Site icon Vistara News

ಗರ್ಭಪಾತಕ್ಕೆ ಅವಕಾಶ ಕೊಡಲ್ಲ, ಬೇಕಿದ್ದರೆ ಮಗುವಿನ ಪಾಲನೆಗೆ ಹಣ ಕೊಡಲೂ ಸಿದ್ಧ ಎಂದ ದಿಲ್ಲಿ ಹೈಕೋರ್ಟ್‌ ಸಿಜೆ

Batla House Encounter, Ariz khan death sentence reduced to life term by Delhi HC

ನವ ದೆಹಲಿ: ಯಾವ ಕಾರಣಕ್ಕೂ ೨೩ ವಾರಗಳ ಗರ್ಭವನ್ನು ಅಂತ್ಯಗೊಳಿಸಲು ಅವಕಾಶ ನೀಡಲಾಗದು. ಇದು ಶಿಶು ಹತ್ಯೆಗೆ ಸಮಾನ. ಒಂದು ವೇಳೆ ಅವಶ್ಯಕತೆ ಇದ್ದರೆ ಮಗುವನ್ನು ಬೆಳೆಸಲು ನಾನೇ ಹಣ ಕೊಡಲೂ ಸಿದ್ಧನಿದ್ದೇನೆ: ಈ ಮಾತನ್ನು ಹೇಳಿದ್ದು ಬೇರೆ ಯಾರೂ ಅಲ್ಲ, ದಿಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮ.

ಕಳೆದ ಶುಕ್ರವಾರ ಸಿಜೆ ಸತೀಶ್ಚಂದ್ರ ಶರ್ಮ ಮತ್ತು ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ಒಂದು ವಿಚಿತ್ರವಾದ ಪ್ರಕರಣ ಬಂದಿತ್ತು. ಆಕೆ ೨೫ ವರ್ಷದ ಅವಿವಾಹಿತ ಮಹಿಳೆ. ಸಮ್ಮತಿಯ ಲೈಂಗಿಕ ಸಂಪರ್ಕದಿಂದಲೇ ಆಕೆ ಗರ್ಭ ಧರಿಸಿದ್ದಾರೆ. ಈಗ ಆಕೆ ೨೩ ವಾರಗಳ ಗರ್ಭಿಣಿ. ನನಗೆ ಮಗು ಬೇಡವೇ ಬೇಡ, ಗರ್ಭಪಾತಕ್ಕೆ ಅವಕಾಶ ನೀಡಬೇಕು ಎನ್ನುವುದು ಆಕೆಯ ಬೇಡಿಕೆ. ಕೆಲವೊಂದು ಪ್ರಮುಖ ಪ್ರಕರಣಗಳಲ್ಲಿ ೨೪ ವಾರಗಳವರೆಗೂ ಗರ್ಭಪಾತಕ್ಕೆ ಅವಕಾಶವಿದೆ. ಅದನ್ನು ಬಳಸಿಕೊಂಡು ತನಗೂ ನ್ಯಾಯ ಕೊಡಿಸಿ ಎಂದು ಆಕೆ ವಕೀಲರ ಮೂಲಕ ಕೇಳಿಕೊಂಡಿದ್ದಾರೆ. ಅದರೆ, ಹೈಕೋರ್ಟ್‌ ಅನುಮತಿ ನಿರಾಕರಿಸಿದೆ.

ಸಮ್ಮತಿಯ ಲೈಂಗಿಕ ಸಂಬಂಧದಿಂದ ಗರ್ಭಿಣಿಯಾಗುವ ಅವಿವಾಹಿತ ಮಹಿಳೆಗೆ ವೈದ್ಯಕೀಯ ಗರ್ಭಪಾತ ನಿಯಮಗಳ ಪ್ರಕಾರ 20 ವಾರ ಮೀರಿದ ಗರ್ಭವನ್ನು ಅಂತ್ಯಗೊಳಿಸಲು ಅನುಮತಿ ಇಲ್ಲ ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿತು.

ವೈದ್ಯಕೀಯ ಗರ್ಭಪಾತ ನಿಯಮಾವಳಿ 2003ರ ಸೆಕ್ಷನ್‌ ೩(೨)(ಬಿ) ಪ್ರಕಾರ, ಅತ್ಯಾಚಾರ ಸಂತ್ರಸ್ತರು, ಅಪ್ರಾಪ್ತ ವಯಸ್ಕರು, ಗರ್ಭಾವಸ್ಥೆಯಲ್ಲಿ ವೈವಾಹಿಕ ಸ್ಥಿತಿ ಬದಲಾದ ಮಹಿಳೆಯರು, ಮಾನಸಿಕ ಅಸ್ವಸ್ಥೆಯರು ಅಥವಾ ಭ್ರೂಣದ ವಿರೂಪತೆ ಇರುವ ಮಹಿಳೆಯರು ಮಾತ್ರ 24 ವಾರಗಳ ಗರ್ಭ ಅಂತ್ಯಗೊಳಿಸಲು ಅನುಮತಿಸಲಾಗಿದೆ.

ಆದರೆ, ಸಮ್ಮತಿಯ ಲೈಂಗಿಕ ಕ್ರಿಯೆಯಿಂದ ಗರ್ಭಿಣಿಯಾದ ಮಹಿಳೆ ೨೦ ವಾರಗಳ ಒಳಗೆ ಮಾತ್ರ ಗರ್ಭಪಾತ ಮಾಡಿಸಲು ಅವಕಾಶವಿರುತ್ತದೆ. ಅದಕ್ಕಿಂತ ಹೆಚ್ಚಾದರೆ ಅವಕಾಶವಿಲ್ಲ. ನ್ಯಾಯಾಲಯವೂ ನಿಯಮಾವಳಿಯನ್ನು ಮೀರುವಂತಿಲ್ಲ ಎಂದು ವಿಭಾಗೀಯ ಪೀಠ ಹೇಳಿತು.
ಹಾಗಂತ ನ್ಯಾಯಾಲಯವು ಅರ್ಜಿಯನ್ನು ಸಂಪೂರ್ಣ ತಳ್ಳಿ ಹಾಕಿಲ್ಲ. ಆಗಸ್ಟ್ 26 ರೊಳಗೆ ಅರ್ಜಿಯ ಬಗ್ಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ದೆಹಲಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದೆ. ಆದರೆ, ಒಂದೊಮ್ಮೆ ಈ ಹಂತದಲ್ಲಿ ಮಹಿಳೆಯ ಪರವಾಗಿ ಅಭಿಪ್ರಾಯ ಬಂದರೂ ಗರ್ಭಪಾತ ಮಾಡಿಸಲು ಅವಕಾಶ ಸಿಗುವುದಿಲ್ಲ. ಯಾಕೆಂದರೆ ಅಷ್ಟು ಹೊತ್ತಿಗೆ ಗರ್ಭದಲ್ಲಿರುವ ಮಗುವಿಗೆ ೨೯ ವಾರ ದಾಟಿರುತ್ತದೆ.

ದತ್ತು ಕೊಡಬಹುದಲ್ವಾ?
೨೩ನೇ ವಾರದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡುವುದು ಮಗುವನ್ನು ಕೊಲ್ಲುವುದಕ್ಕೆ ಸಮಾನ ಎಂದು ಹೇಳಿದ ಕೋರ್ಟ್‌, ಮಗುವನ್ನು ಯಾಕೆ ಕೊಲ್ಲುತ್ತೀರಿ? ದತ್ತು ಕೊಡಬಹುದಲ್ವಾ ಎಂದು ಕೇಳಿದೆ. ಮಕ್ಕಳನ್ನು ದತ್ತು ಪಡೆಯಲು ಸಾಕಷ್ಟು ಜನರು ಕಾಯುತ್ತಿದ್ದಾರೆ. ಹೀಗಿರುವಾಗ ಅವರಿಗಾದರೂ ಕೊಡಿ ಎಂದಿತು ಪೀಠ.

ಸತೀಶ್ಚಂದ್ರ ಶರ್ಮ

ನಾವು ಮಹಿಳೆಯೇ ಮಗುವನ್ನು ಸಾಕಬೇಕು ಎಂದೂ ಹೇಳುವುದಿಲ್ಲ. ಸರಕಾರ ಇಲ್ಲವೇ ಆಸ್ಪತ್ರೆಗಳಲ್ಲೂ ಇದಕ್ಕೆ ವ್ಯವಸ್ಥೆ ಇದೆ. ಒಂದೊಮ್ಮೆ ಸರಕಾರದಿಂದ ಹಣ ಸಿಗದಿದ್ದರೆ ನಾನೂ ಮಗುವಿನ ಪಾಲನೆಗೆ ಹಣ ಕೊಡಲು ಸಿದ್ಧನಿದ್ದೇನೆ ಎಂದರು ಸಿಜೆ ಸತೀಶ್ಚಂದ್ರ ಶರ್ಮ.

ಈ ಹಂತದಲ್ಲಿ ಮಹಿಳೆಯ ಪರ ವಕೀಲ ಡಾ. ಅಮಿತ್‌ ಮಿಶ್ರಾ ಅವರು ಮಹಿಳೆಯ ಜತೆ ಸಮಾಲೋಚನೆ ನಡೆಸಿದರು. ಆಕೆ ಯಾವ ಕಾರಣಕ್ಕೂ ಗರ್ಭವನ್ನು ಮುಂದುವರಿಸಲು ಸಿದ್ಧಳಿಲ್ಲ ಎಂದು ಹೇಳಿದರೆಂದು ಕೋರ್ಟ್‌ಗೆ ತಿಳಿಸಿದರು. ಆಗ ವಿಭಾಗೀಯ ಪೀಠ ನಾವು ಕೂಡಾ ಮಗುವನ್ನು ಕೊಲ್ಲಲು ಅನುಮತಿ ನೀಡಲಾಗದು ಎಂದರು.

ಏನಿದು ಪ್ರಕರಣ?
೨೫ ವರ್ಷದ ಮಹಿಳೆ ಮತ್ತು ಪುರುಷನ ನಡುವೆ ಒಪ್ಪಿಗೆಯಿಂದಲೇ ಲೈಂಗಿಕ ಸಂಪರ್ಕ ನಡೆದಿದೆ. ಆತ ಮದುವೆಯಾಗುತ್ತೇನೆ ಎಂದು ಭರವಸೆ ಕೂಡಾ ನೀಡಿದ್ದ. ಆದರೆ ಗರ್ಭಿಣಿಯಾದ ಬಳಿಕ ಆತ ತಪ್ಪಿಸಿಕೊಳ್ಳುತ್ತಿದ್ದಾನೆ. ಇಷ್ಟಾದರೂ ಆಕೆ ಗರ್ಭಕ್ಕೆ ೧೮ ವಾರ ಆಗುವವರೆಗೂ ಕಾದಳು. ಆದರೆ, ಆಗಲೂ ಒಪ್ಪದಿದ್ದಾಗ ಗರ್ಭಪಾತಕ್ಕೆ ನಿರ್ಧಾರ ಮಾಡಿದ್ದಾಳೆ. ಬಳಿಕ ಕಾನೂನು ಜಂಜಾಟದಲ್ಲಿ ಸಿಕ್ಕಿಬಿದ್ದಿದ್ದಾಳೆ. ಆಕೆ ಬಡ ರೈತ ಕುಟುಂಬದ ಹೆಣ್ಮಗಳು. ಐವರು ಮಕ್ಕಳ ಕುಟುಂಬವದು. ಹೀಗಾಗಿ ಬಂದಿರುವ ಸಮಸ್ಯೆಗೆ ಹೇಗಾದರೂ ಪರಿಹಾರ ಹುಡುಕಿಕೊಳ್ಳುವುದು ಆಕೆಯ ಉದ್ದೇಶವಾಗಿದೆ. ಆದರೆ, ಕೋರ್ಟ್‌ ಹೇಗೂ ೨೩ ವಾರಗಳಾಗಿವೆ. ಇನ್ನು ೧೨-೧೩ ವಾರ ಕಾದರೆ ಮಗುವೇ ಹುಟ್ಟುತ್ತದೆ. ಆಗ ಯಾರಿಗಾದರೂ ಸಾಕಲು ಕೊಡಬಹುದು ಎನ್ನುವ ಸಲಹೆಯನ್ನು ನೀಡಿದೆ.

ಇದನ್ನೂ ಓದಿ| ದೇಶದ ಕಾಲು ಭಾಗ ಗರ್ಭಪಾತಗಳು ಮನೆಯಲ್ಲೇ ನಡೆಯುತ್ತವೆ!

Exit mobile version