ಹೊಸ ದಿಲ್ಲಿ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಮೋಚಾ ಚಂಡಮಾರುತವು (Cyclone Mocha) ಶುಕ್ರವಾರದ ವೇಳೆಗೆ ತೀವ್ರತೆ ಪಡೆಯಲಿದೆ. ಗಾಳಿಯ ವೇಗ ಗಂಟೆಗೆ 130 ಕಿ.ಮೀ ತಲುಪಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಎಚ್ಚರಿಸಿದೆ.
ಮಂಗಳವಾರದ ವೇಳೆಗೆ ಮೋಚಾ ಚಂಡಮಾರುತ ಭೂಮಿಯನ್ನು ಸ್ಪರ್ಶಿಸಬಹುದು. ಆಗ್ನೇಯ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಪಕ್ಕದಲ್ಲಿ ಸೋಮವಾರ ಕಡಿಮೆ ಒತ್ತಡದ ವಾಯುಪ್ರದೇಶ ಸೃಷ್ಟಿಯಾಗಿದೆ. ಇದು ಮೇ 9ರಂದು ಖಿನ್ನತೆಯಾಗಿ, ಮೇ 10ರಂದು ಚಂಡಮಾರುತವಾಗಿ ತೀವ್ರಗೊಳ್ಳಲಿದೆ. ಮೇ 12ರ ಸುಮಾರಿಗೆ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕರಾವಳಿಯತ್ತ ಚಲಿಸಲಿದೆ.
ಸಮುದ್ರಯಾನ ನಡೆಸುವ ಸಣ್ಣ ಹಡಗುಗಳು ಮತ್ತು ಮೀನುಗಾರರು ಮಂಗಳವಾರದಿಂದ ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಮೇ 8 ಮತ್ತು 12ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಪ್ರವಾಸೋದ್ಯಮ, ಕಡಲಿನ ಚಟುವಟಿಕೆಗಳನ್ನು ನಿಯಂತ್ರಿಸಲು ಹವಾಮಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.
ಮೋಚಾ ಚಂಡಮಾರುತವು ದಕ್ಷಿಣ-ಪಶ್ಚಿಮ ಬಂಗಾಳ ಕೊಲ್ಲಿ, ಆಗ್ನೇಯ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶದಿಂದಾಗಿ ಉಂಟಾಗಿದೆ. ಪಶ್ಚಿಮದಲ್ಲಿ ಉತ್ತರ ಪಾಕಿಸ್ತಾನ ಮತ್ತು ಜಮ್ಮು ಮತ್ತು ಕಾಶ್ಮೀರದ ನಡುವಿನ ವಾಯುಮಂಡಲದಲ್ಲಿ ಉಂಟಾಗಿರುವ ಉಷ್ಣತೆಯ ಬದಲಾವಣೆ ಕೂಡ ಇದಕ್ಕೆ ಪೂರಕವಾಗಿದೆ.
“ಬಂಗಾಳ ಕೊಲ್ಲಿಯ ಮೇಲಿನ ವಾತಾವರಣ ಚಂಡಮಾರುತದ ಸೃಷ್ಟಿಗೆ ಅನುಕೂಲಕರವಾಗಿವೆ. ಸಮುದ್ರದ ಮೇಲ್ಮೈ ತಾಪಮಾನ 1-2 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿದೆ. ಚಂಡಮಾರುತ ರಚನೆ ಮತ್ತು ತೀವ್ರತೆಗೆ ಶಾಖ ಮತ್ತು ತೇವಾಂಶದ ನಿರಂತರ ಪೂರೈಕೆಯನ್ನು ಕೆಳಭಾಗದ ಶಾಖವು ಒದಗಿಸುತ್ತಿದೆ. ನಾವು ಅತ್ಯಂತ ತೀವ್ರವಾದ ಚಂಡಮಾರುತದ ಮುನ್ಸೂಚನೆ ನೀಡಿದ್ದೇವೆ. ಈ ಬಗ್ಗೆ ನಿಗಾ ಇಡಬೇಕುʼʼ ಎಂದು ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿಯ ಹವಾಮಾನ ವಿಜ್ಞಾನಿ ರಾಕ್ಸಿ ಮ್ಯಾಥ್ಯೂ ಕೋಲ್ ಹೇಳಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಮಂಗಳವಾರ ಆಗ್ನೇಯ ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಲೋಮೀಟರ್‌ನಿಂದ 60 ಕಿಮೀ ವೇಗದಲ್ಲಿರಲಿದೆ. ಕನಿಷ್ಠ ಮೇ 11ರವರೆಗೆ ಚಂಡಮಾರುತ ಮುಂದುವರಿಯಲಿದೆ. ಮೇ 10ರಿಂದ ವಾರದ ಅಂತ್ಯದವರೆಗೆ ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರ ಪ್ರಕ್ಷುಬ್ಧವಾಗಿರಲಿದೆ. ಅಲೆಗಳು ಆರರಿಂದ 14 ಮೀಟರ್ ಎತ್ತರವನ್ನು ತಲುಪಬಹುದು ಎಂದು ಹವಾಮಾನ ಕಚೇರಿ ತಿಳಿಸಿದೆ.
ಮೋಚಾ ಎಂಬ ಹೆಸರು ಹೇಗೆ ಬಂತು?
ʼಸೈಕ್ಲೋನ್ ಮೋಚಾʼ (ಮೊಖಾ) ಎಂಬುದು ಯೆಮೆನ್ ಸೂಚಿಸಿದ ಹೆಸರು. 500 ವರ್ಷಗಳ ಹಿಂದೆ ಜಗತ್ತಿಗೆ ಕಾಫಿಯನ್ನು ಪರಿಚಯಿಸಿದ ಕೆಂಪು ಸಮುದ್ರದ ಬಂದರು ನಗರಕ್ಕೆ ಈ ಹೆಸರಿದೆ. ಚಂಡಮಾರುತಗಳನ್ನು ಹೆಸರಿಸಲು ಕೆಲವಿ ನಿಯಮಗಳನ್ನು ಅನುಸರಿಸಲಾಗುತ್ತದೆ. ಚಂಡಮಾರುತಗಳನ್ನು ಹೆಸರಿಸುವ ವ್ಯವಸ್ಥೆಯನ್ನು ವಿಶ್ವ ಹವಾಮಾನ ಸಂಸ್ಥೆ (WMO) ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ (ESCAP) ಸದಸ್ಯ ರಾಷ್ಟ್ರಗಳು ಅಳವಡಿಸಿಕೊಂಡಿವೆ. WMO ಪ್ರಕಾರ, ಅಟ್ಲಾಂಟಿಕ್ ಮತ್ತು ದಕ್ಷಿಣ ಗೋಳಾರ್ಧದಲ್ಲಿ (ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್), ಉಷ್ಣವಲಯದ ಚಂಡಮಾರುತಗಳು ವರ್ಣಮಾಲೆಯ ಕ್ರಮದಲ್ಲಿ ಹೆಸರುಗಳನ್ನು ಪಡೆಯುತ್ತವೆ. ಮಹಿಳೆ ಮತ್ತು ಪುರುಷನ ಹೆಸರುಗಳು ಪರ್ಯಾಯವಾಗಿ ಬರುತ್ತವೆ. ಆದರೆ ಉತ್ತರ ಹಿಂದೂ ಮಹಾಸಾಗರದಲ್ಲಿ ಬರುವ ಚಂಡಮಾರುತಗಳಿಗೆ ಹೆಸರುಗಳನ್ನು ವರ್ಣಮಾಲೆಯ ಪ್ರಕಾರ ಪಟ್ಟಿ ಮಾಡಲಾಗಿದ್ದು, ಒಂದರ ಹಿಂದೊಂದರಂತೆ ನೀಡಲಾಗುತ್ತದೆ. ಇದನ್ನು ದೇಶಗಳು ಸೂಚಿಸಿರುತ್ತವೆ. ಇವುಗಳಿಗೆ ಲಿಂಗಭೇದವಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ನೊಂದು ವಾರ ಮಳೆ ಸಾಧ್ಯತೆ