ಪಟನಾ: ಇದನ್ನು ಅದೃಷ್ಟ ಅನ್ನಬೇಕೋ, ಪರಿಶ್ರಮಕ್ಕೆ ಸಿಕ್ಕಿದ ಪ್ರತಿಫಲ ಅನ್ನಬೇಕೋ ಗೊತ್ತಿಲ್ಲ. ಆದರೆ, ಯಾರೂ ಊಹಿಸದ ರೀತಿಯಲ್ಲಿ ಬಿಹಾರದ ಪಟನಾದ ೧೭ ವರ್ಷದ ದಲಿತ ಬಾಲಕನೊಬ್ಬನಿಗೆ ೨.೫ ಕೋಟಿ ರೂ.ಯ ಸ್ಕಾಲರ್‌ಷಿಪ್ ದೊರಕಿದೆ. ಅದೂ ಅಮೆರಿಕದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪದವಿ ಕಲಿಕೆಗೆ ಸಿಕ್ಕಿರುವ ಮಹಾ ಭಾಗ್ಯ.
ಫುಲ್ವಾರಿಷರೀಫ್ ಸಮೀಪದ ಗೋಣ್ಪುರ ಎಂಬ ಗ್ರಾಮದ ಪ್ರೇಮ್ ಕುಮಾರ್ ಈ ಅದೃಷ್ಟವಂತ ಯುವಕ. ಈತ ದಿನಗೂಲಿ ಕಾರ್ಮಿಕರೊಬ್ಬರ ಮಗ. ಆ ಕುಟುಂಬದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಮೊದಲ ಹುಡುಗ.
ಶೋಷಿತ್ ಸಮಾಧಾನ್ ಕೇಂದ್ರದಲ್ಲಿ ೧೨ನೇ ತರಗತಿ ವಿದ್ಯಾರ್ಥಿಯಾಗಿರುವ ಪ್ರೇಮ್ ಈ ವರ್ಷದ ಅಂತ್ಯದಲ್ಲಿ ಪೆನಿಸಿಲ್ವೇನಿಯಾದಲ್ಲಿನ ಲಫಾಯೇಟ್ ಕಾಲೇಜನ್ನು ಸೇರಿಕೊಳ್ಳಲಿದ್ದಾರೆ. ಅಲ್ಲಿ ಆತ ಕಲಿಯಲಿರುವುದು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ.
ಲಫಾಯೆಟ್ ಕಾಲೇಜು ಎನ್ನುವುದು ೧೮೨೬ರಲ್ಲಿ ಸ್ಥಾಪನೆಯಾದ, ಅಮೆರಿಕದ ಮುಂಚೂಣಿ ಎಂಜಿನಿಯರಿಂಗ್ ಕಾಲೇಜು. ಇಂಥ ಕಾಲೇಜು ಪ್ರೇಮ್‌ನನ್ನು ೨.೫ ಕೋಟಿ ರೂ. ಸ್ಕಾಲರ್‌ಷಿಪ್ ಕೊಟ್ಟು ಆಹ್ವಾನ ನೀಡಿದೆ.
ಪ್ರತಿಷ್ಠಿತ ಡಯರ್ ಫೆಲೋಷಿಪ್
ಪ್ರೇಮ್‌ಗೆ ಸಿಕ್ಕಿರುವ ಈ ಪ್ರತಿಷ್ಠಿತ ಫೆಲೋಷಿಪ್‌ಗೆ ಡಯರ್ ಫೆಲೋಷಿಪ್ ಎಂದು ಹೆಸರು. ಈ ಫೆಲೋಷಿಪ್‌ಗೆ ಈ ವರ್ಷ ಆಯ್ಕೆಯಾದ ಜಗತ್ತಿನ ಆರು ಮಂದಿ ವಿದ್ಯಾರ್ಥಿಗಳಲ್ಲಿ ಪ್ರೇಮ್ ಒಬ್ಬರು. ತಾವು ವಾಸಿಸುವ ಪ್ರದೇಶದಲ್ಲಿ, ಸಮುದಾಯದಲ್ಲಿ ಚೈತನ್ಯವನ್ನು ತುಂಬಲು ಅತ್ಯಂತ ಶಕ್ತಿಶಾಲಿ ಪ್ರಯತ್ನಗಳನ್ನು ನಡೆಸುವ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಅವಿರತವಾಗಿ ಶ್ರಮಿಸುವ ಅಸಾಮಾನ್ಯ ವಿದ್ಯಾರ್ಥಿಗಳಿಗೆ ಡಯರ್ ಫೆಲೋಷಿಪ್‌ನ್ನು ನೀಡಲಾಗುತ್ತದೆ.
ʻʻಅಭಿನಂದನೆಗಳು, ಹಕ್ಕುಗಳಿಂದ ವಂಚಿತವಾಗಿರುವ ಸಮುದಾಯಗಳಿಗೆ ಸೇವೆ ಸಲ್ಲಿಸುವ ನಿಮ್ಮ ಬದ್ಧತೆ ಮತ್ತು ದೃಢ ನಿರ್ಧಾರದಿಂದ ನಾವು ನಿಜಕ್ಕೂ ಪ್ರೇರಣೆ ಪಡೆದಿದ್ದೇವೆʼʼ ಎಂದು ೧೭ ವರ್ಷದ ಹುಡುಗನಿಗೆ ಬರೆದಿರುವ ಪತ್ರದಲ್ಲಿ ಪ್ರವೇಶಾತಿ ವಿಭಾಗದ ಡೀನ್ ಮ್ಯಾಥ್ಯೂ ಎಸ್. ಹೈಡ್ ಹೇಳಿದ್ದಾರೆ.
ಯಾವುದಕ್ಕೆ ಈ ೨.೫ ಕೋಟಿ ರೂ. ಮೊತ್ತ?
ಲಫಾಯೇಟ್ ಕಾಲೇಜು ನೀಡಲಿರುವ ಸ್ಕಾಲರ್‌ಷಿಪ್‌ನ ಹಣ ಪ್ರೇಮ್‌ನ ಪದವಿ ಕೋರ್ಸ್‌ಗೆ ಸಂಬಂಧಿಸಿ ಎಲ್ಲ ನೇರ ಮತ್ತು ಪರೋಕ್ಷ ಖರ್ಚಿಗೆ ಬಳಕೆಯಾಗಲಿದೆ. ಟ್ಯೂಷನ್ ಫೀಸ್, ವಸತಿ, ಪ್ರಯಾಣದ ಖರ್ಚು, ಆರೋಗ್ಯ ವಿಮೆ, ಪುಸ್ತಕ ಸೇರಿದಂತೆ ಎಲ್ಲ ವಿಚಾರಗಳು ಇದರಲ್ಲಿ ಬರಲಿವೆ.
ಪ್ರೇಮ್‌ಗೆ ೧೪ ವರ್ಷ ಆಗಿದ್ದಾಗಲೇ ಡೆಕ್ಸ್‌ಟೆರಿಟಿ ಗ್ಲೋಬಲ್ ಎಂಬ ಸಂಸ್ಥೆ ಆತನನ್ನು ಗುರುತಿಸಿತ್ತು. ದಕ್ಷಿಣ ಏಷ್ಯಾದಲ್ಲಿ ಶಿಕ್ಷಣ ಪಡೆಯಲಾಗದೆ ಸಂಕಷ್ಟಕ್ಕೆ ಒಳಗಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ನಾಯಕತ್ವ ಕಾರ್ಯಕ್ರಮಗಳ ಮೂಲಕ ಬೆನ್ನು ತಟ್ಟುವ ಸಂಸ್ಥೆ ಇದಾಗಿದೆ.
ನಂಬಸಲಾಧ್ಯ ಎಂದ ಪ್ರೇಮ್
ʻʻನನ್ನ ಹೆತ್ತವರು ಶಾಲೆಯ ಮುಖ ನೋಡಿದವರಲ್ಲ. ಈ ಗೌರವ ನನಗೆ ಸಿಕ್ಕಿರುವುದು ನಂಬಲಸಾಧ್ಯವಾದ ಘಟನೆʼʼ ಎಂದು ಸ್ಕಾಲರ್‌ಷಿಪ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ ಪ್ರೇಮ್. ʻʻಈ ಕ್ಷಣದಲ್ಲಿ ನಾನು ನೆನೆಯಬೇಕಾಗಿರುವುದು ಬಿಹಾರದಲ್ಲಿ ಮಹಾದಲಿತರ ಏಳಿಗೆಗಾಗಿ ಕೆಲಸ ಮಾಡುವ ಡೆಕ್ಸ್‌ಟೆರಿಟಿ ಗ್ಲೋಬಲ್ ಸಂಸ್ಥೆಯನ್ನು. ಅದರ ಕೆಲಸ ಅತ್ಯಂತ ಶ್ಲಾಘನೀಯ. ಆ ಸಂಸ್ಥೆಯಿಂದಾಗಿಯೇ ನಾನು ಇವತ್ತು ಈ ಯಶಸ್ಸನ್ನು ಪಡೆದಿದ್ದೇನೆ. ನನಗೆ ತುಂಬ ಸಂತೋಷವಾಗಿದೆ ಎಂದು ಪ್ರೇಮ್ ಹೇಳಿದ್ದಾನೆ. ಡೆಕ್ಸ್‌ಟೆರಿಟಿ ಗ್ಲೋಬಲ್ ಸಂಸ್ಥೆಯ ಸ್ಥಾಪಕರು ಮತ್ತು ಸಿಇಒ ಆಗಿರುವ ಶರದ್ ಸಾಗರ್ ಅವರು ೨೦೧೬ರಲ್ಲಿ ಫೋರ್ಬ್ಸ್ ಗುರುತಿಸಿರುವ ೩೦ ವರ್ಷದೊಳಗಿನ ೩೦ ಜಾಗತಿಕ ಸಾಧಕರ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದ್ದಾರೆ. ಅವರು ಪ್ರೇಮ್‌ನ ಸಾಧನೆಯನ್ನು ಸಂಭ್ರಮದಿಂದ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ| ಅಂದು ಜಸ್ಟ್ ಪಾಸ್, ಇಂದು ಐಎಎಸ್: ಭರೂಚ್ ಜಿಲ್ಲಾಧಿಕಾರಿ ತುಷಾರ್ ಸುಮೇರಾ ಸ್ಫೂರ್ತಿದಾಯಕ ಕಥೆ