ನವ ದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ನಡೆಯುತ್ತಿದ್ದು, ಸದ್ಯದ ಟ್ರೆಂಡ್ನಲ್ಲಿ, ಬಿಜೆಪಿ 132ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಮ್ ಆದ್ಮಿ ಪಕ್ಷ 117 ಮತ್ತು ಕಾಂಗ್ರೆಸ್ 6 ವಾರ್ಡ್‌ಗಳಲ್ಲಿ ಮುಂದಿವೆ. ಇದು ಬೆಳಗ್ಗೆ 9.20ರ ಟ್ರೆಂಡ್.
ಒಟ್ಟು 250 ಸ್ಥಾನಗಳಿಗೆ ಡಿಸೆಂಬರ್ 4ರಂದು ಚುನಾವಣೆ ನಡೆದಿದ್ದು, 1,349 ಮಂದಿ ಅಭ್ಯರ್ಥಿಗಳ ಹಣೆಬರಹ ಇಂದು ಹೊರಬೀಳಲಿದೆ. ಒಂದೊಂದು ಕ್ಷೇತ್ರದಲ್ಲಿ ಹೆಚ್ಚು ಕಡಿಮೆ 65 ಸಾವಿರ ಮತದಾರರಿದ್ದಾರೆ. ಇಂದು ನಡೆಯುತ್ತಿರುವ ಮತ ಎಣಿಕೆಗೆ ಪೊಲೀಸರಿಂದ ಭಾರಿ ಭದ್ರತೆ ಕಲ್ಪಿಸಲಾಗಿದೆ. 42 ಮತ ಎಣಿಕೆ ಕೇಂದ್ರಗಳ ಬಳಿ 10 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 20 ಅರೆಸೇನಾ ತುಕಡಿಗಳನ್ನು ಕೂಡ ಭದ್ರತೆಗೆ ನಿಯೋಜಿಸಲಾಗಿದೆ.
ದೆಹಲಿ ಮಹಾನಗರ ಪಾಲಿಕೆ ಕಳೆದ 15 ವರ್ಷಗಳಿಂದಲೂ ಬಿಜೆಪಿ ಕೈಯಲ್ಲಿಯೇ ಇದ್ದು, ಈ ಸಲ ಎಕ್ಸಿಟ್ ಪೋಲ್ ಭವಿಷ್ಯ ಆಪ್ ಗೆಲ್ಲುತ್ತದೆ ಎಂದು ಹೇಳಿದೆ. ಮತ ಎಣಿಕೆ ಪ್ರಾರಂಭ ಆದಾಗಿನಿಂದಲೂ ಬಿಜೆಪಿ ಮುನ್ನಡೆ ಸಾಧಿಸಿದ್ದು, ಪೂರ್ತಿ 250 ವಾರ್ಡ್ಗಳ ಮತ ಎಣಿಕೆ ಮುಗಿದ ವಿನಃ ಗೆಲುವಿನ ಲೆಕ್ಕಾಚಾರ ಸಿಗದು. ಇಂದು ಸಂಜೆ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ.
ಆಪ್-ಬಿಜೆಪಿ ಪೈಪೋಟಿ
ಇನ್ನು ದೆಹಲಿ ಮಹಾನಗರ ಪಾಲಿಕೆ ಆಡಳಿತ ಈ ಸಲ ಪಕ್ಕಾ ನಮಗೆ ಎಂದು ಬಿಜೆಪಿ ಮತ್ತು ಆಪ್ ಪಕ್ಷಗಳವರು ಹೇಳಿಕೊಳ್ಳುತ್ತಿದ್ದಾರೆ. ಈ ಸಲವೂ ನಾವೇ ಗೆದ್ದು ಆಡಳಿತ ಹಿಡಿಯುತ್ತೇವೆ ಎಂದು ಬಿಜೆಪಿ ನಾಯಕ ಹರೀಶ್ ಖುರಾನಾ ಹೇಳಿದ್ದರೆ, ಇನ್ನೊಂದು ಕಡೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹೂವುಗಳನ್ನು ಹಿಡಿದು ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ್ದಾರೆ. ಆಪ್ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: MCD Election 2022 | ದೆಹಲಿ ಮಹಾನಗರ ಪಾಲಿಕೆಗೆ ಡಿಸೆಂಬರ್ 4ರಂದು ಚುನಾವಣೆ, ಬಿಜೆಪಿ, ಆಪ್ ಮಧ್ಯೆ ಪೈಪೋಟಿ