ನವ ದೆಹಲಿ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರನ್ನು ಇ ಡಿ ಇಂದು ಎರಡನೇ ಸುತ್ತಿನ ವಿಚಾರಣೆ ನಡೆಸುತ್ತಿದ್ದರೆ, ದೇಶಾದ್ಯಂತ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಹಾಗೇ, ಕರ್ನಾಟಕ ಕಾಂಗ್ರೆಸ್‌ನ ಸಂಸದರು, ಪ್ರಮುಖ ನಾಯಕರೂ ಕೂಡ ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಕೈಜೋಡಿಸಿದ್ದಾರೆ. ವಿಜಯ್ ಚೌಕ್ ಬಳಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಡಿ.ಕೆ.ಸುರೇಶ್ ಸೇರಿ ಹಲವರನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ಮತ್ತು ಪೊಲೀಸರು ಅವರನ್ನು ನಿಯಂತ್ರಿಸುತ್ತಿರುವ ಹಲವು ಫೋಟೋ-ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ (ಕರ್ನಾಟಕದ ತುಮಕೂರಿನವರು) ಉಗ್ರ ರೂಪ ತಾಳಿರುವ ಮತ್ತು ಪೊಲೀಸರು ಶ್ರೀನಿವಾಸ್ ಅವರ ತಲೆ ಕೂದಲನ್ನು ಹಿಡಿದು ಎಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಹರಿದಾಡುತ್ತಿದೆ.
ಶ್ರೀನಿವಾಸ್ ಬಿ ವಿ ನೇತೃತ್ವದಲ್ಲಿ ಅನೇಕ ಕಾರ್ಯಕರ್ತರು, ಪ್ರಮುಖರು ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳನ್ನೂ ಹಾಕಿದ್ದರು. ಆದರೆ ಶ್ರೀನಿವಾಸ್ ತುಂಬ ಆಕ್ರಮಣಕಾರಿಯಾಗಿ ವರ್ತಿಸಿದ್ದಾರೆ. ಇವರೆಲ್ಲರೂ ತುಂಬ ಆಕ್ರೋಶದಿಂದ ಬ್ಯಾರಿಕೇಡ್‌ಗಳನ್ನು ತಳ್ಳಿ, ಅದರ ಮೇಲೆ ಹತ್ತಿ ದಾಂಧಲೆ ಸೃಷ್ಟಿಸಿದರು. ಅಷ್ಟಾದ ಬಳಿಕ ಪೊಲೀಸರು ಶ್ರೀನಿವಾಸ್‌ರನ್ನು ವಶಕ್ಕೆ ಪಡೆದು ಕಾರಿನಲ್ಲಿ ಕೂರಿಸಲು ಯತ್ನಿಸಿದ್ದಾರೆ. ಆಗ ಶ್ರೀನಿವಾಸ್ ಕಾರಿನಲ್ಲೇ ಎದ್ದುನಿಂತು, ಕಿಟಕಿಯಿಂದ ಆಚೆಗೆ ತಲೆ ಹಾಕಿ ಮಾಧ್ಯಮಗಳ ಬಳಿ ಮಾತನಾಡಲು ಪ್ರಯತ್ನಿಸಿದ್ದಾರೆ. ಅದಾದ ಬಳಿಕ ಅಲ್ಲಿ ನಿಂತಿರುವ ಮೂರ್ನಾಲ್ಕು ಪೊಲೀಸರು ಶ್ರೀನಿವಾಸ್ ತಲೆ ಕೂದಲನ್ನು ಹಿಡಿದು ಎಳೆದಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಪೊಲೀಸರು ತಮ್ಮ ಜುಟ್ಟು ಹಿಡಿದು ಎಳೆಯುತ್ತಿದ್ದರೆ, ಶ್ರೀನಿವಾಸ್ ದೊಡ್ಡದಾಗಿ, ಸಿಟ್ಟಿನಿಂದ ʼಯಾಕೆ ಕೊಲ್ಲುತ್ತಿದ್ದೀರಿ?ʼ ಎಂದು ಕೂಗುತ್ತಾರೆ. ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಅಷ್ಟೇ ಅಲ್ಲ, ಪೊಲೀಸರು ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಜೂನ್ ತಿಂಗಳಲ್ಲಿ ರಾಹುಲ್ ಗಾಂಧಿಯನ್ನು ಇ ಡಿ ವಿಚಾರಣೆ ನಡೆಸಿದಾಗಲೂ ಶ್ರೀನಿವಾಸ್ ಬಿ.ವಿ. ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನನಗೆ ಪೊಲೀಸರ ಭಯವೇ ಇಲ್ಲ ಎಂದು ಹೇಳಿ, ಪೊಲೀಸ್ ಅಧಿಕಾರಿಯನ್ನು ಕಾಣುತ್ತಿದ್ದಂತೆ ಓಡಿ ಹೋಗಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿ, ಶ್ರೀನಿವಾಸ್ ಟ್ರೋಲ್ ಆಗಿದ್ದರು.
ಇದನ್ನೂ ಓದಿ: Video: ಪ್ರತಿಭಟಿಸಲು ದೆಹಲಿಗೆ ಹೋಗಿದ್ದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಹೀಗೆ ಪೇರಿ ಕಿತ್ತಿದ್ಯಾಕೆ?