ಹೊಸದಿಲ್ಲಿ: ಮೂರು ಬಾರಿಯೂ ವಿಚಾರಣೆಗೆ ಗೈರು ಹಾಜರಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರಿಗೆ ನಾಲ್ಕನೇ ಬಾರಿಗೆ ತನಿಖೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ (Enforcement Directorate- ED) ನೋಟಿಸ್ ನೀಡಿದ. ಜನವರಿ 18ರಂದು ಹಾಜರಾಗುವಂತೆ ಸೂಚನೆ ನೀಡಿದೆ.
ದೆಹಲಿ ಅಬಕಾರಿ ನೀತಿ 2021-22ರಲ್ಲಿನ (Delhi excise policy 2021-22) ಅಕ್ರಮಗಳಿಗೆ ಸಂಬಂಧಿಸಿ ತನಿಖೆ ನಡೆಯುತ್ತಿದ್ದು, ದೆಹಲಿ ಮುಖ್ಯಮಂತ್ರಿಗೆ ಜಾರಿ ನಿರ್ದೇಶನಾಲಯ (ಇಡಿ) ಹೊಸ ಸಮನ್ಸ್ ಜಾರಿ ಮಾಡಿದೆ. ಕೇಜ್ರಿವಾಲ್ ಕಳೆದ ವಾರ ಇಡಿಯ ಮೂರನೇ ಸಮನ್ಸ್ ಅನ್ನೂ ಕೂಡ ಲೆಕ್ಕಿಸಿರಲಿಲ್ಲ. ಕೇಜ್ರಿವಾಲ್ ಅವರು ಹಿಂದಿನ ಮೂರು ಸಮನ್ಸ್ ಅನ್ನು ನಿರ್ಲಕ್ಷಿಸಿದ್ದಾರೆ. ಅವುಗಳನ್ನು “ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ” ಎಂದು ಕರೆದಿದ್ದಾರೆ.
EDಯ ಮೂರನೇ ಸಮನ್ಸ್‌ಗೆ ಕೇಜ್ರಿವಾಲ್ ಅವರು ನೀಡಿದ ಪ್ರತಿಕ್ರಿಯೆಯಲ್ಲಿ, “ಇದು ಕಾನೂನುಬಾಹಿರ ನಡೆ” ಎಂದು ಕರೆದಿದ್ದರು. “ತಾನು ತನಿಖೆಗೆ ಸಹಕರಿಸಲು ಸಿದ್ಧ. ಆದರೆ ಏಜೆನ್ಸಿಯ ಉದ್ದೇಶವು ತನ್ನನ್ನು ಬಂಧಿಸಿ ಲೋಕಸಭೆ ಚುನಾವಣಾ ಪ್ರಚಾರದಿಂದ ತಡೆಹಿಡಿಯುವುದಾಗಿದೆ” ಎಂದಿದ್ದಾರೆ. ಅಬಕಾರಿ ನೀತಿ ನಿರೂಪಣೆ ಅಂತಿಮಗೊಳ್ಳುವ ಮುನ್ನ ನಡೆದ ಸಭೆಗಳು ಮತ್ತು ಲಂಚದ ಆರೋಪದ ಕುರಿತು ಕೇಜ್ರಿವಾಲ್ ಅವರನ್ನು ಪ್ರಶ್ನಿಸುವ ಅಗತ್ಯವಿರುವುದಾಗಿ ಇಡಿ ಹೇಳಿದೆ.
ಚಾರ್ಜ್ ಶೀಟ್‌ನಲ್ಲಿ ಇಡಿ ಹೇಳಿದ್ದೇನು?
ಡಿಸೆಂಬರ್ 2, 2023ರಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಮತ್ತು ಅವರ ಸಹಾಯಕ ಸರ್ವೇಶ್ ಮಿಶ್ರಾ ಅವರನ್ನು ಹೆಸರಿಸಿ ಪ್ರಕರಣದಲ್ಲಿ ಸಲ್ಲಿಸಿದ ಆರನೇ ಚಾರ್ಜ್ ಶೀಟ್‌ನಲ್ಲಿ, ಎಎಪಿ ಅಬಕಾರಿ ನೀತಿ ಜಾರಿ ವೇಳೆ ಗಳಿಸಿದ ಕಿಕ್‌ಬ್ಯಾಕ್ ಲಂಚದಿಂದ ₹45 ಕೋಟಿ ಮೊತ್ತವನ್ನು 2022ರ ಗೋವಾ ಚುನಾವಣಾ ಪ್ರಚಾರಕ್ಕೆ ಬಳಸಿದೆ ಎಂದು ಇಡಿ ಹೇಳಿದೆ.
ಅಬಕಾರಿ ನೀತಿಯಲ್ಲಿ ಪಡೆದ ಲಂಚವನ್ನು ಗೋವಾ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಳಸಲಾಗಿದೆ ಎಂದು ಇಡಿ ಈ ಹಿಂದೆ ಆರೋಪಿಸಿದ್ದರೆ, ಕಿಕ್‌ಬ್ಯಾಕ್‌ನ ಮೊತ್ತವನ್ನು ಇಡಿ ಪ್ರಸ್ತಾಪಿಸಿರುವುದು ಇದೇ ಮೊದಲು. ಮೊದಲ ಬಾರಿಗೆ ಎಎಪಿ ಇದರ ನೇರ ಫಲಾನುಭವಿ ಎಂದು ಕರೆಯಲಾಗಿದೆ. ಎಎಪಿ ನೇರವಾಗಿ ಲಾಭ ಪಡೆದಿರುವುದರ ಸಾಕ್ಷ್ಯಗಳನ್ನು ಇಡಿ ತನ್ನ ಮುಂದಿನ ಚಾರ್ಜ್ ಶೀಟ್‌ನಲ್ಲಿ ಬಳಸಿಕೊಳ್ಳುವ ನಿರೀಕ್ಷೆಯಿದೆ.
ಅಬಕಾರಿ ನೀತಿಗೆ ಸಂಬಂಧಿಸಿದಂತೆ ಎಎಪಿ ನಾಯಕರಿಗೆ ಒಟ್ಟು ₹100 ಕೋಟಿ ಲಂಚ ನೀಡಲಾಗಿದೆ ಎಂದು ಇಡಿ ಹೇಳಿದೆ. ಡಿಸೆಂಬರ್ 2ರ ಚಾರ್ಜ್ ಶೀಟ್, ʼಕೆಲವು ಎಎಪಿ ನಾಯಕರು ಅಪರಾಧದ ಆದಾಯದಿಂದ ವೈಯಕ್ತಿಕವಾಗಿ ಲಾಭ ಪಡೆದಿದ್ದಾರೆʼ ಎಂದು ಆರೋಪಿಸಿದೆ. ಜೈಲಿನಲ್ಲಿರುವ ಎಎಪಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ₹2.2 ಕೋಟಿ, ಎಎಪಿ ಮಾಜಿ ಸಂವಹನ ಉಸ್ತುವಾರಿ ವಿಜಯ್ ನಾಯರ್‌ಗೆ ₹1.5 ಕೋಟಿ ಮತ್ತು ಸಿಂಗ್‌ಗೆ ₹2 ಕೋಟಿ ಲಂಚ ನೀಡಲಾಗಿದೆ- ಇವೆಲ್ಲವನ್ನೂ ಉದ್ಯಮಿ ದಿನೇಶ್ ಅರೋರಾ ಪಾವತಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Arvind Kejriwal: 3ನೇ ಬಾರಿಯೂ ಇ.ಡಿ ವಿಚಾರಣೆಗೆ ಕೇಜ್ರಿವಾಲ್ ಗೈರು, ಮುಂದೇನಾಗುತ್ತದೆ?