ಮುಂಬೈ: ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು ಭಾರತದ ಪಾಲಿಗೆ ಹಲವು ದಿಸೆಯಲ್ಲಿ ಮಹತ್ವದ್ದಾಗಿತ್ತು. ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು, ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರವು ಆಸ್ಕರ್ ಪ್ರಶಸ್ತಿ ಪಡೆದವು. ಹಾಗೆಯೇ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಣೆ ಮಾಡಿದ್ದು ಗಮನ ಸೆಳೆಯಿತು. ಈಗ ದೀಪಿಕಾ ಪಡುಕೋಣೆ ಅವರು ಮಾಡಿದ ಭಾಷಣವು ರ‍್ಯಾಪ್ ಸಾಂಗ್ ಆಗಿ ಬದಲಾಗಿದೆ. ಈ ವಿಡಿಯೊ ಕೂಡ ವೈರಲ್ ಆಗಿದೆ.
ಹೌದು, ಕೆನಡಾದ ಡಿಜಿಯೊಬ್ಬರು ದೀಪಿಕಾ ಪಡುಕೋಣೆ ಅವರ ಭಾಷಣವನ್ನೇ ಟೋಟಲ್ ಬ್ಯಾಂಗರ್ (Total Banger) ಹೆಸರಿನಲ್ಲಿ ರ‍್ಯಾಪ್ ಸಾಂಗ್ ಆಗಿ ಮಾಡಿದ್ದಾರೆ. ಡಿಜೆಯನ್ನು ಸಿಕ್‌ಕಿಕ್ (SickKick) ಎಂಬುದಾಗಿ ಗುರುತಿಸಲಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ವಿಡಿಯೊ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಕ್ರಿಯೇಟಿವ್ ಕಂಟೆಂಟ್‌ಗಳಿಗೆ, ಸೃಜನಶೀಲ ಚಟುವಟಿಕೆಗಳಿಗೆ ಮಾನ್ಯತೆ ಸಿಗುತ್ತದೆ ಎಂಬುದಕ್ಕೆ ಇವರು ತೋರಿದ ಸೃಜನಶೀಲತೆಯೇ ಸಾಕ್ಷಿಯಾಗಿದೆ.
ಇಲ್ಲಿದೆ ದೀಪಿಕಾ ಭಾಷಣದ ರ‍್ಯಾಪ್ ಸಾಂಗ್
“ನಾನು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀಕ್ಷಿಸುತ್ತಿದ್ದೆ. ಇದೇ ವೇಳೆ ದೀಪಿಕಾ ಪಡುಕೋಣೆ ಅವರ ಅದ್ಭುತ ಭಾಷಣವನ್ನು ಕೇಳಿದೆ. ಇದರಿಂದ ಸ್ಫೂರ್ತಿಗೊಂಡು ರ‍್ಯಾಪ್ ಸಾಂಗ್ ಮಾಡಿದ್ದೇನೆ. ಅದರ ಹೆಸರು ಟೋಟಲ್ ಬ್ಯಾಂಗರ್” ಎಂದು ಸಿಕ್‌ಕಿಕ್ ಬರೆದುಕೊಂಡಿದ್ದಾರೆ. ಟೋಟಲ್ ಬ್ಯಾಂಗರ್ ಎಂಬ ಪದವನ್ನು ದೀಪಿಕಾ ಪಡುಕೋಣೆ ಅವರು ಭಾಷಣದಲ್ಲಿ ಬಳಸಿದ್ದರು. ಅದಕ್ಕೇ, ಡಿಜೆ ಅವರು ಹಿನ್ನೆಲೆ ಸಂಗೀತ ನೀಡಿ, ರ‍್ಯಾಪ್ ಸಾಂಗ್ ಮಾಡಿದ್ದಾರೆ.
ವಿಡಿಯೊ ಶೇರ್ ಮಾಡಿದ ದೀಪಿಕಾ
ಸಿಕ್‌ಕಿಕ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೊವನ್ನು ಖುದ್ದು ದೀಪಿಕಾ ಪಡುಕೋಣೆ ಅವರೇ ಇನ್‌ಸ್ಟಾಗ್ರಾಂ ಸ್ಟೋರಿಯಾಗಿ ಶೇರ್ ಮಾಡಿದ್ದಾರೆ. ರ‍್ಯಾಪ್ ಸಾಂಗ್‌ಗೆ ದೀಪಿಕಾ ಅಭಿಮಾನಿಗಳು ಖುಷಿಯಾಗಿದ್ದು, ಪ್ರತಿಕ್ರಿಯೆಗಳ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಘೋಷಣೆ ವೇಳೆ ದೀಪಿಕಾ ಪಡುಕೋಣೆ ಅವರು ಆರ್‌ಆರ್‌ಆರ್ ಸಿನಿಮಾ ಹಾಗೂ ನಾಟು ನಾಟು ಹಾಡಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಭಾಷಣದ ವಿಡಿಯೊ ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು.
ಅಲ್ಲದೆ, ದೀಪಿಕಾ ಪಡುಕೋಣೆ ಅವರು ಆಸ್ಕರ್ ವೇದಿಕೆ ಮೇಲೆ ನಿರೂಪಣೆ ಮಾಡುವಾಗ ಧರಿಸಿದ್ದ ಕ್ಲಾಸಿಕ್ ಕಪ್ಪು ಗೌನ್ ಬಗ್ಗೆಯೂ ಚರ್ಚೆಯಾಗಿತ್ತು. ದೀಪಿಕಾ ಅವರ ಧ್ವನಿ, ಸ್ಫುಟವಾಗಿ ಬಂದ ನುಡಿಗಳು, ಮನಮೋಹಕ ಉಡುಗೆಯು ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಈಗ ಅವರ ಭಾಷಣವೇ ಹಾಡಾಗಿ ಪರಿವರ್ತನೆಯಾಗಿದ್ದು ವಿಶೇಷವಾಗಿದೆ. ಅಷ್ಟೇ ಏಕೆ, ಆಸ್ಕರ್ ಪಾರ್ಟಿಯ ವೇಳೆ ದೀಪಿಕಾ ಧರಿಸಿದ್ದ ಉಡುಗೆಯೂ ಮನಮೋಹಕವಾಗಿತ್ತು ಎಂದು ಅವರ ಅಭಿಮಾನಿಗಳು ಹೇಳಿದ್ದರು.
ಇದನ್ನೂ ಓದಿ: Oscars 2023: ಆಸ್ಕರ್ ಪಾರ್ಟಿಯ ಬಳಿಕ ಶಾರ್ಟ್ ಪಿಂಕ್ ಡ್ರೆಸ್‌ನಲ್ಲಿ ಮಿಂಚಿದ ದೀಪಿಕಾ ಪಡುಕೋಣೆ