ನವ ದೆಹಲಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದೆ. ಹದಿನೈದು ವರ್ಷಗಳಿಂದ ದೆಹಲಿ ಮಹಾನಗರ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ ಈ ಸಲ ಸೋಲುಂಟಾಗಿದೆ. ಪ್ರಸಕ್ತ ಬಾರಿಯ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ಬಿಜೆಪಿ -ಆಪ್ ಎರಡೂ ಪಕ್ಷಗಳು ಭರವಸೆಯನ್ನು ವ್ಯಕ್ತಪಡಿಸಿದ್ದವು. ಆದರೆ ಚುನಾವಣೋತ್ತರ ಸಮೀಕ್ಷೆಗಳೆಲ್ಲ ಈ ಸಲ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವೇ ಗೆಲ್ಲುತ್ತದೆ ಎಂದೇ ಹೇಳಿದ್ದವು. ಚುನಾವಣೋತ್ತರ ಸಮೀಕ್ಷೆಗಳ ಗೆಲುವಿನ ಭವಿಷ್ಯ ಸರಿಯಾದರೂ, ಯಾವ ಪಕ್ಷ ಎಷ್ಟು ವಾರ್ಡ್ಗಳನ್ನು ಗೆಲ್ಲುತ್ತದೆ ಎಂಬುದಕ್ಕೆ ಅವು ಕೊಟ್ಟಿದ್ದ ಅಂಕಿ-ಸಂಖ್ಯೆಗಳು ಹೊಂದಾಣಿಕೆಯಾಗಿಲ್ಲ.
ಯಾವ ಸಮೀಕ್ಷೆಗಳು ಏನು ಹೇಳಿದ್ದವು?
ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆಯನ್ನು ವಿವಿಧ ಮಾಧ್ಯಮಗಳು ನಡೆಸಿದ್ದವು. ಅದರಲ್ಲಿ ಇಂಡಿಯಾ ಟುಡೆ-ಆ್ಯಕ್ಸಿಸ್ ಮೈ ಇಂಡಿಯಾ (ಭಾರತದ ಪ್ರಮುಖ ಮಾರುಕಟ್ಟೆ ಸಂಶೋಧನೆ ಮತ್ತು ಗ್ರಾಹಕ ಡೇಟಾ ಇಂಟೆಲಿಜೆನ್ಸ್ ಕಂಪನಿ) ಜಂಟಿಯಾಗಿ ಚುನಾವಣೋತ್ತರ ಸಮೀಕ್ಷೆ ನಡೆಸಿ, ‘ಆಮ್ ಆದ್ಮಿ ಪಕ್ಷ 149-171 ವಾರ್ಡ್ಗಳನ್ನು ಗೆಲ್ಲುತ್ತದೆ. ಬಿಜೆಪಿ 69-91 ವಾರ್ಡ್ಗಳಲ್ಲಿ ಗೆಲುವು ಸಾಧಿಸುತ್ತದೆ. ಹಾಗೇ ಕಾಂಗ್ರೆಸ್ 3-7 ಮತ್ತು ಪಕ್ಷೇತರರು 5-9 ಸೀಟ್ ಗೆಲ್ಲುತ್ತಾರೆ’ ಎಂದು ವರದಿ ನೀಡಿದ್ದವು.
ಟೈಮ್ಸ್ ನೌ ಇಟಿಜಿ ಪೋಲ್ಸ್ ಸಮೀಕ್ಷೆ ‘ಆಪ್ 146-156 ವಾರ್ಡ್ಗಳನ್ನು, ಬಿಜೆಪಿ 84-94 ಸೀಟ್ಗಳನ್ನು, ಕಾಂಗ್ರೆಸ್ 6-10 ವಾರ್ಡ್ಗಳನ್ನು ಗೆಲ್ಲಲಿದೆ. ಹಾಗೇ, ಪಕ್ಷೇತರರು ನಾಲ್ಕು ವಾರ್ಡ್ಗಳಲ್ಲಿ ಗೆಲ್ಲಬಹುದು’ ಎಂದು ಹೇಳಿತ್ತು. ನ್ಯೂಸ್ ಎಕ್ಸ್ ಮತ್ತು ಜನ್ ಕೀ ಬಾತ್ ಜಂಟಿಯಾಗಿ ಎಕ್ಸಿಟ್ ಪೋಲ್ ನಡೆಸಿ ‘ಆಮ್ ಆದ್ಮಿ ಪಕ್ಷ 159-175 ವಾರ್ಡ್ಗಳನ್ನು, ಬಿಜೆಪಿ 70-90, ಕಾಂಗ್ರೆಸ್ 4-7 ಸೀಟ್ಗಳನ್ನು ಗೆಲ್ಲಬಹುದು’ ಎಂದು ವರದಿ ನೀಡಿದ್ದವು.
ಫಲಿತಾಂಶವೇನು?
ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆ ನಡೆಸಿದ ಏಜೆನ್ಸಿಗಳು ಯಾವವೂ ಬಿಜೆಪಿ 100 ವಾರ್ಡ್ ದಾಟುತ್ತದೆ ಎಂದು ಹೇಳಿರಲಿಲ್ಲ. ಆಮ್ ಆದ್ಮಿ ಪಕ್ಷವೂ 140ಕ್ಕಿಂತಲೂ ಹೆಚ್ಚು ಸೀಟ್ ಗೆಲ್ಲುವುದು ಪಕ್ಕಾ ಎಂದೇ ಹೇಳಿದ್ದವು. ಆದರೆ ಫಲಿತಾಂಶ ವಿಭಿನ್ನವಾಗಿದೆ. ಪ್ರಾರಂಭದಿಂದಲೂ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ನೇರಾನೇರ ಜಿದ್ದಿ ಏರ್ಪಟ್ಟಿತ್ತು. ಒಂದು ಹಂತದಲ್ಲಿ ಬಿಜೆಪಿ 121 ಮತ್ತು ಆಪ್ 121 ವಾರ್ಡ್ಗಳಲ್ಲಿ ಮುನ್ನಡೆ ಸಾಧಿಸಿ, ಸಮಬಲ ಸಾಧಿಸಿದ್ದವು. ಅಂತಿಮವಾಗಿ ಆಮ್ ಆದ್ಮಿ ಪಕ್ಷ 134 ವಾರ್ಡ್ಗಳನ್ನು ಗೆದ್ದುಕೊಂಡಿತು. ಬಿಜೆಪಿ 104 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ನವರು 9 ಸೀಟ್ಗಳನ್ನು ಮತ್ತು ಪಕ್ಷೇತರರು 3 ವಾರ್ಡ್ಗಳನ್ನು ಗೆದ್ದುಕೊಂಡಿದ್ದಾರೆ.
2007ರಿಂದ 2022ರವರೆಗೆ ದೆಹಲಿ ಮಹಾನಗರ ಪಾಲಿಕೆ ಗದ್ದುಗೆಯಲ್ಲಿ ಬಿಜೆಪಿ ಆಡಳಿತವಿತ್ತು. 2017ರ ಚುನಾವಣೆಯ ಸಮಯದಲ್ಲಿ ಒಟ್ಟು 272 ವಾರ್ಡ್ಗಳಿದ್ದವು. ಅದರಲ್ಲಿ ಬಿಜೆಪಿ 181 ಸೀಟ್ಗಳನ್ನು ಗೆದ್ದರೆ, ಆಮ್ ಆದ್ಮಿ ಪಕ್ಷ 48 ವಾರ್ಡ್ಗಳನ್ನಷ್ಟೇ ಗೆದ್ದಿತ್ತು. ಕಾಂಗ್ರೆಸ್ 20 ವಾರ್ಡ್ ಗೆದ್ದುಕೊಂಡಿತ್ತು. ಈ ಸಲ ಚುನಾವಣೆಯಲ್ಲಿ ಶೇ.50.47ರಷ್ಟು ಮಾತ್ರ ಮತದಾನ ಆಗಿತ್ತು. 2007ರಿಂದ ಇಲ್ಲಿಯವರೆಗೆ ಇಷ್ಟು ಕಡಿಮೆ ಪ್ರಮಾಣದಲ್ಲಿ ಮತದಾನ ಆಗಿರಲಿಲ್ಲ.
ಇದನ್ನೂ ಓದಿ: Delhi MCD Election | ದೆಹಲಿಯಲ್ಲಿ ಬಿಜೆಪಿ ಲೋಕಲ್ ಕೋಟೆ ಭೇದಿಸಿದ ಆಪ್, ಗೆಲುವಿಗೆ ಪ್ರಮುಖ ಕಾರಣಗಳೇನು?