Site icon Vistara News

Farmers Protest | ರೈತರ ಮಹಾಪಂಚಾಯತ್‌ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಭಾರಿ ಭದ್ರತೆ, ಕೆಲವು ಕಡೆ ಉದ್ವಿಗ್ನ ಸ್ಥಿತಿ

farmers delhi

ನವದೆಹಲಿ: ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಕರೆ ನೀಡಿರುವ ರೈತರ ಮಹಾ ಪಂಚಾಯತ್‌ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಭಾರಿ ಭದ್ರತೆ ಸಜ್ಜುಗೊಳಿಸಲಾಗಿದೆ. ಉತ್ತರ ಪ್ರದೇಶದ ಲಖೀಂಪುರ್‌ ಖೇರಿಯಲ್ಲಿ ನಡೆದ ಅತಿ ದೊಡ್ಡ ಮಹಾ ಪಂಚಾಯತ್‌ನ ಬಳಿಕ ನಡೆಯುತ್ತಿರುವ ಪ್ರತಿಭಟನೆ ಇದು. ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಆಯೋಜನೆಗೊಂಡಿರುವ ಈ ಪಂಚಾಯತ್‌ನ ಉದ್ದೇಶ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯ ವಿರುದ್ಧ ಪ್ರತಿಭಟನೆ ನಡೆಸುವುದು ಎಂದು ಕಿಸಾನ್‌ ಮೋರ್ಚಾ ಹೇಳಿಕೊಂಡಿದೆ.

ಈ ಹಿಂದೆ ರೈತರು ದಿಲ್ಲಿ ಪ್ರವೇಶಿಸಿದಾಗ ದೊಡ್ಡ ಗಲಭೆಯೇ ನಡೆದಿತ್ತು. ರೈತರು ಟ್ರ್ಯಾಕ್ಟರ್‌ಗಳನ್ನು ಹಿಡಿದುಕೊಂಡು ಬಂದು ಸಿಕ್ಕಸಿಕ್ಕಲ್ಲಿ ನುಗ್ಗಿಸಿದ್ದರು. ಕೆಂಪುಕೋಟೆಯಲ್ಲಿ ಕೂಡಾ ರೈತರ ಧ್ವಜವನ್ನು ಹಾರಿಸಿದರು. ಈ ವಿಚಾರ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಬಾರಿ ಅಷ್ಟು ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯುವ ಸಾಧ್ಯತೆ ಇಲ್ಲವಾದರೂ ಭದ್ರತಾ ವ್ಯವಸ್ಥೆಯನ್ನು ಅತ್ಯಂತ ಬಿಗಿ ಸ್ಥಿತಿಯಲ್ಲೇ ಇರಿಸಲಾಗಿದೆ. ದಿಲ್ಲಿಯ ಬಹುತೇಕ ಎಲ್ಲ ಭಾಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಗಡಿ ಪ್ರದೇಶಗಳಲ್ಲೂ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ.

ರಾಕೇಶ್‌ ಟಿಕಾಯತ್‌ ವಶಕ್ಕೆ
ಈ ನಡುವೆ ಸಂಯುಕ್ತ ಕಿಸಾನ್‌ ಮೋರ್ಚಾದ ನಾಯಕರಾಗಿರುವ ರಾಕೇಶ್‌ ಟಿಕಾಯತ್‌ ಅವರು ರಾಜಧಾನಿ ದಿಲ್ಲಿ ಪ್ರವೇಶಿಸುವ ಹಂತದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವಿಚಾರವನ್ನು ಟ್ವೀಟ್‌ನಲ್ಲಿ ತಿಳಿಸಿರುವ ರಾಕೇಶ್‌ ಟಿಕಾಯತ್‌ ರೈತರು ಇಂಥ ಬಂಧನಗಳಿಗೆ ಬಗ್ಗುವುದಿಲ್ಲ ಎಂದಿದ್ದಾರೆ.

ಸಿಂಘು ಗಡಿಯಲ್ಲಿ ಭಾರಿ ಭದ್ರತೆ
ಈ ನಡುವೆ ಹರಿಯಾಣ ಭಾಗದ ರೈತರು ದಿಲ್ಲಿ ಪ್ರವೇಶ ಮಾಡುವ ಸಿಂಘು ಗಡಿ ಭಾಗದಲ್ಲಿ ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಈ ಭಾಗದಲ್ಲಿ ರೈತರು ದೊಡ್ಡ ಪ್ರತಿಭಟನೆ ಮಾಡಿದ್ದರು. ವರ್ಷಾಂತರಗಳ ಕಾಲ ಅಲ್ಲೇ ಬೀಡುಬಿಟ್ಟಿದ್ದರು. ಪೊಲೀಶರು ಹರಿಯಾಣ ಮಾತ್ರವಲ್ಲ, ಉತ್ತರ ಪ್ರದೇಶದ ಕಡೆಯಿಂದ ಬರುವ ಹೆದ್ದಾರಿಗಳಲ್ಲೂ ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ಒಳಬರುವ ಪ್ರತಿಯೊಂದು ವಾಹನವನ್ನೂ ತಪಾಸಣೆ ಮಾಡಿಯೇ ಬಿಡಲಾಗುತ್ತಿದೆ.

ಏನೇನು ಎಚ್ಚರಿಕೆ ಕ್ರಮಗಳು?
-ಸಿಂಘು ಮತ್ತು ಟಿಕ್ರಿಯ ಗಡಿ ಭಾಗದಲ್ಲಿ ಸ್ಥಳೀಯ ಪೊಲೀಸರು ಮತ್ತು ಇತರ ಪಡೆಗಳನ್ನು ಬಳಸಿ ಬಿಗಿ ಭದ್ರತೆ ಮಾಡಲಾಗಿದೆ. ರೈಲ್ವೆ ಟ್ರಾಕ್‌ಗಳಲ್ಲಿ, ರಸ್ತೆಗಳಲ್ಲಿ ಮತ್ತು ಮೆಟ್ರೋ ಸ್ಟೇಷನ್‌ಗಳಲ್ಲೂ ಕಟ್ಟೆಚ್ಚರದ ಸ್ಥಿತಿ ಇದೆ.
– ಉತ್ತರ ಪ್ರದೇಶದ ಗಾಜಿಯಾಪುರ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ರೈತರು ಬರುವ ನಿರೀಕ್ಷೆ ಇದೆ.
– ರಾಕೇಶ್‌ ಟಿಕಾಯತ್‌ ಅವರನ್ನು ಗಾಜಿಯಾಪುರ ಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಜಂತರ್‌ ಮಂತರ್‌ಗೆ ಕರೆತಂದು ಬಿಡುವ ಸಾಧ್ಯತೆ ಇದೆ.

ಇದನ್ನೂ ಓದಿ| ಭಾರತೀಯ ಕಿಸಾನ್‌ ಯೂನಿಯನ್‌ನಿಂದ್ಲೇ ರಾಕೇಶ್‌ ಟಿಕಾಯತ್ ಉಚ್ಚಾಟನೆ

Exit mobile version