ನವ ದೆಹಲಿ: ೨೪ ವಾರ ತುಂಬಿದ ಭ್ರೂಣವನ್ನು ಗರ್ಭಪಾತ ಮಾಡಲು ಅವಕಾಶ ನಿರಾಕರಿಸಿದ ದಿಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮಹಿಳೆಯೊಬ್ಬರು ಮಂಗಳವಾರ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದಾರೆ. ಅರ್ಜಿಯನ್ನು ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರು ತುರ್ತು ವಿಚಾರಣೆಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ.
೨೫ ವರ್ಷದ ಅವಿವಾಹಿತ ಮಹಿಳೆ ಕಳೆದ ವಾರ ಗರ್ಭಪಾತಕ್ಕೆ ಅವಕಾಶ ಕೋರಿ ಹೈಕೋರ್ಟ್ ಮೊರೆ ಹೊಕ್ಕಿದ್ದರು. ಆಗ ವಿಚಾರಣೆ ನಡೆಸಿದ ಸಿಜೆ ಸತೀಶ್ಚಂದ್ರ ಶರ್ಮ ಮತ್ತು ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ೨೩ ವಾರದಲ್ಲಿ ಭ್ರೂಣ ಹತ್ಯೆಗೆ ಅವಕಾಶ ನೀಡುವುದು ಮಗುವನ್ನು ಕೊಂದಂತೆ. ಹಾಗಾಗಿ ಅವಕಾಶ ನೀಡಲಾಗದು ಎಂದು ಸ್ಪಷ್ಟಪಡಿಸಿದ್ದರು.
ವೈದ್ಯಕೀಯ ಗರ್ಭಪಾತ ನಿಯಮಾವಳಿ 2003ರ ಸೆಕ್ಷನ್ ೩(೨)(ಬಿ) ಪ್ರಕಾರ, ಅತ್ಯಾಚಾರ ಸಂತ್ರಸ್ತರು, ಅಪ್ರಾಪ್ತ ವಯಸ್ಕರು, ಗರ್ಭಾವಸ್ಥೆಯಲ್ಲಿ ವೈವಾಹಿಕ ಸ್ಥಿತಿ ಬದಲಾದ ಮಹಿಳೆಯರು, ಮಾನಸಿಕ ಅಸ್ವಸ್ಥೆಯರು ಅಥವಾ ಭ್ರೂಣದ ವಿರೂಪತೆ ಇರುವ ಮಹಿಳೆಯರು ಮಾತ್ರ 24 ವಾರಗಳ ಗರ್ಭ ಅಂತ್ಯಗೊಳಿಸಲು ಅನುಮತಿಸಲಾಗಿದೆ. ಆದರೆ, ಇಲ್ಲಿ ಮಹಿಳೆ ಗರ್ಭ ಧರಿಸಿರುವುದು ಸಮ್ಮತಿಯ ಲೈಂಗಿಕ ಕ್ರಿಯೆಯಿಂದ ಎನ್ನುವುದನ್ನು ಪರಿಗಣಿಸಿದ ಕೋರ್ಟ್ ಇದಕ್ಕೆ ಗರ್ಭಪಾತ ನಿಯಮಾವಳಿಯಲ್ಲಿ ಸಡಿಲಿಕೆ ಮಾಡಲಾಗದು ಎಂದು ಸ್ಪಷ್ಟಪಡಿಸಿತ್ತು.
೨೩ ವಾರ ಭ್ರೂಣವನ್ನು ಗರ್ಭದಲ್ಲಿ ಇಟ್ಟುಕೊಂಡಿರುವ ಮಹಿಳೆಗೆ ಇನ್ನು ೧೩ ವಾರ ಕಷ್ಟವಾಗದು. ಒಂದೊಮ್ಮೆ ಮಗು ಬೇಡವೇ ಎಂದಾದರೆ ದತ್ತು ಕೊಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ಸಲಹೆ ನೀಡಿದ್ದರು. ʻʻನಾವು ಮಹಿಳೆಯೇ ಮಗುವನ್ನು ಸಾಕಬೇಕು ಎಂದೂ ಹೇಳುವುದಿಲ್ಲ. ಸರಕಾರ ಇಲ್ಲವೇ ಆಸ್ಪತ್ರೆಗಳಲ್ಲೂ ಇದಕ್ಕೆ ವ್ಯವಸ್ಥೆ ಇದೆ. ಒಂದೊಮ್ಮೆ ಸರಕಾರದಿಂದ ಹಣ ಸಿಗದಿದ್ದರೆ ನಾನೂ ಮಗುವಿನ ಪಾಲನೆಗೆ ಹಣ ಕೊಡಲು ಸಿದ್ಧನಿದ್ದೇನೆʼʼ ಎಂದು ಕೂಡಾ ಸಿಜೆ ಸತೀಶ್ಚಂದ್ರ ಶರ್ಮ ಹೇಳಿದ್ದರು.
ಗರ್ಭಪಾತದ ತುರ್ತು ಏನು?
೨೫ ವರ್ಷದ ಮಹಿಳೆ ಮತ್ತು ಪುರುಷನ ನಡುವೆ ಒಪ್ಪಿಗೆಯಿಂದಲೇ ಲೈಂಗಿಕ ಸಂಪರ್ಕ ನಡೆದಿದೆ. ಆತ ಮದುವೆಯಾಗುತ್ತೇನೆ ಎಂದು ಭರವಸೆ ಕೂಡಾ ನೀಡಿದ್ದ. ಆದರೆ ಗರ್ಭಿಣಿಯಾದ ಬಳಿಕ ಆತ ತಪ್ಪಿಸಿಕೊಳ್ಳುತ್ತಿದ್ದಾನೆ. ಇಷ್ಟಾದರೂ ಆಕೆ ಗರ್ಭಕ್ಕೆ ೧೮ ವಾರ ಆಗುವವರೆಗೂ ಕಾದಳು. ಆದರೆ, ಆಗಲೂ ಒಪ್ಪದಿದ್ದಾಗ ಗರ್ಭಪಾತಕ್ಕೆ ನಿರ್ಧಾರ ಮಾಡಿದ್ದಾಳೆ. ಬಳಿಕ ಕಾನೂನು ಜಂಜಾಟದಲ್ಲಿ ಸಿಕ್ಕಿಬಿದ್ದಿದ್ದಾಳೆ. ಆಕೆ ಬಡ ರೈತ ಕುಟುಂಬದ ಹೆಣ್ಮಗಳು. ಐವರು ಮಕ್ಕಳ ಕುಟುಂಬವದು.
ಇದೀಗ ಮಹಿಳೆ ಸುಪ್ರೀಂಕೋರ್ಟ್ ಮೊರೆ ಹೊಕ್ಕಿರುವುದರಿಂದ ಪ್ರಕರಣ ಯಾವ ತಿರುವು ಪಡೆಯುತ್ತದೆ? ಗರ್ಭಪಾತಕ್ಕೆ ಹಠ ಹಿಡಿದಿರುವ ಮಹಿಳೆಗೆ ಸರ್ವೋಚ್ಚ ನ್ಯಾಯಾಲಯ ಅವಕಾಶ ಕೊಡುತ್ತದಾ? ಕಾದು ನೋಡಬೇಕು.
ಇದನ್ನೂ ಓದಿ| ಗರ್ಭಪಾತಕ್ಕೆ ಅವಕಾಶ ಕೊಡಲ್ಲ, ಬೇಕಿದ್ದರೆ ಮಗುವಿನ ಪಾಲನೆಗೆ ಹಣ ಕೊಡಲೂ ಸಿದ್ಧ ಎಂದ ದಿಲ್ಲಿ ಹೈಕೋರ್ಟ್ ಸಿಜೆ