Site icon Vistara News

ಕೇಜ್ರಿವಾಲ್‌ ಮನೆ ಮುಂದೆ ಪ್ರತಿಭಟನೆ, ದಿಲ್ಲಿ ಪೊಲೀಸರಿಂದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಚಾರಣೆ

ತೇಜಸ್ವಿ ಸೂರ್ಯ

ನವ ದೆಹಲಿ: ಬಿಜೆಪಿ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ಮಾರ್ಚ್‌ ೩೦ರಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮನೆ ಮುಂದೆ ನಡೆಸಿದ ಪ್ರತಿಭಟನೆ ಸಂಬಂಧ ಈ ವಿಚಾರಣೆ ನಡೆದಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆಗೆ ಸಂಬಂಧಿಸಿ ಈಗಾಗಲೇ ಬಿಜೆಪಿಯ ಎಂಟು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸಿಆರ್‌ಪಿಸಿಯ ೪೧ನೇ ಸೆಕ್ಷನ್‌ ಅಡಿಯಲ್ಲಿ ಪೊಲೀಸರು ತೇಜಸ್ವಿ ಸೂರ್ಯ ಅವರಿಗೂ ನೋಟಿಸ್‌ ಜಾರಿ ಮಾಡಿದ್ದರು. ತಾನು ದೆಹಲಿಗೆ ಬಂದಾಗ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತೇಜಸ್ವಿ ಉತ್ತರ ಕೊಟ್ಟಿದ್ದರು. ಹತ್ತು ದಿನಗಳ ಹಿಂದೆ ಅವರು ದಿಲ್ಲಿಗೆ ಹೋಗಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಜೂನ್‌ ಕೊನೆ ವಾರದಲ್ಲಿ ಅಶೋಕ ರಸ್ತೆಯಲ್ಲಿರುವ ಅವರ ನಿವಾಸಕ್ಕೇ ಭೇಟಿ ನೀಡಿ ವಿಚಾರಣೆ ನಡೆಸಿದರು. ಅವರಿಗೆ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ವಿಡಿಯೊ ತೋರಿಸಿ ಪ್ರಶ್ನೆಗಳನ್ನು ಕೇಳಿದರು.

ಮಾರ್ಚ್‌ ೩೦ರಂದು ಬಿಜೆಪಿ ಯುವ ಮೋರ್ಚಾದ ಸುಮಾರು ೧೫೦-೨೦೦ ಕಾರ್ಯಕರ್ತರು ಲಿಂಕ್‌ ರೋಡ್‌ನ ಐಪಿ ಕಾಲೇಜಿನ ಎದುರು ಪ್ರತಿಭಟನೆ ಆರಂಭಿಸಿದ್ದರು. ಕೇಜ್ರಿವಾಲ್‌ ಅವರು ವಿಧಾನಸಭೆಯಲ್ಲಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾದ ಬಗ್ಗೆ ಆಡಿದ ಮಾತಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಈ ಪ್ರತಿಭಟನೆ ನಡೆದಿತ್ತು. ೧೧.೩೦ರ ಹೊತ್ತಿಗೆ ಪ್ರತಿಭಟನೆ ಆರಂಭಗೊಂಡಿದ್ದು, ಒಂದು ಗಂಟೆಯ ಹೊತ್ತಿಗೆ ಪ್ರತಿಭಟನಾಕಾರರು ಸಿಎಂ ನಿವಾಸದ ಎದುರಿನ ಬ್ಯಾರಿಕೇಡ್‌ಗಳನ್ನು ಮುರಿದು ದಾಂಧಲೆ ಮಾಡಿದ್ದರು.

ಬಿಜೆಪಿ ಕಾರ್ಯಕರ್ತರು ಕೈಯಲ್ಲಿ ಪೇಂಟ್‌ ಹಿಡಿದುಕೊಂಡು ಹೋಗಿ ಬಾಗಿಲಿನ ಹೊರಗಡೆ ಚೆಲ್ಲಿದ್ದರು. ಸಿಸಿಟಿವಿ ಕ್ಯಾಮೆರಾವನ್ನು ಹಾಳುಗೆಡವಿದ್ದರು.

ಬ್ಯಾರಿಕೇಡ್‌ಗಳನ್ನು ಪುಡಿಗಟ್ಟಿ ಒಳ ಪ್ರವೇಶ ಮಾಡಿದ್ದು ನೋಡಿದರೆ ಅವರು ಕೇಜ್ರಿವಾಲ್‌ ಅವರು ಕೈಗೆ ಸಿಕ್ಕಿದ್ದರೆ ಕೊಲೆಯನ್ನೇ ಮಾಡಿಬಿಡುತ್ತಿದ್ದರು ಎಂದು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಆರೋಪಿಸಿದ್ದರು. ʻʻಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರ್ಟಿಯ ಗೆಲುವಿನಿಂದ ಹತಾಶರಾಗಿರುವ ಬಿಜೆಪಿ ನಾಯಕರು ಕಾರ್ಯಕರ್ತರನ್ನು ಕೇಜ್ರಿವಾಲ್‌ ಮನೆಗೆ ನುಗ್ಗಿಸಿ ಕೊಲೆ ಮಾಡಲು ಸಂಚು ನಡೆಸಿದ್ದಾರೆ,ʼʼ ಎಂದಿದ್ದರು ಸಿಸೋಡಿಯಾ.

ಇದನ್ನೂ ಓದಿ| ಯಾರೊಂದಿಗೂ ಮೈತ್ರಿಯಿಲ್ಲ, ಯಾರನ್ನಾದರೂ ಸೋಲಿಸಬೇಕೆಂಬ ಆಸೆಯೂ ಇಲ್ಲ: ಅರವಿಂದ್‌ ಕೇಜ್ರಿವಾಲ್‌

Exit mobile version