ಕೋಲ್ಕೊತಾ: ಹೆಣ್ಣುಮಕ್ಕಳನ್ನು ಡಾರ್ಲಿಂಗ್ (Darling), ಬೇಬಿ, ಬೇಬ್ ಎಂದು ಕರೆಯುವ ರೂಢಿ ತುಂಬ ಯುವಕರಿಗೆ ಇರುತ್ತದೆ. ಆದರೆ, ಇನ್ನುಮುಂದೆ ಅಪರಿಚಿತ ಹೆಣ್ಣುಮಕ್ಕಳನ್ನು ಡಾರ್ಲಿಂಗ್ ಎಂದು ಕರೆಯುವುದು, ಛೇಡಿಸುವ ಚಾಳಿ ಇದ್ದರೆ, ಯುವಕರು ಕೂಡಲೇ ಈ ಚಾಳಿಯನ್ನು ಬಿಡಬೇಕು. ಏಕೆಂದರೆ, “ಅಪರಿಚಿತ ಹೆಣ್ಣುಮಕ್ಕಳನ್ನು ಡಾರ್ಲಿಂಗ್ ಎಂದು ಕರೆಯುವುದು ಕೂಡ ಲೈಂಗಿಕ ಕಿರುಕುಳವಾಗಿದ್ದು (Sexual Harassment), ಅಪರಾಧ ಪ್ರಕರಣ ದಾಖಲಿಸಿ” ಎಂಬುದಾಗಿ ಕೋಲ್ಕೊತಾ ಹೈಕೋರ್ಟ್ (Calcutta High Court) ತೀರ್ಪು ನೀಡಿದೆ.
ಹೌದು, ಅಪರಿಚಿತ ಮಹಿಳೆ ಅಥವಾ ಯುವತಿಯನ್ನು ಡಾರ್ಲಿಂಗ್ ಎಂದು ಕರೆಯುವುದು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 354 ಎ (ಮಹಿಳೆ ಜತೆ ಅತಿರೇಕದ ವರ್ತನೆ) ಹಾಗೂ 509 (ಹೆಣ್ಣುಮಕ್ಕಳನ್ನು ಚುಡಾಯಿಸುವುದು) ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಬೇಕು. ಅವರನ್ನು ಡಾರ್ಲಿಂಗ್ ಎಂದು ಕರೆಯುವುದು ಕೂಡ ಸೆಕ್ಸುವಲ್ ಹೇಳಿಕೆಯಾಗಿದೆ. ಅದರಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಜಯ್ ಸೇನ್‌ಗುಪ್ತಾ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ?
ಪಶ್ಚಿಮ ಬಂಗಾಳದಲ್ಲಿ ಜಾನಕ್ ರಾಮ್ ಎಂಬಾತನು ಮಹಿಳಾ ಪೊಲೀಸ್ ಪೇದೆಯೊಬ್ಬರನ್ನು ಡಾರ್ಲಿಂಗ್ ಎಂದು ಕರೆದಿದ್ದ. ಕುಡಿದ ಮತ್ತಿನಲ್ಲಿ ಆತ ಪೊಲೀಸ್ ಪೇದೆಯನ್ನು ಡಾರ್ಲಿಂಗ್ ಎಂದು ಕರೆದಿದ್ದ. ಈತನ ವಿರುದ್ಧ ಮಹಿಳಾ ಪೊಲೀಸ್ ಪೇದೆಯು ಕೇಸ್ ದಾಖಲಿಸಿದ್ದು, ಅಧೀನ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಅಧೀನ ನ್ಯಾಯಾಲಯದ ತೀರ್ಪನ್ನು ಈಗ ಕೋಲ್ಕೊತಾ ಹೈಕೋರ್ಟ್ ಎತ್ತಿಹಿಡಿದಿದೆ. ಇದರೊಂದಿಗೆ ಯಾರು ಕೂಡ ಹೆಣ್ಣುಮಕ್ಕಳನ್ನು ಡಾರ್ಲಿಂಗ್ ಎಂದು ಕರೆಯಬಾರದು ಎಂಬುದಾಗಿಯೂ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಎಂಎಸ್‌ಪಿಗೂ, ಎಂಆರ್‌ಪಿಗೂ ವ್ಯತ್ಯಾಸ ತಿಳಿಯದ ರಾಹುಲ್ ಗಾಂಧಿ; ನೀವೇ ವಿಡಿಯೊ ನೋಡಿ
ಮಹಿಳೆಯು ಪೊಲೀಸ್ ಕಾನ್‌ಸ್ಟೆಬಲ್ ಆಗಿರಲಿ, ಸಾಮಾನ್ಯ ಗೃಹಿಣಿಯೇ ಆಗಿರಲಿ, ಅಪರಿಚಿತರು ಆಕೆಯನ್ನು ಡಾರ್ಲಿಂಗ್ ಎಂದು ಕರೆಯುವ ಹಾಗಿಲ್ಲ. ವ್ಯಕ್ತಿಯು ಮದ್ಯಪಾನ ಮಾಡಿರಲಿ ಅಥವಾ ಮಾಡದಿರಲಿ, ಯಾವುದೇ ಮಹಿಳೆಯನ್ನು ಡಾರ್ಲಿಂಗ್ ಎಂದು ಕರೆಯುವಂತಿಲ್ಲ. ಹಾಗೆ ಕರೆಯುವುದು ಕೂಡ ಸೆಕ್ಸುವಲ್ ರಿಮಾರ್ಕ್ ಆಗಿದೆ” ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು. ಅದರಲ್ಲೂ, ಒಬ್ಬ ವ್ಯಕ್ತಿಯು ಕುಡಿಯದೆ, ಸಮಚಿತ್ತದಿಂದ ಇದ್ದಾಗ ಏನಾದರೂ ಡಾರ್ಲಿಂಗ್ ಎಂದು ಕರೆದರೆ, ಆತನಿಗೆ ಇನ್ನೂ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದಾಗಿ ಕೋರ್ಟ್ ಸ್ಪಷ್ಟಪಡಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ