ಮುಂಬೈ: ಭೂಗತ ಪಾತಕಿ, ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ (Dawood Ibrahim) ಆಸ್ತಿಯನ್ನು ಶುಕ್ರವಾರ (ಜನವರಿ 5) ಹರಾಜು (Auction) ಮಾಡಲಾಗಿದೆ. ರತ್ನಗಿರಿ ಜಿಲ್ಲೆಯ ಖೇದ್ ತಾಲೂಕಿನ ಖೇದ್ ಗ್ರಾಮದಲ್ಲಿರುವ ಎರಡು ಕೃಷಿ ಜಮೀನುಗಳನ್ನು ಹರಾಜು ಮಾಡಲಾಗಿದೆ. ಸುಮಾರು 171 ಚದರ ಮೀಟರ್ ಇರುವ ಭೂಮಿಗೆ 15,440 ರೂ. ಮೂಲ ಬೆಲೆ ನಿಗದಿಪಡಿಸಲಾಗಿತ್ತು. ಆದರೆ ಇದು 2 ಕೋಟಿ ರೂ.ಗೆ ಮಾರಾಟವಾಗಿದೆ. ಮತ್ತೊಂದು ನಿವೇಶನವು 3.28 ಲಕ್ಷ ರೂ.ಗೆ ಮಾರಾಟವಾಗಿದೆ.
ಖರೀದಿ ಮಾಡಿದ ಧೈರ್ಯವಂತ ಯಾರು?
ಭಾರತದಿಂದ ಪರಾರಿಯಾಗಿ ವರ್ಷಗಳೇ ಕಳೆದರೂ ದೇಶದಲ್ಲಿ ದಾವೂದ್ ಇಬ್ರಾಹಿಂ ಎಂದರೆ ಭಯಪಡುವವರು ಇದ್ದಾರೆ. ಇದೇ ಕಾರಣಕ್ಕಾಗಿಯೇ ಮಹಾರಾಷ್ಟ್ರದಲ್ಲಿರುವ ದಾವೂದ್ ಇಬ್ರಾಹಿಂ ಆಸ್ತಿಯನ್ನು ಖರೀದಿಸಲು ಹೆಚ್ಚಿನ ಜನ ಮುಂದೆ ಬರುವುದಿಲ್ಲ. ಆದರೆ, ದೆಹಲಿ ಮೂಲದ ವಕೀಲ ಅಜಯ್ ಶ್ರೀವಾಸ್ತವ್ ಎಂಬುವರು ಮೂಲ ಬೆಲೆಗಿಂತ 300 ಪಟ್ಟು ಹೆಚ್ಚು ಬೆಲೆಗೆ ದಾವೂದ್ ಇಬ್ರಾಹಿಂ ಆಸ್ತಿಯನ್ನು ಖರೀದಿಸಿದ್ದಾರೆ. ಆ ಮೂಲಕ ಭೂಗತ ಪಾತಕಿಯ ಆಸ್ತಿಯನ್ನು ಖರೀದಿಸಿದ ಧೈರ್ಯವಂತ ಎನಿಸಿದ್ದಾರೆ. ನಾಲ್ಕು ಆಸ್ತಿಗಳಲ್ಲಿ ಎರಡು ಆಸ್ತಿಗಳನ್ನು ಖರೀದಿಸಲು ಯಾರೂ ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ. ಸ್ಮಗ್ಲರ್ಸ್ ಆ್ಯಂಡ್ ಎಕ್ಸ್‌ಚೇಂಜ್ ಮ್ಯಾನಿಪುಲೇಟರ್ಸ್ ಆ್ಯಕ್ಟ್ 1976 ಅಡಿಯಲ್ಲಿ ದಾವೂದ್ ಇಬ್ರಾಹಿಂನ ಈ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
Lawyer pays 1,300x reserve price for Dawood mother's plot
— Sivakumar V (@veeyeskay) January 6, 2024
A Delhi lawyer has purchased two agricultural plots in the name of fugitive terrorist Dawood Ibrahim's mother Amina Bi, located in the Khed taluka of Ratnagiri district, for Rs 2.04 crore through an auction on Friday.… pic.twitter.com/wstRYBulHs
ಇಷ್ಟು ದುಡ್ಡು ಕೊಟ್ಟು ಖರೀದಿಸಿದ್ದೇಕೆ?
ಸಂಖ್ಯಾಶಾಸ್ತ್ರದ ಪ್ರಕಾರ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ದಾವೂದ್ ಇಬ್ರಾಹಿಂ ಆಸ್ತಿಯನ್ನು ಎರಡು ಕೋಟಿ ರೂ. ಕೊಟ್ಟು ಖರೀದಿಸಿದ್ದೇನೆ ಎಂದು ಅಜಯ್ ಶ್ರೀವಾಸ್ತವ್ ಹೇಳಿದ್ದಾರೆ. “ನನ್ನ ಜನ್ಮದಿನಾಂಕ, ಪ್ಲಾಟ್ ಸರ್ವೇ ನಂಬರ್ ಹಾಗೂ ನಾನು ನೀಡಲು ಮುಂದಾಗಿರುವ ಬೆಲೆಯು ಸಂಖ್ಯಾಶಾಸ್ತ್ರದ ಪ್ರಕಾರ ನನಗೆ ಅನುಕೂಲಕರವಾಗಿದೆ. ಹಾಗಾಗಿ, ಇಷ್ಟೊಂದು ಮೊತ್ತ ಕೊಟ್ಟು ಖರೀದಿಸಿದ್ದೇನೆ” ಎಂದು ಹೇಳಿದ್ದಾರೆ. 2020ರಲ್ಲಿಯೂ ದಾವೂದ್ ಇಬ್ರಾಹಿಂನ ಮನೆಯನ್ನು ಅಜಯ್ ಶ್ರೀವಾಸ್ತವ್ ಖರೀದಿಸಿದ್ದರು.
1993ರ ಮುಂಬೈ ಸ್ಫೋಟದಿಂದ ಹಿಡಿದು 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಸೇರಿದಂತೆ ಹಲವು ಘೋರ ಅಪರಾಧಗಳ ಮಾಸ್ಟರ್ ಮೈಂಡ್ ಈತ. ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳ ಸಾಗಣೆ, ನಕಲಿ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದ. ದಾವೂದ್ ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದು, ಭಾರತ ಮತ್ತು ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿವೆ. ಇಂಟರ್‌ಪೋಲ್‌ನ ರೆಡ್ ನೋಟಿಸ್ ಪಟ್ಟಿಯಲ್ಲಿಯೂ ಆತನ ಹೆಸರಿದ್ದು, ದಾವೂದ್ ತಲೆಗೆ 25 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಲಾಗಿದೆ.
ಇದನ್ನೂ ಓದಿ: Dawood Ibrahim: ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ; ಭಾರತದಲ್ಲಿ ಈತನ ಪಾತಕ ಕೃತ್ಯಗಳೇನು?
ದಾವೂದ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI) ಮತ್ತು ಭಯೋತ್ಪಾದಕ ಗುಂಪು ಲಷ್ಕರ್-ಎ-ತಯ್ಬಾ (Lashkar-e-Taiba)ದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ಅನೇಕ ನಕಲಿ ಪಾಸ್‌ಪೋರ್ಟ್ ಹೊಂದಿದ್ದಾನೆ ಮತ್ತು ಪದೇಪದೆ ತನ್ನ ವಾಸಸ್ಥಳವನ್ನು ಬದಲಾಯಿಸುತ್ತಾನೆ ಎಂದು ಊಹಿಸಲಾಗಿದೆ. ಈತ ಪಾಕಿಸ್ತಾನದ ಕರಾಚಿಯಲ್ಲಿ ಶೇಖ್ ದಾವೂದ್ ಹಸನ್ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದಷ್ಟೇ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಿಸಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ