ನವದೆಹಲಿ: ಟಿಬೆಟ್ ಬೌದ್ಧ ಧರ್ಮಗುರು ದಲಾಯಿ ಲಾಮಾ (Dalai Lama) ಅವರು ಬಾಲಕನೊಬ್ಬನ ತುಟಿಗೆ ಮುತ್ತು ಕೊಟ್ಟು, ತಮ್ಮ ನಾಲಗೆ ಚೀಪು ಎಂದು ಹೇಳಿದ ವಿಡಿಯೊ ವೈರಲ್ ಆಗಿ, ಭಾರಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಅವರು ಕ್ಷಮೆಯಾಚಿಸಿದ್ದಾರೆ. ದಲಾಯಿ ಲಾಮಾ ಅವರು ಟ್ವಿಟರ್‌ನಲ್ಲಿ ಬಾಲಕ ಹಾಗೂ ಆತನ ಕುಟುಂಬಸ್ಥರ ಕ್ಷಮೆಯಾಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೌದ್ಧ ಧರ್ಮ ಗುರು ವರ್ತನೆ ಬಗ್ಗೆ ಭಾರಿ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷಮೆಯಾಚಿಸಿದ್ದಾರೆ.
“ದಲಾಯಿ ಲಾಮಾ ಅವರು ಇತ್ತೀಚೆಗೆ ಬಾಲಕನೊಬ್ಬನಿಗೆ ತಬ್ಬಿಕೊ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಾಗಿ, ದಲಾಯಿ ಲಾಮಾ ಅವರು ಬಾಲಕ, ಆತನ ಕುಟುಂಬಸ್ಥರು ಹಾಗೂ ಜಗತ್ತಿನಾದ್ಯಂತ ಇರುವ ಆತನ ಸ್ನೇಹಿತರ ಕ್ಷಮೆಯಾಚಿಸುತ್ತಿದ್ದಾರೆ. ದಲಾಯಿ ಲಾಮಾ ಅವರ ಹೇಳಿಕೆಯಿಂದ ಯಾರಿಗೆಲ್ಲ ನೋವಾಗಿದೆಯೋ, ಅವರ ಕ್ಷಮೆಯಾಚಿಸುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.
ದಲಾಯಿ ಲಾಮಾ ಕ್ಷಮೆಯಾಚನೆ
“ದಲಾಯಿ ಲಾಮಾ ಅವರು ಯಾವುದೇ ಮುಗ್ಧ ಮಕ್ಕಳ ಜತೆ ಚೇಷ್ಟೆ ಮಾಡುತ್ತಾರೆ. ಆ ಮೂಲಕ ಅವರನ್ನು ಖುಷಿಪಡಿಸುತ್ತಾರೆ. ಇದನ್ನು ಅವರು ಸಾರ್ವಜನಿಕವಾಗಿ, ಕ್ಯಾಮೆರಾಗಳ ಎದುರೇ ಮಾಡುತ್ತಾರೆ” ಎಂದು ಕೂಡ ದಲಾಯಿ ಲಾಮಾ ಟ್ವಿಟರ್ ಖಾತೆಯಿಂದ ಸ್ಪಷ್ಟನೆಯನ್ನೂ ನೀಡಲಾಗಿದೆ.
ವೈರಲ್ ಆದ ವಿಡಿಯೊ ಇಲ್ಲಿದೆ
ದಲಾಯಿ ಲಾಮಾ ಕ್ಷಮೆಯಾಚನೆ ಇದೇ ಮೊದಲಲ್ಲ
ದಲಾಯಿ ಲಾಮಾ ಅವರಿಗೂ ಹಾಗೂ ವಿವಾದಗಳಿಗೂ ಎಲ್ಲಿಲ್ಲದ ನಂಟಿದೆ. ಇದಕ್ಕೂ ಮೊದಲು ಕೂಡ ಅವರು ಹಲವು ಹೇಳಿಕೆಗಳನ್ನು ನೀಡಿ ಕ್ಷಮೆಯಾಚಿಸಿದ ಪ್ರಸಂಗಗಳಿವೆ. “1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಮಹಾತ್ಮ ಗಾಂಧೀಜಿ ಅವರಿಗೆ ಜವಾಹರ ಲಾಲ್ ನೆಹರು ಬದಲು ಮೊಹಮ್ಮದ್ ಅಲಿ ಜಿನ್ನಾ ಪ್ರಧಾನಿ ಆಗಬೇಕು ಎಂಬ ಇಚ್ಛೆ ಇತ್ತು. ಆದರೆ, ನೆಹರು ಅವರಿಗೆ ತಾವು ಪ್ರಧಾನಿಯಾಗಬೇಕು ಎಂಬ ಮಹದಾಸೆ ಇತ್ತು. ನೆಹರು ಸ್ವಾರ್ಥಿಯಾಗಿದ್ದರು” ಎಂದು ದಲಾಯಿ ಲಾಮಾ ಹೇಳಿದ್ದರು. ಇದಾದ ಬಳಿಕ ಅವರು ಕ್ಷಮೆಯಾಚಿಸಿದ್ದರು.
ಅಲ್ಲದೆ, ಮತ್ತೊಂದು ಬಾರಿಯೂ ಧರ್ಮಗುರು ನೀಡಿದ ಹೇಳಿಕೆ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. “ನನ್ನ ನಂತರದ ಮಹಿಳಾ ಉತ್ತರಾಧಿಕಾರಿಯು ನೋಡಲು ಆಕರ್ಷಕವಾಗಿರಬೇಕು” ಎಂದು ದಲಾಯಿ ಲಾಮಾ ನೀಡಿದ ಹೇಳಿಕೆಯೂ ವಿವಾದಕ್ಕೆ ಗುರಿಯಾಗಿತ್ತು. ಇದಾದ ಬಳಿಕವೂ ಅವರು ತಮ್ಮ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Dalai Lama | ಚೀನಾಗೆ ಹೋಗಲ್ಲ, ಕೊನೆಯ ಉಸಿರಿರುವವರೆಗೆ ಭಾರತದಲ್ಲೇ ಇರುವೆ, ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ದಲಾಯಿ ಲಾಮಾ ಹೇಳಿಕೆ