ಹೊಸದಿಲ್ಲಿ: ದಿಲ್ಲಿಯಲ್ಲಿ ನಾಗರಿಕ ಸೇವೆಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ತರಲು ಇಚ್ಛಿಸಿರುವ ವಿಧೇಯಕ, ಸಂಸತ್ತಿನ ಉಭಯ ಸದನಗಳಲ್ಲೂ ಅಂಗೀಕೃತವಾಗಲು (Delhi ordinance bill) ಸಿದ್ಧವಾಗಿದೆ. ಇದಕ್ಕೆ ಆಪದ್ಬಂಧುವಾಗಿ ವೈಎಸ್ಆರ್ ಕಾಂಗ್ರೆಸ್ (YSR congress party) ಪಕ್ಷ ಒದಗಿದೆ.
ಲೋಕಸಭೆಯಲ್ಲಿ ಇದನ್ನು ಅಂಗೀಕಾರ ಮಾಡಲು ಬಿಜೆಪಿ ಸ್ವತಃ ಶಕ್ತವಾಗಿದ್ದರೆ, ರಾಜ್ಯಸಭೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (jagan mohan reddy) ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದರು ನೆರವಾಗಲಿದ್ದಾರೆ. ಮಣಿಪುರಕ್ಕೆ (manipur violence) ಸಂಬಂಧಿಸಿದಂತೆ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯ (no confidence motion) ಸೇರಿದಂತೆ ಎರಡು ದೊಡ್ಡ ಮತಗಳಲ್ಲಿ ಸಂಸತ್ತಿನಲ್ಲಿ ಬಿಜೆಪಿ ಸರ್ಕಾರವನ್ನು ಬೆಂಬಲಿಸಲು ವೈಎಸ್ಆರ್ ಕಾಂಗ್ರೆಸ್ ನಿರ್ಧರಿಸಿದೆ. ರಾಜ್ಯಸಭೆಯಲ್ಲಿ 9 ಮತ್ತು ಲೋಕಸಭೆಯಲ್ಲಿ 22 ಸದಸ್ಯರನ್ನು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಹೊಂದಿದ್ದು, ನಿರ್ಣಾಯಕ ವಿಧೇಯಕಗಳಲ್ಲಿ ಸರ್ಕಾರವನ್ನು ಬೆಂಬಲಿಸುತ್ತಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸದಸ್ಯರ ಬೆಂಬಲದೊಂದಿಗೆ, ಸರ್ಕಾರವು ರಾಜ್ಯಸಭೆಯಲ್ಲಿ ವಿವಾದಿತ “ದಿಲ್ಲಿ ವಿಧೇಯಕʼವನ್ನು ಸುಲಭವಾಗಿ ಪಾಸ್ ಮಾಡಿಸಿಕೊಳ್ಳಲಿದೆ. ʼದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ವಿಧೇಯಕʼ ಎಂದು ಕರೆಯಲಾಗುವ ಈ ವಿಧೇಯಕ, ದೆಹಲಿಯ ನಾಗರಿಕ ಸೇವಾ ಅಧಿಕಾರಶಾಹಿಗಳ ನಿಯಂತ್ರಣವನ್ನು ಕೇಂದ್ರಕ್ಕೆ ತರಲಿದೆ. ಈ ಹಿಂದಿದ್ದ ಸುಗ್ರೀವಾಜ್ಞೆಯನ್ನು ರದ್ದುಪಡಿಸಲಿದೆ. ದಿಲ್ಲಿಯ ಅಧಿಕಾರಶಾಹಿಯ ವರ್ಗಾವಣೆ ಮತ್ತು ನೇಮಕಾತಿಗಳು ದಿಲ್ಲಿಯ ಚುನಾಯಿತ ಸರ್ಕಾರದ ಅಡಿಯಲ್ಲಿ ಬರುತ್ತದೆ ಎಂದು ಹೇಳುವ ಸುಪ್ರೀಂ ಕೋರ್ಟ್ ಆದೇಶವನ್ನು ಬದಿಗೆ ಸರಿಸಲು ಕೇಂದ್ರ ಈ ವಿಧೇಯಕವನ್ನು ಮುಂದಿಟ್ಟಿದೆ.
“ನಾವು ಎರಡೂ ವಿಷಯಗಳಲ್ಲಿ ಸರ್ಕಾರದ ಪರವಾಗಿ ಮತ ಚಲಾಯಿಸುತ್ತೇವೆ” ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ವಿ.ವಿಜಯಸಾಯಿ ರೆಡ್ಡಿ ತಿಳಿಸಿದ್ದಾರೆ. ಪಕ್ಷದ 22 ಲೋಕಸಭೆ ಸಂಸದರು ಮಣಿಪುರ ಬಿಕ್ಕಟ್ಟಿನ ಕುರಿತು ಲೋಕಸಭೆಯಲ್ಲಿ ಪ್ರತಿಪಕ್ಷ ಪ್ರಾಯೋಜಿತ ಅವಿಶ್ವಾಸ ಮತದಲ್ಲಿ ಸರ್ಕಾರದ ಪರ ನಿಲ್ಲಲಿದ್ದಾರೆ. ವಿಶ್ವಾಸಮತ ಯಾಚನೆಗೆ ಲೋಕಸಭೆ ಸ್ಪೀಕರ್ ಎರಡು ನೋಟೀಸ್‌ಗಳನ್ನು ಅಂಗೀಕರಿಸಿದ್ದಾರೆ. ಅದು ಸೋಲುವುದು ಖಚಿತವಾಗಿದೆ.
ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ- aam admi party) ಕೇಂದ್ರ ಮಂಡಿಸಿರುವ ವಿಧೇಯಕದ ವಿರುದ್ಧದ ಹೋರಾಟಕ್ಕೆ ಬೆಂಬಲವನ್ನು ಕ್ರೋಡೀಕರಿಸುತ್ತಿದೆ. ರಾಜಧಾನಿಯಲ್ಲಿ ಅಧಿಕಾರಿಗಳ ನಿಯಂತ್ರಣವನ್ನು ಪಡೆದುಕೊಂಡು ಬಿಜೆಪಿ ಇಲ್ಲಿನ ಕಾನೂನು ಸುವ್ಯವಸ್ಥೆಯನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ ಎಂದು ಆಪ್ ಆರೋಪಿಸಿದೆ. ಎಎಪಿ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (aravind kejrival) ದೇಶಾದ್ಯಂತ ಪ್ರವಾಸ ಮಾಡಿ, ವಿವಿಧ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಅವರ ಬೆಂಬಲವನ್ನು ಯಾಚಿಸಿದ್ದಾರೆ.
ದೆಹಲಿ ಮತ್ತು ಪಂಜಾಬ್‌ನಲ್ಲಿ ತಮ್ಮ ವೈರಿಪಕ್ಷವಾಗಿರುವ ಆಪ್ ಬೆಂಬಲಕ್ಕೆ ಈ ವಿಚಾರದಲ್ಲಿ ಕಾಂಗ್ರೆಸ್ ಬಂದಿದೆ. ಆದರೆ ರಾಜ್ಯಸಭೆಯಲ್ಲಿ ಸರ್ಕಾರವು ಪ್ರಬಲವಾಗಿದೆ. ರಾಜ್ಯಸಭೆಯು 238 ಸದಸ್ಯರನ್ನು ಹೊಂದಿದ್ದು, ಬಹುಮತದ ಪ್ರಮಾಣ 120. ಬಿಜೆಪಿ ಮತ್ತು ಎನ್‌ಡಿಎ ಒಟ್ಟು 105 ಸದಸ್ಯರನ್ನು ಹೊಂದಿವೆ. ಆಡಳಿತ ಪಕ್ಷವು ಐವರು ನಾಮನಿರ್ದೇಶಿತ ಮತ್ತು ಇಬ್ಬರು ಸ್ವತಂತ್ರ ಸಂಸದರ ಬೆಂಬಲದ ವಿಶ್ವಾಸದಲ್ಲಿದೆ. ಸರ್ಕಾರದ ಪರವಾಗಿ 112 ಮತಗಳಿವೆ. ಬಹುಮತಕ್ಕೆ ಎಂಟು ಕಡಿಮೆ ಇದೆ. ಸುಮಾರು 105 ಸದಸ್ಯರು ದೆಹಲಿ ಸುಗ್ರೀವಾಜ್ಞೆಗೆ ವಿರುದ್ಧವಾಗಿದ್ದಾರೆ.
ಇದನ್ನೂ ಓದಿ: ದಿಲ್ಲಿ ಅಧಿಕಾರಿಗಳ ಸೇವಾ ನಿಯಂತ್ರಣದ ಸುಗ್ರೀವಾಜ್ಞೆ ಬದಲಿಗೆ ವಿಧೇಯಕಕ್ಕೆ ಕೇಂದ್ರ ಸಂಪುಟ ಒಪ್ಪಿಗೆ