ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಇರುವುದೇ ಹಾಗೆ. ಮಳೆ ಬಂದರೆ ಅತಿಯಾದ ಮಳೆ, ಚಳಿಗಾಲದಲ್ಲಿ ವಿಪರೀತ ಚಳಿ ಹಾಗೂ ಬೇಸಿಗೆಯಲ್ಲಿ ವಿಪರೀತ ಬಿಸಿಲು. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯ ಮಂಗೇಶ್‌ಪುರದಲ್ಲಿ (Mungeshpur) ಬುಧವಾರ (ಮೇ 29) ಮಧ್ಯಾಹ್ನ 2.30ರ ಸುಮಾರಿಗೆ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ (Delhi Temperature) ದಾಖಲಾಗಿದ್ದು, ದೇಶದ ಇತಿಹಾಸದಲ್ಲಿಯೇ ಗರಿಷ್ಠ ತಾಪಮಾನ ಇದಾಗಿದೆ ಎಂದು ತಿಳಿದುಬಂದಿದೆ. ಚುರುಗುಡುವ ಬಿಸಿಲು, ಮನೆಯಲ್ಲಿ ಕೂತರೂ ಬೆವರುವ ಪರಿಸ್ಥಿತಿ ಎದುರಾದ ಕಾರಣ ರಾಜಧಾನಿ ಜನ ಪರಿತಪಿಸುವಂತಾಗಿದೆ ಎಂದು ತಿಳಿದುಬಂದಿದೆ.
ದೆಹಲಿಯತ್ತ ಉಷ್ಣಮಾರುತ ಅಪ್ಪಳಿಸುತ್ತಿದೆ. ಮಳೆಯೂ ಇಲ್ಲದ ಕಾರಣ ಬಿಸಿಲು ಮತ್ತಷ್ಟು ಜೋರಾಗಿದೆ. ನಿರೀಕ್ಷೆಗಿಂತ ಬರೋಬ್ಬರಿ 9 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿರುವುದು ಜನ ಹೈರಾಣಾಗುವಂತೆ ಮಾಡಿದೆ. ದೆಹಲಿಯಲ್ಲಿ 2002ರಲ್ಲಿ 49.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಆದರೀಗ, ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ದಾಟಿರುವುದು ಜನರಿಗೆ ಚಿಂತೆಯಾಗಿದೆ. ತಾಪಮಾನದ ಕುರಿತು ದೆಹಲಿಯ ಹವಾಮಾನ ಇಲಾಖೆಯ ಕಚೇರಿಯು ಮಾಹಿತಿ ನೀಡಿದೆ.
Delhi: The highest temperature of 52.3°C was recorded at Mungeshpur AWS (Automatic weather station): Dr Kuldeep Srivastava, Head, Regional Weather Forecasting Centre, IMD
— ANI (@ANI) May 29, 2024
ವಿದ್ಯುತ್ ಬೇಡಿಕೆಯಲ್ಲೂ ದಾಖಲೆ
ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ವಿದ್ಯುತ್ ಬೇಡಿಕೆ ಪ್ರಮಾಣವೂ ದಾಖಲೆಯಾಗಿದೆ. ದೆಹಲಿಯ ವಿದ್ಯುತ್ ಬಳಕೆಯು ಗುರುವಾರ ಮಧ್ಯಾಹ್ನದ 3.36ರ ಸುಮಾರಿಗೆ 8,300 ಮೆಗಾವ್ಯಾಟ್ ದಾಟಿದೆ. ಇದು ದೆಹಲಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಳಕೆಯಾದ ವಿದ್ಯುತ್ ಪ್ರಮಾಣ ಎಂಬ ದಾಖಲೆಯಾಗಿದೆ. ವಿದ್ಯುತ್ ಪೂರೈಕೆ ಕಂಪನಿಗಳ ಪ್ರಕಾರ ದೆಹಲಿಗೆ ನಿತ್ಯ 8,200 ಮೆಗಾ ವ್ಯಾಟ್ ವಿದ್ಯುತ್ ಬೇಕಾಗುತ್ತಿತ್ತು. ಆದರೆ, ತಾಪಮಾನ ಜಾಸ್ತಿಯಾದ ಕಾರಣ ಪ್ರತಿಯೊಂದು ಮನೆಯಲ್ಲೂ ನಿರಂತರವಾಗಿ ಫ್ಯಾನ್, ಕೂಲರ್ ಹಾಗೂ ಎ.ಸಿ ಬಳಸುತ್ತಿರುವ ಕಾರಣ ವಿದ್ಯುತ್ ಬೇಡಿಕೆಯೂ ದಾಖಲೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿಯ ನಜಾಫ್‌ಗಢ, ಮಂಗೇಶ್‌ಪುರ ಹಾಗೂ ನರೇಲಾದಲ್ಲಿ ಗುರುವಾರ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಕನಿಷ್ಠ ಎಂಬಂತಾಗಿದೆ. ಇದರಿಂದಾಗಿ ಬಹುತೇಕ ನಗರಗಳಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ಹೆಚ್ಚು ಮರುಭೂಮಿ ಹೊಂದಿರುವ ರಾಜಸ್ಥಾನದ ಫಲೋಡಿಯಲ್ಲಿ ಗರಿಷ್ಠ 51 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬಂಗಾಳ ಕೊಲ್ಲಿಯಿಂದ ತಂಪು ಗಾಳಿ ಬೀಸುತ್ತಿರುವ ಕಾರಣ ಉತ್ತರ ಪ್ರದೇಶದಲ್ಲಿ ತಾಪಮಾನ ನಿಯಮಿತವಾಗಿದೆ ಎಂದು ತಿಳಿದುಬಂದಿದೆ.
ಅಗ್ನಿ ದುರಂತಗಳ ಸಂಖ್ಯೆಯೂ ಜಾಸ್ತಿ
ಗರಿಷ್ಠ ತಾಪಮಾನ ದಾಖಲಾಗುತ್ತಿರುವ ಕಾರಣ ದೆಹಲಿಯಲ್ಲಿ ಅಗ್ನಿ ದುರಂತಗಳ ಸಂಖ್ಯೆಯೂ ಜಾಸ್ತಿಯಾಗುತ್ತಿವೆ ಎಂಬುದಾಗಿ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. “ಪ್ರತಿದಿನ ಅಗ್ನಿ ಅವಘಡಗಳ ಕುರಿತು ಸರಾಸರಿ 200ಕ್ಕೂ ಅಧಿಕ ಕರೆಗಳು ಬರುತ್ತಿವೆ. ಇದು ಕಳೆದ 10 ವರ್ಷಗಳಲ್ಲೇ ಗರಿಷ್ಠವಾಗಿದೆ. ಇನ್ನೂ ಒಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ ಕರೆಗಳ ಸಂಖ್ಯೆ 250 ದಾಟಬಹುದು. ಹಾಗಾಗಿ, ದೆಹಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತಿದೆ” ಎಂದು ದೆಹಲಿ ಫೈರ್ ಡಿಪಾರ್ಟ್‌ಮೆಂಟ್ ನಿರ್ದೇಶಕ ಅತುಲ್ ಗರ್ಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Karnataka Weather : ಗರಿಷ್ಠ ತಾಪಮಾನ ಇಳಿಕೆ; ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ