Site icon Vistara News

Cyclone Remal: ರೆಮಲ್‌ ಚಂಡಮಾರುತದ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ; 16 ಮಂದಿಯನ್ನು ಬಲಿ ಪಡೆದ ಭೀಕರ ಮಳೆ

Cyclone Remal

Cyclone Remal

ಕೋಲ್ಕತ್ತಾ: ಈ ವರ್ಷದ ಮೊದಲ ಪ್ರಬಲ ಚಂಡಮಾರುತ ರೆಮಲ್‌ (Cyclone Remal) ಅಬ್ಬರಕ್ಕೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಅಕ್ಷರಶಃ ನಲುಗಿ ಹೋಗಿವೆ. ರೆಮಲ್ ಚಂಡಮಾರುತದ ಕಾರಣದಿಂದ ಬಂಗಾಳ ಕೊಲ್ಲಿಯ ಕರಾವಳಿಯಲ್ಲಿ ಭೂಕುಸಿತ ಉಂಟಾಗಿದ್ದು, ಬಾಂಗ್ಲಾದೇಶ ಮತ್ತು ಭಾರತದಾದ್ಯಂತ 16 ಮಂದಿಯನ್ನು ಬಲಿ ಪಡೆದುಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮಳೆಯಿಂದಾಗಿ ಹಲವು ಮಂದಿ ಗಾಯಗೊಂಡಿದ್ದು, ಅನೇಕ ಮನೆಗಳು, ಮರಗಳು ಧರೆಗುರುಳಿವೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ವಿದ್ಯುತ್ ಮಾರ್ಗಗಳಿಗೆ ತೀವ್ರ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಗಂಟೆಗೆ 135 ಕಿ.ಮೀ ವೇಗದಲ್ಲಿ ಬೀಸಿದ ಚಂಡಮಾರುತವು ಭಾನುವಾರ ತಡರಾತ್ರಿ ಬಾಂಗ್ಲಾದೇಶದ ದಕ್ಷಿಣ ಬಂದರು ಮೊಂಗ್ಲಾ ಮತ್ತು ಪಶ್ಚಿಮ ಬಂಗಾಳದ ಪಕ್ಕದ ಸಾಗರ್ ದ್ವೀಪಗಳ ಸುತ್ತಮುತ್ತಲಿನ ಪ್ರದೇಶವನ್ನು ದಾಟಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಉಳಿದ ಸಾವು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಈ ಪೈಕಿ ಕೆಲವರು ಸಂತ್ರಸ್ತ ಶಿಬಿರಕ್ಕೆ ಸ್ಥಳಾಂತರಿಸುವ ವೇಳೆ ಮೃತಪಟ್ಟರೆ, ಇನ್ನು ಹಲವರು ಭೀಕರ ಮಳೆಯಿಂದ ಮನೆ ಕುಸಿದು, ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವಿದ್ಯುತ್ ಸ್ಪರ್ಶದಿಂದ ನಾಲ್ವರು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡಮಾರುತದ ಪ್ರಭಾವ ವಿದ್ಯುತ್ ಮಾರ್ಗಗಳ ಮೇಲೂ ಬೀರಿದ್ದು, ಹಲವು ಕರಾವಳಿ ಪ್ರದೇಶಗಳಿಗೆ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ಬಾಂಗ್ಲಾದೇಶದ ಲಕ್ಷಾಂತರ ಮಂದಿ ಮತ್ತು ಪಶ್ಚಿಮ ಬಂಗಾಳದ ಸಾವಿರಾರು ಮಂದಿ ವಿದ್ಯುತ್‌ ಇಲ್ಲದೆ ಪರದಾಡುವಂತಾಗಿದೆ. ಪಶ್ಚಿಮ ಬಂಗಾಳದಲ್ಲಿ ಕನಿಷ್ಠ 1,200 ವಿದ್ಯುತ್‌ ಕಂಬಗಳು ಧರೆಗುರುಳಿವೆ ಮತ್ತು 300 ಮಣ್ಣಿನ ಗುಡಿಸಲುಗಳು ನೆಲಸಮವಾಗಿದೆ ಎಂದು ಅಂದಾಜಿಸಲಾಗಿದೆ.

ʼʼಅಪಘಾತಗಳನ್ನು ತಪ್ಪಿಸಲು ಕೆಲವು ಪ್ರದೇಶಗಳಿಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಇತ್ತ ಮರಗಳು ಬಿದ್ದು ಅನೇಕ ಕರಾವಳಿ ಪಟ್ಟಣಗಳ ವಿದ್ಯುತ್‌ ಪೂರೈಕೆಗೆ ಅಡ್ಡಿಯಾಗಿದೆʼʼ ಎಂದು ಬಾಂಗ್ಲಾದೇಶದ ವಿದ್ಯುತ್ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬೀದಿಗಳಿಗೆ ನುಗ್ಗಿದ ನೆರೆ

ಚಂಡಮಾರುತ ಕಾರಣದಿಂದ ಮೇ 27ರಂದು ಭೀಕರ ಮಳೆಯಾಗಿದ್ದು, ಕೋಲ್ಕತ್ತಾದ ಹಲವು ಬೀದಿಗಳಿಗೆ ನೆರೆ ನೀರು ನುಗ್ಗಿದೆ. ಅನೇಕ ಕಡೆ ಗೋಡೆಗಳು ಕುಸಿದು ಬಿದ್ದಿದ್ದು, ಕನಿಷ್ಠ 52 ಮರಗಳು ಧರೆಗುರುಳಿವೆ. ಭಾನುವಾರ ಸುಮಾರು 50 ವಿಮಾನಗಳ ಹಾರಾಟವನ್ನು ನಿರ್ಬಂಧಿಸಲಾಗಿದ್ದು, ಸದ್ಯ ಸಂಚಾರ ಆರಂಭಿಸಿವೆ. ರೈಲು ಸಂಚಾರವನ್ನು ಪುನರಾರಂಭಿಸಲಾಗಿದೆ.

ಇದನ್ನೂ ಓದಿ: Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

10 ಲಕ್ಷ ಮಂದಿಯ ಸ್ಥಳಾಂತರ

ಭಾರತ ಮತ್ತು ಬಾಂಗ್ಲಾದೇಶದ ಕನಿಷ್ಠ 10 ಲಕ್ಷ ಮಂದಿಯನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ʼʼನದಿ ನೀರಿನ ಮಟ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳ ಜನರನ್ನು ನಿರಾಶ್ರಿತ ಶಿಬಿರಗಳಿಗೆ ಕರೆದೊಯ್ಯಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Exit mobile version