ಹೊಸದಿಲ್ಲಿ: ದೇಶದಲ್ಲಿ ಮತ್ತೆ ಕೋಮುಗಲಭೆ ಸೃಷ್ಟಿ, ರಾಜಕಾರಣಿಗಳ ಹತ್ಯೆಗೆ ಸಂಚು ನಡೆಸುತ್ತಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ (Dawood Ibrahim) ಬೇಟೆಗಾಗಿ ತನಿಖಾ ಸಂಸ್ಥೆಗಳು ಸಿದ್ಧವಾಗುತ್ತಿವೆ. 1991ರಲ್ಲಿ ಅಯೋಧ್ಯಾ ಘಟನೆ ನಡೆದ ಬೆನ್ನಿಗೇ ಮುಂಬಯಿಯಲ್ಲಿ ಮಹಾಸ್ಫೋಟ ನಡೆಸಿದ್ದ ದಾವೂದ್ ಗ್ಯಾಂಗ್ ಇದೀಗ ಜ್ಞಾನವಾಪಿ ಮಸೀದಿ ವಿವಾದ ಮೇಲಕ್ಕೆ ಬರುತ್ತಿದ್ದಂತೆಯೇ ಮತ್ತೆ ಸಕ್ರಿಯವಾಗಿದೆ. ಇತ್ತೀಚೆಗೆ ಮುಂಬಯಿಯಲ್ಲಿ ಇಬ್ಬರು ದಾವೂದ್ ಬಂಟರನ್ನು ಎನ್‌ಐಎ ಬಂಧಿಸಿದಾಗ ಈ ಕಾರಸ್ಥಾನ ಬಯಲಾಗಿದೆ. ಇದರ ಬೆನ್ನು ಬಿದ್ದ ತನಿಖಾ ಸಂಸ್ಥೆಗಳಿಗೆ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ಆಶ್ರಯ ಪಡೆದಿರುವುದು ಗೊತ್ತಾಗಿದೆ. ಇದರ ನಡುವೆಯೇ ಜಾರಿ ನಿರ್ದೇಶನಾಲಯಕ್ಕೂ ದಾವೂದ್ ಕರಾಚಿಯಲ್ಲಿರುವುದು ಸ್ಪಷ್ಟಗೊಂಡಿದೆ.
ದಾವೂದ್ ಇಬ್ರಾಹಿಂ (Dawood Ibrahim) ಕರಾಚಿಯಲ್ಲೇ ಇದ್ದಾನೆ ಎಂಬ ಖಚಿತ ಮಾಹಿತಿಯನ್ನು ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದು ಆತನ ಅಳಿಯ ಅಲಿಶಾ ಪಾರ್ಕರ್. ದಾವೂದ್‌ಗೆ ಪತ್ನಿಯ ಕಡೆಯ ಸಂಬಂಧಿಯಾಗಿರುವ ಅಲಿಶಾ ಪಾರ್ಕರ್, ಪ್ರತಿಯೊಂದು ಹಬ್ಬದ ಸಂದರ್ಭದಲ್ಲಿ ತಾವು ದಾವೂದ್ ಪತ್ನಿಗೆ ಶುಭಾಶಯ ಹೇಳುತ್ತೇವೆ ಎಂದು ಹೇಳಿದ್ದಾನೆ.
1986ರಲ್ಲೇ ದೇಶ ಬಿಟ್ಟಿದ್ದ
ದಾವೂದ್ ಇಬ್ರಾಹಿಂ 1980ರ ದಶಕದಲ್ಲಿ ಮುಂಬಯಿಯಲ್ಲಿ ಸುಪಾರಿ ಕೊಲೆಗಳ ಮೂಲಕ ನಡುಕ ಹುಟ್ಟಿಸಿದ್ದ ದಾವೂದ್ ಇಬ್ರಾಹಿಂ, 1991ರಲ್ಲಿ ಮುಂಬಯಿ ಸ್ಫೋಟದ ಮೂಲಕ ಇನ್ನಷ್ಟು ಕ್ರೌರ್ಯ ಮೆರೆದಿದ್ದ. ಮುಂದೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮುಸ್ಲಿಂ ಸಂಘಟನೆಗಳಿಗೆ ಫಂಡಿಂಗ್ ಮಾಡಿ ದುಷ್ಕೃತ್ಯಕ್ಕೆ ಪ್ರೇರಣೆ ನೀಡುತ್ತಿದ್ದ. ಈ ನಡುವೆ ವಿಶ್ವ ಸಂಸ್ಥೆ ಕೂಡಾ ಆತನನ್ನು ಜಾಗತಿಕ ಟೆರರ್ ಫೈನಾನ್ಸರ್ ಎಂದು ಆತನನ್ನು ಘೋಷಿಸಿತ್ತು.
ಇಂಥ ದಾವೂದ್ ಇಬ್ರಾಹಿಂ 1986ರಲ್ಲೇ ಭಾರತವನ್ನು ಬಿಟ್ಟಿದ್ದ ಎಂದು ಅಲಿಶಾ ಪಾರ್ಕರ್ ಹೇಳಿದ್ದಾನೆ. ʻʻದಾವೂದ್ ಇಬ್ರಾಹಿಂ ಅವರು ನನಗೆ ಅಮ್ಮನ ಕಡೆಯಿಂದ ಮಾವ ಆಗ್ತಾರೆ. 1986ರ ತನಕ ಅವರು ದಕ್ಷಿಣ ಮುಂಬಯಿಯ ದಾಂಬರ್‌ವಾಲಾದಲ್ಲಿರುವ ಕಟ್ಟಡದ ನಾಲ್ಕನೇ ಮಹಡಿಯ ಮನೆಯಲ್ಲಿ ವಾಸವಾಗಿದ್ದರು. ಅವರು ಈಗ ಕರಾಚಿಯಲ್ಲಿದ್ದಾರೆ ಎಂಬುದು ನನಗೆ ನಾನಾ ಮೂಲಗಳು ಮತ್ತು ಕುಟುಂಬದವರಿಂದ ಗೊತ್ತಾಗಿದೆ,ʼʼ ಎಂದು ಆಲಿಶಾ ವಿವರ ನೀಡಿದ್ದಾನೆ.
ʻʻ1986ರಲ್ಲಿ ದಾವೂದ್ ಇಬ್ರಾಹಿಂ ಕರಾಚಿಗೆ ಹೋಗಿ ನೆಲೆಸಿದಾಗ ನಾನಿನ್ನೂ ಹುಟ್ಟಿರಲಿಲ್ಲ. ಈಗಲೂ ನನ್ನ ಕುಟುಂಬದವರು ಯಾರೂ ಅವರ ಜತೆಗೆ ನಿರಂತರ ಸಂಪರ್ಕದಲ್ಲಿಲ್ಲ. ಈದ್, ದೀಪಾವಳಿ ಮತ್ತು ಇತರ ಹಬ್ಬದ ಸಂದರ್ಭದಲ್ಲಿ ದಾವೂದ್ ಇಬ್ರಾಹಿಂ ಅವರ ಪತ್ನಿಯಾಗಿರುವ ಶ್ರೀಮತಿ ಮೆಹ್ಜಾಬೀನ್ ಅವರು ನನ್ನ ಪತ್ನಿ ಆಯೇಷಾ ಮತ್ತು ನನ್ನ ಸಹೋದರಿಯರಿಗೆ ಕರೆ ಮಾಡುತ್ತಾರೆ.. ನಾವೂ ಶುಭಾಶಯ ಹೇಳುತ್ತೇವೆ,ʼʼ ಎಂದು ಆತ ಹೇಳಿದ್ದಾನೆ.
ನಾನಾ ಕೋನಗಳಲ್ಲಿ ತನಿಖೆ
ದಾವೂದ್ ಇಬ್ರಾಹಿಂ ಎಲ್ಲಿದ್ದಾನೆ ಎಂಬ ಬಗ್ಗೆ ಭಾರತದ ತನಿಖಾ ಸಂಸ್ಥೆಗಳು ಮಾತ್ರವಲ್ಲ ಅಮೆರಿಕದ ಎಫ್‌ಬಿಐ ಸೇರಿದಂತೆ ಇದರ ಕೆಲವು ತನಿಖಾ ಸಂಸ್ಥೆಗಳೂ ಹುಡುಕಾಟ ನಡೆಸುತ್ತಿವೆ. ಆತ ಪಾಕಿಸ್ತಾನದಲ್ಲಿಲ್ಲ ಎಂದು ಕೆಲವು ಸಮಯದ ಹಿಂದೆ ಪಾಕಿಸ್ತಾನ ಹೇಳಿತ್ತು. ಆದರೆ, ಬಳಿಕ ಆತನ ಕರಾರುವಾಕ್ ಲೊಕೇಶನ್ ಬಗ್ಗೆ ಸುಳಿವು ನೀಡಿದಾಗ ಮೌನವಾಗಿತ್ತು. ಈಗಲೂ ಆತ ಕರಾಚಿಯಲ್ಲೇ ಇರುವುದು ಸಂಬಂಧಿಕನ ಹೇಳಿಕೆಯಿಂದ ಬಯಲಾಗಿದೆ. ಆದರೆ, ಆತನನ್ನು ಬಂಧಿಸಿ ಕರೆತರುವ ಬಗ್ಗೆ ಇನ್ನೂ ಯಾವುದೇ ಪ್ರಮುಖ ಹೆಜ್ಜೆಗಳನ್ನು ಇಡಲಾಗಿಲ್ಲ.
ದಾವೂದ್ ಇಬ್ರಾಹಿಂ ಮೇಲೆ ಭಾರತದಲ್ಲಿ ಹಲವಾರು ಪ್ರಕರಣಗಳಿವೆ. ಹಿಂದೆ ಹಲವಾರು ಉದ್ಯಮಿಗಳ ಸುಪಾರಿ ಕೊಲೆ ಮಾಡಿದ್ದು, ಸ್ಫೋಟ ಪ್ರಕರಣಗಳು ಆತನ ಕೊರಳು ಬಿಗಿಯಲಿದೆ. ಅದರ ಜತೆಗೆ ದೇಶದಲ್ಲಿ ಈಗ ದಾವೂದ್ ಸೇರಿದಂತೆ ಯಾವ ದೊಡ್ಡ ಗ್ಯಾಂಗ್‌ಸ್ಟರ್‌ಗಳ ಹವಾ ಕೂಡಾ ಇಲ್ಲ. ಬಹುತೇಕ ಎಲ್ಲ ಗ್ಯಾಂಗ್‌ಸ್ಟರ್‌ಗಳನ್ನು ಅವರ ಬಂಟರನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಬಲಿ ಪಡೆದಿದ್ದಾರೆ.
ಇದನ್ನೂ ಓದಿ| Underworld: ಭಯೋತ್ಪಾದನೆ ಚಟುವಟಿಕೆಗೆ ಚೋಟಾ ಶಕೀಲ್ ಫಂಡಿಂಗ್