ಹೊಸದಿಲ್ಲಿ: ನಾಳೆ ರೈತರ ʼದಿಲ್ಲಿ ಚಲೋʼ (Delhi Farmers Protest, delhi chalo) ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಇಡೀ ದೆಹಲಿಯಲ್ಲಿ ಸೆಕ್ಷನ್ 144 (Section 144) ಜಾರಿಗೊಳಿಸಲಾಗಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಹೇಳಿದ್ದಾರೆ. ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ. ದಿಲ್ಲಿಗೆ ಬರುವ ಗಡಿ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಇಡೀ ದೆಹಲಿಯಲ್ಲಿ ಜಾರಿಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಫೆಬ್ರವರಿ 13ರಂದು ರೈತರ ಉದ್ದೇಶಿತ ʼದೆಹಲಿ ಚಲೋ’ ಮೆರವಣಿಗೆಗೆ ಮುಂಚಿತವಾಗಿ, ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಹೇಳಿದ್ದಾರೆ. ನೆರೆ ರಾಜ್ಯ ಹರಿಯಾಣದಲ್ಲೂ ಗಡಿ ಪ್ರದೇಶದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ.
ಸಂಭಾವ್ಯ ಅಶಾಂತಿ ಮತ್ತು ಭದ್ರತಾ ಸಮಸ್ಯೆಗಳ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮಾರ್ಚ್ 12ರವರೆಗೆ ರಾಷ್ಟ್ರ ರಾಜಧಾನಿಯಾದ್ಯಂತ ದೊಡ್ಡ ಸಭೆಗಳನ್ನು ನಿಷೇಧಿಸಿದ್ದಾರೆ. ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಹೊರಡಿಸಿದ ಆದೇಶದ ಪ್ರಕಾರ ರಾಷ್ಟ್ರ ರಾಜಧಾನಿಗೆ ರ್ಯಾಲಿಗಳು ಮತ್ತು ಟ್ರ್ಯಾಕ್ಟರ್‌ಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಬಂದೂಕು ಮುಂತಾದ ಆಯುಧಗ, ದಹಿಸುವ ಪದಾರ್ಥಗಳು, ಇಟ್ಟಿಗೆ ಮತ್ತು ಕಲ್ಲುಗಳಂತಹ ಆಯುಧಗಳು, ಪೆಟ್ರೋಲ್ ಕ್ಯಾನ್ ಅಥವಾ ಸೋಡಾ ಬಾಟಲಿಗಳನ್ನು ಸಂಗ್ರಹಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಧ್ವನಿವರ್ಧಕಗಳ ಬಳಕೆಯನ್ನು ಸಹ ನಿಷೇಧಿಸಲಾಗಿದೆ.
ಬೆಳೆಗಳಿಗೆ ಎಂಎಸ್‌ಪಿ ಖಾತರಿಪಡಿಸುವ ಕಾನೂನು ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರವನ್ನು ಒತ್ತಾಯಿಸಲು ರೈತರು ಫೆಬ್ರವರಿ 13ರಂದು ದೆಹಲಿಗೆ ಮೆರವಣಿಗೆ ಆಯೋಜಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಮಾತನಾಡಿ, ದೇಶಾದ್ಯಂತ 200ಕ್ಕೂ ಹೆಚ್ಚು ರೈತ ಸಂಘಗಳು ʼದೆಹಲಿ ಚಲೋ’ ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದಿದ್ದಾರೆ.
ರೈತ ಸಂಘಗಳ ʼದೆಹಲಿ ಚಲೋ’ ಮೆರವಣಿಗೆಗೆ ಮುಂಚಿತವಾಗಿ, ಹರಿಯಾಣ ಮತ್ತು ದೆಹಲಿಯ ಪೊಲೀಸರು ತಮ್ಮ ನೆರೆಯ ರಾಜ್ಯಗಳ ಗಡಿಗಳಲ್ಲಿ ಕಾಂಕ್ರೀಟ್ ಬ್ಲಾಕ್‌ಗಳು, ರಸ್ತೆ ಸ್ಪೈಕ್ ತಡೆಗಳು ಮತ್ತು ಮುಳ್ಳುತಂತಿಗಳನ್ನು ಹಾಕಿದ್ದು, ಆ ಮೂಲಕ ವಾಹನಗಳ ಪ್ರವೇಶವನ್ನು ತಡೆದಿದ್ದಾರೆ. ಸಾವಿರಾರು ಪೊಲೀಸರನ್ನು ನಿಯೋಜಿಸಿ ಗಡಿಯನ್ನು ಭದ್ರಪಡಿಸಲಾಗಿದೆ.
ಮೂವರು ಕೇಂದ್ರ ಸಚಿವರು- ಕಿರಿಯ ಕೃಷಿ ಸಚಿವ ಅರ್ಜುನ್ ಮುಂಡಾ, ಕಿರಿಯ ಗೃಹ ಸಚಿವ ನಿತ್ಯಾನಂದ ರೈ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ – ಇಂದು ರೈತ ಸಂಘಟನೆಗಳ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಫೆಬ್ರವರಿ 12ರಂದು ರೈತರ ಬೇಡಿಕೆಗಳ ಕುರಿತು ಚರ್ಚಿಸಲು ಕೇಂದ್ರವು ಅವರನ್ನು ಸಭೆಗೆ ಆಹ್ವಾನಿಸಿದೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಶನಿವಾರ ತಿಳಿಸಿದ್ದಾರೆ.
ತಡೆಯುವ ಪ್ರಯತ್ನ ನಡೆಯುತ್ತಿದೆ: ಕುರುಬೂರು ಶಾಂತಕುಮಾರ್
ನಾಳೆ ರೈತ ಸಂಘಟನೆಗಳು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆಗೆ ತಿರ್ಮಾನಿಸಿವೆ. ಭರವಸೆಗಳನ್ನು ನೀಡಿ ಒಂದು ವರ್ಷವಾದರೂ ಸರ್ಕಾರ ಬೇಡಿಕೆ ಈಡೇರಿಸಿಲ್ಲ. ರೈತರ ಸಾಲ ಮನ್ನಾ, ರೈತರಿಗೆ ಪಿಂಚಣಿ, ಬೆಂಬಲ ಬೆಲೆ ಕಾನೂನು, ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಮನವಿ ಮಾಡಿವೆ. ಕೇಂದ್ರ ಸರ್ಕಾರ ಈವರೆಗೂ ಬೇಡಿಕೆ ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆಗೆ ಕರೆ ನೀಡಿವೆ. ಆದರೆ ಪ್ರತಿಭಟನೆಗೂ ಮುನ್ನವೇ ರೈತರನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ನವದೆಹಲಿಯಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಪಾದಿಸಿದ್ದಾರೆ.
ದೆಹಲಿಗೆ ಆಗಮಿಸುವ ರೈತರನ್ನು ತಡೆಯಲಾಗುತ್ತಿದೆ. ಕರ್ನಾಟಕದಿಂದ ಆಗಮಿಸುತ್ತಿದ್ದ ನೂರಕ್ಕೂ ಅಧಿಕ ರೈತರನ್ನು ಭೂಪಾಲ್‌ನಲ್ಲಿ ಬಂಧಿಸಿದೆ. ರೈತರ ಮೇಲೆ ದಬ್ಬಾಳಿಕೆ ನಡೆಸಿದ್ದು, ನನ್ನ ಪತ್ನಿಯೂ ಸೇರಿ ಹಲವು ಮಹಿಳೆಯರು ಗಾಯಗೊಂಡಿದ್ದಾರೆ ಎಂದಿದ್ದಾರೆ.
ಇಂದು ಸಂಜೆ ಕೇಂದ್ರ ಸಚಿವರ ಜೊತೆಗೆ ಸಭೆ ನಡೆಯಲಿದೆ. ಸಭೆ ಬಳಿಕ ಹೋರಾಟದ ರೂಪುರೇಷೆ ಘೋಷಣೆಯಾಗಲಿದೆ. ಡಾ.ಸ್ವಾಮಿನಾಥನ್ ವರದಿಯಂತೆ ರೈತನ ಬೆಳೆಗೆ ಸೂಕ್ತ ಬೆಂಬಲ ಬೆಲೆ, ರೈತರಿಗೆ ಪಿಂಚಣಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂಬುದು ಬೇಡಿಕೆಗಳು ಎಂದರು.
ಇದನ್ನೂ ಓದಿ: Farmer’s Protest: ರೈತರನ್ನು ಬಂಧಿಸಿಡಲು ಜೈಲುಗಳಾಗಿ ಬದಲಾದ ಹರ್ಯಾಣದ ಬೃಹತ್ ಕ್ರೀಡಾಂಗಣಗಳು!