Site icon Vistara News

Delhi High Court : ತೆರಿಗೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಕುಟುಂಬದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌, ಏನಿದು ಕೇಸ್?

Delhi High Court The High Court rejected the petition of Sonia Gandhi's family in the tax case, what is the case?

ನವ ದೆಹಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ತಮ್ಮ ವಿರುದ್ಧದ ತೆರಿಗೆ ಮೌಲ್ಯಮಾಪನದ ಕೇಸ್‌ಗಳನ್ನು ಸಾಮಾನ್ಯ ತಪಾಸಣೆಯ ಬದಲಿಗೆ ಕೇಂದ್ರೀಯ ವೃತ್ತದ ಕಚೇರಿಗೆ (central circles) ವರ್ಗಾಯಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ (Delhi High Court) ಶುಕ್ರವಾರ ವಜಾಗೊಳಿಸಿದೆ.

ದಿಲ್ಲಿ ಹೈಕೋರ್ಟ್‌, ಸಂಜಯ್‌ ಗಾಂಧಿ ಮೆಮೋರಿಯಲ್‌ ಟ್ರಸ್ಟ್‌, ಜವಾಹರ್‌ ಭವನ್ ಟ್ರಸ್ಟ್‌, ರಾಜೀವ್‌ ಗಾಂಧಿ ಫೌಂಡೇಷನ್‌, ರಾಜೀವ್‌ ಗಾಂಧಿ ಚಾರಿಟೇಬಲ್‌ ಟ್ರಸ್ಟ್‌, ಯಂಗ್‌ ಇಂಡಿಯನ್‌ ಮತ್ತು ಆಮ್‌ ಆದ್ಮಿ ಪಾರ್ಟಿ ಸಲ್ಲಿಸಿರುವ ಇದೇ ರೀತಿಯ ಅರ್ಜಿಗಳನ್ನು ವಜಾಗೊಳಿಸಿದೆ.

ಆದಾಯ ತೆರಿಗೆ ಇಲಾಖೆಯ ಕೇಂದ್ರೀಯ ವೃತ್ತಗಳು ತೆರಿಗೆ ವಂಚನೆ ಪ್ರಕರಣಗಳ ಪರಿಶೀಲನೆ ನಡೆಸುತ್ತವೆ. ಕಾನೂನು ಪ್ರಕಾರವೇ ತೆರಿಗೆ ಇಲಾಖೆ ತನ್ನ ನಿರ್ಧಾರವನ್ನು ತೆಗೆದುಕೊಂಡಿವೆ. ಆದ್ದರಿಂದ ರಿಟ್‌ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಮನಮೋಹನ್‌ ಮತ್ತು ದಿನೇಶ್‌ ಕುಮಾರ್‌ ಶರ್ಮಾ ಅವರನ್ನು ಒಳಗೊಂಡಿದ್ದ ಪೀಠವು ಹೇಳಿದೆ. ಹೀಗಿದ್ದರೂ ತೀರ್ಪಿನ ವಿವರಗಳು ಬರಬೇಕಿದೆಯಷ್ಟೇ.

ಏನಿದು ಕೇಸ್?

ಲಂಡನ್‌ ಮೂಲದ ಉದ್ಯಮಿ, ಶಸ್ತ್ರಾಸ್ತ್ರ ವಹಿವಾಟಿನ ಡೀಲರ್ ಸಂಜಯ್‌ ಭಂಡಾರಿ ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದು, ವಿತ್ತಾಪರಾಧಿಯಾಗಿದ್ದಾನೆ.‌ ಈತನ ನೂರಾರು ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಸಂಜಯ್‌ ಭಂಡಾರಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರ ಆಪ್ತ ಎಂದೂ ವರದಿಯಾಗಿದೆ. 2009ರಲ್ಲಿ ನಡೆದ 2,985 ಕೋಟಿ ರೂ. ಶಸ್ತ್ರಾಸ್ತ್ರ ಡೀಲ್‌ನಲ್ಲಿ ಅವ್ಯವಹಾರ ನಡೆಸಿರುವ ಆರೋಪ ಸಂಜಯ್‌ ಭಂಡಾರಿ ಎದುರಿಸುತ್ತಿದ್ದಾನೆ. ಭಂಡಾರಿ, ರಾಬರ್ಟ್‌ ವಾದ್ರಾ ಮತ್ತು ಇತರರು ವಿದೇಶಗಳಲ್ಲಿ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಆರೋಪಗಳಿದ್ದು, ತನಿಖೆ ನಡೆಯುತ್ತಿದೆ. ಭಂಡಾರಿ ವಿರುದ್ಧ ಆದಾಯ ತೆರಿಗೆ ಇಲಾಖೆಯು 500 ಕೋಟಿ ರೂ.ಗೂ ಹೆಚ್ಚು ಅಘೋಷಿತ ಆದಾಯ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ ಸಂಜಯ್‌ ಭಂಡಾರಿ ಅವರ ವಿರುದ್ಧದ ಪ್ರಕರಣಕ್ಕೂ ತಮಗೂ ಸಂಬಂಧ ಇಲ್ಲ ಎಂದು ಗಾಂಧಿ ಕುಟುಂಬ ಹೇಳಿದೆ.

ಇದನ್ನೂ ಓದಿ: GST Intelligence : ವಿಮೆ ಕಂಪನಿಗಳಿಂದ 2,250 ಕೋಟಿ ರೂ. ತೆರಿಗೆ ವಂಚನೆ, ತನಿಖೆ ತೀವ್ರ

ಆದಾಯ ತೆರಿಗೆ ಇಲಾಖೆಯು 2018-19 ಸಾಲಿನಲ್ಲಿ ಗಾಂಧಿ ಕುಟುಂಬದ ಆದಾಯ ಮೌಲ್ಯ ಮಾಪನದ ಪ್ರಕರಣಗಳನ್ನು ಸಾಮಾನ್ಯ ಮೌಲ್ಯ ಮಾಪನದ ಬದಲಿಗೆ ಸೆಂಟ್ರಲ್‌ ಸರ್ಕಲ್‌ಗೆ ವರ್ಗಾಯಿಸಿತ್ತು. ಇಲ್ಲಿ ತೆರಿಗೆ ವಂಚನೆ ಕೇಸ್‌ಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಇದಕ್ಕೆ ಗಾಂಧಿ ಕುಟುಂಬ ವಿರೋಧಿಸಿದೆ.

Exit mobile version