ಹೊಸದಿಲ್ಲಿ: ಪಂಜಾಬ್ ಹಾಗೂ ದೇಶದ ಇತರೆಡೆಗಳ ಪ್ರತಿಭಟನಾನಿರತ ರೈತರು ಇಂದು ದಿಲ್ಲಿಗೆ ಪಾದಯಾತ್ರೆ ನಡೆಸಲು (Delhi Farmers Protest, Delhi chalo) ಮುಂದಾಗಿದ್ದಾರೆ. ಕೇಂದ್ರ ಸಚಿವರ ಜೊತೆ ಐದು ಗಂಟೆಗಳ ಕಾಲ ರೈತ ನಾಯಕರು ನಡೆಸಿದ ಸಭೆಯಲ್ಲಿ (Farmers meeting) ಯಾವುದೇ ಸಕಾರಾತ್ಮಕ ಫಲಿತಾಂಶ ದೊರೆತಿಲ್ಲ. ರೈತರ ಪ್ರಮುಖ ಬೇಡಿಕೆಯಾದ ಬೆಳೆಗಳಿಗೆ ಗರಿಷ್ಠ ಬೆಂಬಲ ಬೆಲೆಯ (Maximum support price- MSP) ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ.
ಚಂಡೀಗಢದಲ್ಲಿ ಕೇಂದ್ರ ಸಚಿವರೊಂದಿಗೆ ರೈತರ ಸಭೆ ನಡೆಯಿತು. ಎರಡು ವರ್ಷಗಳ ಹಿಂದೆ ಕೃಷಿ ಕಾನೂನು ವಿರುದ್ಧ ಪ್ರತಿಭಟನೆಗಳ ನಂತರ ಇದೀಗ ಸಂಧಾನದ ಕೊನೆಯ ಪ್ರಯತ್ನ ಬಹುತೇಕ ಮಧ್ಯರಾತ್ರಿಯವರೆಗೆ ಮುಂದುವರೆಯಿತು. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಮತ್ತು ಕೃಷಿ ಸಚಿವ ಅರ್ಜುನ್ ಮುಂಡಾ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ರಾತ್ರಿ 11 ಗಂಟೆಯ ನಂತರ, ಎರಡೂ ಕಡೆಯವರು ವಿದ್ಯುತ್ ಕಾಯ್ದೆ 2020 ರದ್ದತಿ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಮತ್ತು ರೈತರ ಚಳವಳಿಯ ಸಂದರ್ಭದಲ್ಲಿ ರೈತರ ಮೇಲೆ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಒಪ್ಪಂದಕ್ಕೆ ಬಂದರು.
ಆದರೆ ಮೂರು ಪ್ರಮುಖ ಬೇಡಿಕೆಗಳ ಬಗ್ಗೆ ಒಮ್ಮತ ಮೂಡಲಿಲ್ಲ. ಅವು ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು, ರೈತರ ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ.
ಸಭೆ ಮುಗಿದ ನಂತರ, ʼದೆಹಲಿ ಚಲೋ’ ಮೆರವಣಿಗೆ ನಡೆಯಲಿದೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಸರ್ವಾನ್ ಸಿಂಗ್ ಪಂಧೇರ್ ಹೇಳಿದರು. “ಎರಡು ವರ್ಷಗಳ ಹಿಂದೆ ಸರ್ಕಾರವು ನಮ್ಮ ಅರ್ಧದಷ್ಟು ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತವಾಗಿ ಭರವಸೆ ನೀಡಿತ್ತು. ನಾವು ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಬಯಸಿದ್ದೇವೆ. ಆದರೆ ಸರ್ಕಾರವು ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ. ಅವರು ಸಮಯ ವ್ಯರ್ಥ ಮಾಡಲು ಬಯಸುತ್ತಿದ್ದಾರೆ” ಎಂದು ತಿಳಿಸಿದರು.
ಮೆರವಣಿಗೆ ದೆಹಲಿ ಪ್ರವೇಶಿಸದಂತೆ ತಡೆಯಲು ದೆಹಲಿ ಪೊಲೀಸರು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ. ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕ ಸಭೆಗಳು ನಡೆಸದಂತೆ, ಟ್ರ್ಯಾಕ್ಟರ್ ಮತ್ತು ಟ್ರಾಲಿಗಳು ನಗರಕ್ಕೆ ಪ್ರವೇಶಿಸದಂತೆ ಪೊಲೀಸರು ಒಂದು ತಿಂಗಳ ಕಾಲ ನಿಷೇಧ ಹೇರಿದ್ದಾರೆ.
ಈ ಪ್ರದೇಶಗಳಲ್ಲಿ ಬೃಹತ್ ಸಭೆಗಳನ್ನು ನಿಷೇಧಿಸುವ ನಿಷೇಧಾಜ್ಞೆಗಳನ್ನು ಘೋಷಿಸಲಾಗಿದೆ. ಹೆಚ್ಚಿನ ರಸ್ತೆಗಳನ್ನು ಕಾಂಕ್ರೀಟ್ ಬ್ಲಾಕ್‌ಗಳು ಮತ್ತು ಮುಳ್ಳುತಂತಿಗಳಿಂದ ಬ್ಯಾರಿಕೇಡ್ ಮಾಡಲಾಗಿದೆ. ವಾಣಿಜ್ಯ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಅಂಬಾಲಾ, ಜಿಂದ್, ಫತೇಹಾಬಾದ್, ಕುರುಕ್ಷೇತ್ರ ಮತ್ತು ಸಿರ್ಸಾ ಸೇರಿದಂತೆ ಹಲವು ಸ್ಥಳಗಳಲ್ಲಿ ಹರಿಯಾಣದ ಅಧಿಕಾರಿಗಳು ಪಂಜಾಬ್‌ನೊಂದಿಗೆ ರಾಜ್ಯದ ಗಡಿಯನ್ನು ಭದ್ರಪಡಿಸಿದ್ದಾರೆ. ಕಾಂಕ್ರೀಟ್ ಬ್ಲಾಕ್‌ಗಳು, ಕಬ್ಬಿಣದ ಮೊಳೆಗಳು, ಮುಳ್ಳುತಂತಿಗಳು, ಬ್ಯಾರಿಕೇಡ್ ಬಳಸಿ ರಸ್ತೆ ತಡೆಯಲಾಗಿದೆ. ಪ್ರತಿಭಟನಾಕಾರರನ್ನು ರಾಜ್ಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.
ಹರ್ಯಾಣವು ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿಯ ವಿರುದ್ಧ 2021ರ ಕಾನೂನನ್ನು ಜಾರಿ ಮಾಡಿದ್ದು, ಹಾನಿ ಎಸಗಿದ ಅಪರಾಧಿಗಳೇ ಪಾವತಿಸುವಂತೆ ಮಾಡಿದೆ. ರಾಜ್ಯ ಗೃಹ ಇಲಾಖೆಯು ಸಿವಿಲ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಎಚ್ಚರದಿಂದ ಇರುವಂತೆ ಸೂಚಿಸಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ʼದೆಹಲಿ ಚಲೋ’ ಮೆರವಣಿಗೆಯನ್ನು ಘೋಷಿಸಿವೆ. 2020-21ರಲ್ಲಿ ವರ್ಷವಿಡೀ ನಡೆದ ಆಂದೋಲನದ ನಂತರ ಸರ್ಕಾರ ಶರಣಾಗಿತ್ತು. ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿತ್ತು. ಇದೀಗ ರೈತರು ಮತ್ತೆ ಕಠಿಣ ನಿಲುವು ತೆಗೆದುಕೊಂಡಿದ್ದಾರೆ.
250ಕ್ಕೂ ಹೆಚ್ಚು ರೈತ ಸಂಘಗಳ ಸಂಯೋಜಿತ ವೇದಿಕೆಯಾಗಿರುವ ಕಿಸಾನ್ ಮಜ್ದೂರ್ ಮೋರ್ಚಾ ಮತ್ತು 150 ಒಕ್ಕೂಟಗಳ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಡಿಸೆಂಬರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದವು. ಪಂಜಾಬ್‌ನಿಂದ ಸಂಘಟಿತವಾದ ಪ್ರತಿಭಟನೆಯು ಸರ್ಕಾರಕ್ಕೆ ಎರಡು ವರ್ಷಗಳ ಹಿಂದೆ ನೀಡಿದ ಭರವಸೆಗಳನ್ನು ನೆನಪಿಸುವ ಉದ್ದೇಶ ಹೊಂದಿದೆ.