ ಜನರಿಗೆ ನೆರವಿನ ಹಸ್ತ ಚಾಚಲಾಗಿದೆ. ನೌಕಾಪಡೆಯ ಪ್ರವಾಹ ಪರಿಹಾರ ತಂಡಗಳು ಚೆನ್ನೈನ ಪಲ್ಲಿಕರನೈ, ತೊರೈಪಕ್ಕಂ, ಪೆರುಂಬಕ್ಕಂ ಮತ್ತು ವೆಲಾಚೇರಿಯ ಕಾಲನಿಗಳಲ್ಲಿ ನೆರೆಗೆ ಸಿಲುಕಿರುವ ಜನರಿಗೆ ಸಹಾಯ ಮಾಡುವುದನ್ನು ಮುಂದುವರಿಸಿವೆ. ಇದುವರೆಗೆ 700ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: Aamir Khan: ಚೆನ್ನೈ ಪ್ರವಾಹ ಪೀಡಿತ ಸ್ಥಳದಿಂದ ಬಾಲಿವುಡ್‌ ನಟ ಆಮೀರ್ ಖಾನ್ ಗ್ರೇಟ್‌ ಎಸ್ಕೇಪ್‌

15 ರೈಲುಗಳ ಸಂಚಾರ ರದ್ದು

ಈ ಮಧ್ಯೆ ದಕ್ಷಿಣ ರೈಲ್ವೆ ಗುರುವಾರ 15 ರೈಲುಗಳನ್ನು ರದ್ದುಗೊಳಿಸಿದೆ. ಚೆನ್ನೈ ಎಗ್ಮೋರ್-ತಿರುನೆಲ್ವೇಲಿ ವಂದೇ ಭಾರತ್ ವಿಶೇಷ ರೈಲು, ತಿರುನೆಲ್ವೇಲಿ-ಚೆನ್ನೈ ಎಗ್ಮೋರ್ ವಂದೇ ಭಾರತ್ ಸ್ಪೆಷಲ್, ಡಾ. ಎಂಜಿಆರ್ ಸೆಂಟ್ರಲ್ – ಶ್ರೀ ಮಾತಾ ವೈಷ್ಣೋ ದೇವಿ ಅದಾಮನ್ ಎಕ್ಸ್‌ಪ್ರೆಸ್‌, ಡಾ. ಎಂಜಿಆರ್ ಸೆಂಟ್ರಲ್ – ವಿಜಯವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌, ಡಾ. ಎಂಜಿಆರ್ ಸೆಂಟ್ರಲ್ – ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌, ಡಾ .ಎಂಜಿಆರ್ ಸೆಂಟ್ರಲ್ – ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್‌, ಡಾ.ಎಂಜಿಆರ್ ಸೆಂಟ್ರಲ್ – ಕೊಯಮತ್ತೂರು ಕೋವೈ ಎಕ್ಸ್‌ಪ್ರೆಸ್‌, ಡಾ. ಎಂಜಿಆರ್ ಸೆಂಟ್ರಲ್ – ಕೆಎಸ್ಆರ್ ಬೆಂಗಳೂರು ಬೃಂದಾವನ ಎಕ್ಸ್‌ಪ್ರೆಸ್‌, ಡಾ. ಎಂಜಿಆರ್ ಸೆಂಟ್ರಲ್ – ತಿರುಪತಿ ಎಕ್ಸ್‌ಪ್ರೆಸ್‌, ತಿರುಪತಿ – ಡಾ. ಎಂಜಿಆರ್ ಸೆಂಟ್ರಲ್ ಎಕ್ಸ್‌ಪ್ರೆಸ್‌, ಡಾ. ಎಂಜಿಆರ್ ಸೆಂಟ್ರಲ್ – ತಿರುಪತಿ ಎಕ್ಸ್‌ಪ್ರೆಸ್‌, ತಿರುಪತಿ – ಡಾ. ಎಂಜಿಆರ್ ಸೆಂಟ್ರಲ್ ಎಕ್ಸ್‌ಪ್ರೆಸ್‌, ಡಾ .ಎಂಜಿಆರ್ ಸೆಂಟ್ರಲ್ – ಕೊಯಮತ್ತೂರು ಶತಾಬ್ದಿ ಎಕ್ಸ್‌ಪ್ರೆಸ್‌, ಡಾ. ಎಂಜಿಆರ್ ಸೆಂಟ್ರಲ್ – ವಿಜಯವಾಡ ಜನ ಶತಾಬ್ದಿ ಎಕ್ಸ್‌ಪ್ರೆಸ್‌, ಡಾ. ಎಂಜಿಆರ್ ಸೆಂಟ್ರಲ್ – ಕೆಎಸ್ಆರ್ ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್‌, ಚೆನ್ನೈ ಎಗ್ಮೋರ್ – ತಿರುನೆಲ್ವೇಲಿ ವಂದೇ ಭಾರತ್ ಸ್ಪೆಷಲ್ ಮತ್ತು ತಿರುನೆಲ್ವೇಲಿ – ಚೆನ್ನೈ ಎಗ್ಮೋರ್ ವಂದೇ ಭಾರತ್ ಸ್ಪೆಷಲ್ ರೈಲುಗಳನ್ನು ರದ್ದುಪಡಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version