Site icon Vistara News

Deepavali 2023: ಡೌನಿಂಗ್‌ ಸ್ಟ್ರೀಟ್‌ನಲ್ಲಿ ದೀಪಾವಳಿ ಆಚರಿಸಿಕೊಂಡ ರಿಷಿ ಸುನಕ್‌, ಅಕ್ಷತಾ ಮೂರ್ತಿ

deepavali rishi sunak

ಲಂಡನ್‌: ಜಗತ್ತಿನಾದ್ಯಂತ ವ್ಯಾಪಕವಾಗಿ ಆಚರಿಸಲಾಗುವ ಹಿಂದೂ ಹಬ್ಬವಾದ ದೀಪಾವಳಿಯನ್ನು (deepavali 2023) ಬ್ರಿಟನ್‌ ಪ್ರಧಾನ ಮಂತ್ರಿ ರಿಷಿ ಸುನಕ್ (UK PM Rishi Sunak) ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ Akshata Murty) ಪ್ರಧಾನಿಗಳ ಅಧಿಕೃತ ನಿವಾಸವಾದ 10 ಡೌನಿಂಗ್ ಸ್ಟ್ರೀಟ್‌ನಲ್ಲಿ (10 Downing Street) ಆಚರಿಸಿಕೊಂಡರು.

ದೀಪಾವಳಿ ನಿಮಿತ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ಡೌನಿಂಗ್ ಸ್ಟ್ರೀಟ್‌ನಲ್ಲಿ ಹಣತೆಗಳನ್ನು ಬೆಳಗಿಸಿದರು. ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಮತ್ತು ಪ್ರಪಂಚದಾದ್ಯಂತದ ಹಿಂದೂ ಸಮುದಾಯಕ್ಕೆ ಆಪ್ತವಾದ ಶುಭಾಶಯಗಳನ್ನು ಹೇಳಿದರು.

“ಇಂದು ರಾತ್ರಿ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ದೀಪಾವಳಿಗೆ ಮುಂಚಿತವಾಗಿ ಡೌನಿಂಗ್ ಸ್ಟ್ರೀಟ್‌ನಲ್ಲಿ ಹಿಂದೂ ಸಮುದಾಯದ ಅತಿಥಿಗಳನ್ನು ಸ್ವಾಗತಿಸಿದರು. ಇದು ಕತ್ತಲೆಯ ಮೇಲೆ ಬೆಳಕಿನ ವಿಜಯದ ಆಚರಣೆಯಾಗಿದೆ. ಈ ವಾರಾಂತ್ಯದಲ್ಲಿ ಹಬ್ಬ ಆಚರಿಸುತ್ತಿರುವ ಯುಕೆ ಮತ್ತು ಪ್ರಪಂಚದಾದ್ಯಂತದ ಎಲ್ಲರಿಗೂ ಶುಭ ದೀಪಾವಳಿ!” ಎಂದು ಸುನಕ್ ಅವರ ಕಚೇರಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದೆ. ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಸುನಕ್ ಮತ್ತು ಮೂರ್ತಿ ತಮ್ಮ ಅಧಿಕೃತ ನಿವಾಸದಲ್ಲಿ ಸಾಂಪ್ರದಾಯಿಕ ಹಣತೆಗಳನ್ನು ಬೆಳಗುತ್ತಿರುವ ಚಿತ್ರ ಜತೆಗಿದೆ.

ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತಿದ್ದು, ಹಿಂದೂಗಳಲ್ಲಿ ಆಳವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತೀಯರು ಎಲ್ಲೆಡೆ ಹೆಚ್ಚು ಉತ್ಸಾಹದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಕತ್ತಲೆಯ ಮೇಲೆ ಬೆಳಕಿನ, ಕೆಟ್ಟದ್ದರ ಮೇಲೆ ಒಳ್ಳೆಯದರ ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸೂಚಿಸುತ್ತದೆ.

ರಿಷಿ ಸುನಕ್ ಪಂಜಾಬಿ ಮೂಲ ಬೇರುಗಳನ್ನು ಹೊಂದಿರುವ ಹಿಂದೂ. ಹಿಂದೂ ಧರ್ಮದ ಸಾಂಪ್ರದಾಯಿಕ ಅಭ್ಯಾಸಗಳನ್ನು ಅವರು ಆಚರಿಸುತ್ತಾರೆ. ಅವರು ಜನಿಸಿದ ಸೌತಾಂಪ್ಟನ್‌ ನಗರದಲ್ಲಿರುವ ದೇವಾಲಯಕ್ಕೆ ನಿಯಮಿತ ಭೇಟಿ ನೀಡುತ್ತಾರೆ. ಜಿ 20 ಶೃಂಗಸಭೆಗಾಗಿ ಭಾರತಕ್ಕೆ ಇತ್ತೀಚೆಗೆ ಭೇಟಿ ನೀಡಿದಾಗ, ದಂಪತಿಗಳು ನವದೆಹಲಿಯ ಪ್ರಸಿದ್ಧ ಅಕ್ಷರಧಾಮ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

“ನಾನು ಹೆಮ್ಮೆಯ ಹಿಂದೂ. ನಾನು ಬೆಳೆದದ್ದು ಹೀಗೆಯೇ, ನಾನು ಹಾಗೆಯೇ ಇದ್ದೇನೆ. ನಾವು ರಕ್ಷಾಬಂಧನವನ್ನು ಆಚರಿಸುತ್ತೇವೆ. ನನ್ನ ಸಹೋದರಿ ಮತ್ತು ನನ್ನ ಸೋದರಸಂಬಂಧಿಯಿಂದ ರಾಖಿಗಳನ್ನು ನಾನು ಪಡೆಯುತ್ತೇನೆʼʼ ಎಂದು ರಿಷಿ ಸುನಕ್ ಹೇಳಿದ್ದಾರೆ.

ಇದನ್ನೂ ಓದಿ: Rishi Sunak: ಜಿ20 ಸಭೆ ಮಧ್ಯೆಯೇ ಅಕ್ಷರಧಾಮ ದೇಗುಲಕ್ಕೆ ರಿಷಿ ಸುನಕ್‌, ಅಕ್ಷತಾ ಮೂರ್ತಿ ಭೇಟಿ, ಪ್ರಾರ್ಥನೆ

Exit mobile version