Site icon Vistara News

Omar Abdullah: ಒಮರ್‌ ಅಬ್ದುಲ್ಲ: ನಿನ್ನೆ ಕಾಶ್ಮೀರ ದೊರೆಯಲಿಲ್ಲ; ಇಂದು ಪತ್ನಿಯಿಂದ ಡೈವೋರ್ಸೂ ಸಿಗಲಿಲ್ಲ!

omar abdullah payal

ಹೊಸದಿಲ್ಲಿ: ನಿನ್ನೆ ಆರ್ಟಿಕಲ್‌ 370 (Article 370) ಕುರಿತ ಸುಪ್ರೀಂ ಕೋರ್ಟ್‌ (Supreme court) ಐತಿಹಾಸಿಕ ತೀರ್ಪಿನಲ್ಲಿ ಸರ್ಕಾರದ ಪ್ರತಿವಾದಿಗಳಲ್ಲಿ ಒಬ್ಬರಾಗಿದ್ದ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ (Omar Abdullah), ತೀರ್ಪಿನಿಂದ ನಿರಾಶೆಗೆ ಒಳಗಾಗಿದ್ದರು. ಇಂದು ಕೂಡ ಅವರಿಗೆ ಕೋರ್ಟ್‌ನಿಂದ ಇನ್ನೊಂದು ನಿರಾಶೆ ಅಪ್ಪಳಿಸಿದೆ. ಪತ್ನಿಯಿಂದ ತನಗೆ ವಿಚ್ಛೇದನ ಕೊಡಿಸಬೇಕು ಎಂದು ಒಮರ್‌ ಅಬ್ದುಲ್ಲಾ ಮಾಡಿದ್ದ ಮನವಿಯನ್ನು ದಿಲ್ಲಿ ಹೈಕೋರ್ಟ್‌ (Delhi High Court) ತಿರಸ್ಕರಿಸಿದೆ. ಮಾತ್ರವಲ್ಲದೆ ಮಾಸಿಕ 1.50 ಲಕ್ಷ ರೂ. ಮಧ್ಯಂತರ ನಿರ್ವಹಣೆ ವೆಚ್ಚ ನೀಡುವಂತೆ ಕೆಳಗಿನ ಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

“ಪತ್ನಿ ಪಾಯಲ್‌ ತನ್ನಿಂದ ದೂರವಾಗಿ ಕ್ರೌರ್ಯ ಎಸಗಿದ್ದಾರೆʼʼ ಎಂಬ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ನಾಯಕನ ವಾದವನ್ನು ಕೋರ್ಟ್‌ ತಳ್ಳಿಹಾಕಿದ್ದು, ಈ ವಾದಕ್ಕೆ ಯಾವುದೇ ಆಧಾರವಿಲ್ಲ ಎಂದು ಸಾರಿದೆ. ಸಂಜೀವ್ ಸಚ್‌ದೇವ ಮತ್ತು ವಿಕಾಸ್ ಮಹಾಜನ್ ನೇತೃತ್ವದ ನ್ಯಾಯಪೀಠ, ವಿಚ್ಛೇದನ ನಿರಾಕರಿಸಿದ ಕೆಳ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಲೋಪವಿಲ್ಲ ಎಂದು ಹೇಳಿ ಮನವಿಯನ್ನು ತಿರಸ್ಕರಿಸಿತು.

ಒಮರ್‌ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಗೆ ತಿಂಗಳಿಗೆ 1,50,000 ರೂಪಾಯಿಗಳ “ಮಧ್ಯಂತರ ನಿರ್ವಹಣೆ” ಪಾವತಿಸುವಂತೆ ಅವರಿಗೆ ನ್ಯಾಯಾಲಯವು ಈ ಹಿಂದೆ ನಿರ್ದೇಶಿಸಿತ್ತು. ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರ ಏಕಸದಸ್ಯ ಪೀಠವು ಆಗಸ್ಟ್‌ನಲ್ಲಿ “ಒಮರ್ ತಮ್ಮ ಮಕ್ಕಳನ್ನು ತ್ಯಜಿಸಲು ಸಾಧ್ಯವಿಲ್ಲ, ಮತ್ತು ತಂದೆಯಾಗಿ ತಮ್ಮ ಕರ್ತವ್ಯಗಳನ್ನು ತ್ಯಜಿಸಬಾರದು” ಎಂದು ಹೇಳಿತ್ತು.

“ಒಮರ್ ಅಬ್ದುಲ್ಲಾ ಆರ್ಥಿಕ ಸಾಮರ್ಥ್ಯವನ್ನು ಪರಿಶೀಲಿಸಿ, ಅವರ ಹೆಂಡತಿ ಮತ್ತು ಮಕ್ಕಳಿಗೆ ಅವರು ಈ ಹಿಂದೆ ಅನುಭವಿಸಿದ ಜೀವನ ಮಟ್ಟಕ್ಕೆ ಅನುಗುಣವಾದ ಜೀವನ ಮಟ್ಟವನ್ನು ಒದಗಿಸಲು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಯಾವುದೇ ಕಾರಣಕ್ಕೂ ಪಾಯಲ್ ಅಬ್ದುಲ್ಲಾ ಅವರಿಗೆ ನೀಡಲಾದ ನಿರ್ವಹಣೆ ಮೊತ್ತವನ್ನು ಕಡಿತ ಮಾಡಬಾರದು. ಮಧ್ಯಂತರ ನಿರ್ವಹಣೆ ಮೊತ್ತವನ್ನು ತಿಂಗಳಿಗೆ 75,000ದಿಂದ ರೂ 1,50,000ಕ್ಕೆ ಹೆಚ್ಚಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದರು.

ಪಾಯಲ್‌ ತುಂಬಾ ದುಂದುವೆಚ್ಚ ಮಾಡುತ್ತಾಳೆ. ಹೀಗಾಗಿ ತಾನು ಜೀವನಾಂಶ ಕೊಡಬೇಕಿಲ್ಲ ಎಂದು ಒಮರ್‌ ವಾದಿಸಿದ್ದರು. ಆದರೆ ಒಮರ್‌ ತಂದೆಯಾಗಿ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅವರ ಮಕ್ಕಳು ಭಿಕಾರಿಗಳಂತೆ ಜೀವನ ಸಾಗಿಸುತ್ತಿದ್ದಾರೆ ಎಂದು ಪಾಯಲ್‌ ದೂರಿದ್ದರು. ತಿಂಗಳಿಗೆ 10 ಲಕ್ಷ ನಿರ್ವಹಣೆ ವೆಚ್ಚವನ್ನು ಕೋರಿದ್ದರು. ಪ್ರಸ್ತುತ ಪಾಯಲ್‌ ತಮ್ಮ ತಂದೆಯ ಜೊತೆಗೆ ದೆಹಲಿಯಲ್ಲಿದ್ದಾರೆ. ಪಾಯಲ್‌ ಆರ್ಥಿಕವಾಗಿ ದುರ್ಬಲಳಲ್ಲ. ತನ್ನ ಹೆಸರಿನಲ್ಲಿ ಮೂರು ಕಂಪನಿಗಳನ್ನು ಹೊಂದಿದ್ದಾರೆ ಎಂದು ಒಮರ್‌ ವಾದಿಸಿದ್ದರು. ಆದರೆ ಈ ಕಂಪನಿಗಳನ್ನು ಆರಂಭಿಸಿದ್ದೇ ಒಮರ್‌ ಎಂದು ನಂತರ ಗೊತ್ತಾಗಿತ್ತು.

ಪಾಯಲ್ ಅವರು ದೆಹಲಿಯ ಒಬೆರಾಯ್ ಹೋಟೆಲ್‌ನಲ್ಲಿ ಉದ್ಯೋಗಿಯಾಗಿದ್ದಾಗ ಒಮರ್‌ ಅವರನ್ನು ಭೇಟಿಯಾಗಿದ್ದರು. ಒಮರ್ ಆ ಸಮಯದಲ್ಲಿ ಅದೇ ಹೋಟೆಲ್ ಸರಪಳಿಯಲ್ಲಿ ಯುವ ಮಾರ್ಕೆಟಿಂಗ್ ವೃತ್ತಿಪರರಾಗಿದ್ದರು. ಅವರಿಬ್ಬರೂ 1994ರ ಸೆಪ್ಟೆಂಬರ್ 1ರಂದು ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ವಿವಾಹವಾದರು. ಅವರಿಗೆ ಜಹೀರ್ ಮತ್ತು ಜಮೀರ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ಪಾಯಲ್ ಪಾಕಿಸ್ತಾನದ ಲಾಹೋರ್‌ ಮೂಲದ, ನಂತರ ದೆಹಲಿ ವಾಸಿಯಾದ ಕುಟುಂಬದವರು. ಆಕೆಯ ತಂದೆ ಮೇಜರ್ ಜನರಲ್ ರಾಮ್‌ನಾಥ್ ಅವರು ಸೇನಾ ಅಧಿಕಾರಿಯಾಗಿದ್ದರು. ಅಂದ ಹಾಗೆ, ಒಮರ್ ಅಬ್ದುಲ್ಲಾ ಅವರ ಸಹೋದರಿ ಸಾರಾ ಅಬ್ದುಲ್ಲಾ ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪತ್ನಿ.

ಇದನ್ನೂ ಓದಿ: Article 370 : ಮುಫ್ತಿ, ಒಮರ್​ಗೆ ಗೃಹಬಂಧನ? ಆರೋಪ ನಿರಾಕರಿಸಿದ ಎಲ್​ಜಿ

Exit mobile version