Site icon Vistara News

Delhi Farmers Protest: 6 ತಿಂಗಳ ಪಡಿತರ ತೆಗೆದುಕೊಂಡು ಪ್ರತಿಭಟನೆಗೆ ಹೊರಟ ರೈತರು

delhi protest

delhi protest

ನವದೆಹಲಿ: ದೇಶ ಮತ್ತೊಂದು ಬೃಹತ್‌ ರೈತ ಪ್ರತಿಭಟನೆಗೆ ಸಾಕ್ಷಿಯಾಗಿದೆ (Delhi Farmers Protest). ದೆಹಲಿ ಪ್ರವೇಶಿಸದಂತೆ ಗಡಿಗಳನ್ನು ಮುಚ್ಚಲಾಗಿರುವುದರಿಂದ ತಿಂಗಳುಗಳವರೆಗೆ ಸಾಕಾಗುವಷ್ಟು ಪಡಿತರ ಮತ್ತು ಡೀಸೆಲ್ ಅನ್ನು ಹೊತ್ತುಕೊಂಡೇ ರೈತರು ಮೆರವಣಿಗೆ ನಡೆಸುತ್ತಿದ್ದಾರೆ. ಸಾವಿರಾರು ರೈತರು ದೀರ್ಘ ಪ್ರಯಾಣಕ್ಕೆ ಸಿದ್ಧರಾಗಿಯೇ ಆಗಮಿಸಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಮೂಲಗಳು ತಿಳಿಸಿವೆ. ಬೆಳೆಗಳಿಗೆ ಗರಿಷ್ಠ ಬೆಂಬಲ ಬೆಲೆ  (Maximum support price- MSP) ಒದಗಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಸುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು 2020ರಲ್ಲಿ ನಡೆದ ರೈತ ಪ್ರತಿಭಟನೆಯ ಮುಂದುವರಿದ ಭಾಗ ಎಂದೇ ಪರಿಗಣಿಸಲಾಗಿದೆ. ಅಂದು ರೈತರು ಸುಮಾರು 13 ತಿಂಗಳುಗಳ ಕಾಲ ಗಡಿಗಳಲ್ಲಿ ಕ್ಯಾಂಪ್ ಹೂಡಿದ್ದರು.

ತಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ತಿಳಿಸಿದ್ದಾರೆ. “ಸೂಜಿಯಿಂದ ಸುತ್ತಿಗೆಯವರೆಗೆ, ಕಲ್ಲುಗಳನ್ನು ಒಡೆಯುವ ಉಪಕರಣಗಳು ಸೇರಿದಂತೆ ನಮ್ಮ ಟ್ರಾಲಿಗಳಲ್ಲಿ ಬೇಕಾದ ಎಲ್ಲ ವಸ್ತುಗಳನ್ನು ತೆಗೆದುಕೊಂಡಿದ್ದೇವೆ. ನಾವು ಆರು ತಿಂಗಳ ಪಡಿತರದೊಂದಿಗೆ ನಮ್ಮ ಊರಿನಿಂದ ಹೊರಟಿದ್ದೇವೆ. ಹರ್ಯಾಣದ ನಮ್ಮ ಸಹೋದರರಿಗೂ ಬೇಕಾದಷ್ಟು ಡೀಸೆಲ್‌ ನಮ್ಮಲ್ಲಿ ಇದೆ” ಎಂದು ಪಂಜಾಬ್‌ನ ಗುರುದಾಸ್ಪುರದ ರೈತ ಹರ್ಭಜನ್ ಸಿಂಗ್ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತ ತಿಳಿಸಿದ್ದಾರೆ.

2020ರ ರೈತರ ಪ್ರತಿಭಟ ಭಾಗನೆಯಲ್ಲಿಯೂ ಭಾಗವಹಿಸಿದ್ದೆ ಎಂದು ಹೇಳಿದ ಸಿಂಗ್, ತಮ್ಮ ಬೇಡಿಕೆಗಳು ಈಡೇರುವವರೆಗೂ ಈ ಬಾರಿ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದ್ದಾರೆ. “ಕಳೆದ ಬಾರಿ ನಾವು 13 ತಿಂಗಳುಗಳ ಕಾಲ ಪ್ರತಿಭಟನೆಯಿಂದ ಹಿಂದೆ ಸರಿದಿರಲಿಲ್ಲ. ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಹಿಂದೆ ಸರಿದಿದ್ದೆವು. ಆದರೆ ಸರ್ಕಾರವು ತನ್ನ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ. ಈ ಬಾರಿ ನಮ್ಮ ಎಲ್ಲ ಬೇಡಿಕೆಗಳು ಈಡೇರಿದ ನಂತರವೇ ನಾವು ಅಲ್ಲಿಂದ ತೆರಳುತ್ತೇವೆ” ಎಂದು ಅವರು ಪಂಜಾಬ್-ಹರ್ಯಾಣ ಗಡಿಯಿಂದ ದೆಹಲಿಯ ಕಡೆಗೆ ತೆರಳುತ್ತಾ ಅವರು ತಿಳಿಸಿದ್ದಾರೆ.

ಅಶ್ರುವಾಯು ಪ್ರಯೋಗ

ಈ ಮಧ್ಯೆ ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ ಮತ್ತಿತರ ಕಡೆಯ ರೈತರು 25 ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್‌ ಮೂಲಕ ಆಗಮಿಸುತ್ತಿರುವುದನ್ನು ತಡೆಯಲು ಶಂಭು ಗಡಿಯಲ್ಲಿ ಅಶ್ರು ವಾಯು ಪ್ರಯೋಗಿಸಲಾಗಿದೆ. ರೈತರ ಮೇಲೆ ಪೊಲೀಸರು ಟಿಯರ್‌ ಗ್ಯಾಸ್‌ ಬಳಸಿದ್ದಾರೆ. ದೆಹಲಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಶಂಭು ಗಡಿಯ ದೃಶ್ಯಾವಳಿಗಳಿಂದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ರೈತರನ್ನು ಚದುರಿಸಲು ಡ್ರೋನ್‌ಗಳಿಂದ ಹೊಗೆ ಬಾಂಬ್‌ಗಳನ್ನು (smoke bombs) ಎಸೆಯುತ್ತಿರುವುದು ಕಂಡು ಬಂದಿದೆ. ಸುಮಾರು 200 ರೈತ ಸಂಘಟನೆಗಳು ಕರೆ ನೀಡಿದ ಈ ದೆಹಲಿ ಚಲೋ ಪ್ರತಿಭಟನೆಯಲ್ಲಿ ಸುಮಾರು ಒಂದು ಲಕ್ಷ ರೈತರು ಪಾಲ್ಗೊಂಡಿದ್ದಾರೆ.

ಮೆರವಣಿಗೆ ದೆಹಲಿ ಪ್ರವೇಶಿಸದಂತೆ ತಡೆಯಲು ದೆಹಲಿ ಪೊಲೀಸರು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ. ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕ ಸಭೆಗಳು ನಡೆಸದಂತೆ, ಟ್ರ್ಯಾಕ್ಟರ್ ಮತ್ತು ಟ್ರಾಲಿಗಳು ನಗರಕ್ಕೆ ಪ್ರವೇಶಿಸದಂತೆ ಪೊಲೀಸರು ಒಂದು ತಿಂಗಳ ಕಾಲ ನಿಷೇಧ ಹೇರಿದ್ದಾರೆ. ಈ ಪ್ರದೇಶಗಳಲ್ಲಿ ಬೃಹತ್ ಸಭೆಗಳನ್ನು ನಿಷೇಧಿಸುವ ನಿಷೇಧಾಜ್ಞೆಗಳನ್ನು ಘೋಷಿಸಲಾಗಿದೆ. ಹೆಚ್ಚಿನ ರಸ್ತೆಗಳನ್ನು ಕಾಂಕ್ರೀಟ್ ಬ್ಲಾಕ್‌ಗಳು ಮತ್ತು ಮುಳ್ಳುತಂತಿಗಳಿಂದ ಬ್ಯಾರಿಕೇಡ್ ಮಾಡಲಾಗಿದೆ. ವಾಣಿಜ್ಯ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: Delhi Farmers Protest: ಬಗೆಹರಿಯದ ಮಾತುಕತೆ, ಇಂದು ರೈತರ ದಿಲ್ಲಿ ಚಲೋ: ಪೊಲೀಸ್‌ ಭದ್ರಕೋಟೆಯಾದ ರಾಜಧಾನಿ

ಅಂಬಾಲಾ, ಜಿಂದ್, ಫತೇಹಾಬಾದ್, ಕುರುಕ್ಷೇತ್ರ ಮತ್ತು ಸಿರ್ಸಾ ಸೇರಿದಂತೆ ಹಲವು ಸ್ಥಳಗಳಲ್ಲಿ ಹರಿಯಾಣದ ಅಧಿಕಾರಿಗಳು ಪಂಜಾಬ್‌ನೊಂದಿಗೆ ರಾಜ್ಯದ ಗಡಿಯನ್ನು ಭದ್ರಪಡಿಸಿದ್ದಾರೆ. ಕಾಂಕ್ರೀಟ್ ಬ್ಲಾಕ್‌ಗಳು, ಕಬ್ಬಿಣದ ಮೊಳೆಗಳು, ಮುಳ್ಳುತಂತಿಗಳು, ಬ್ಯಾರಿಕೇಡ್ ಬಳಸಿ ರಸ್ತೆ ತಡೆಯಲಾಗಿದೆ. ಪ್ರತಿಭಟನಾಕಾರರನ್ನು ರಾಜ್ಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version