ನವದೆಹಲಿ: ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಮೀರಿಸಲಿರುವ ಕುರಿತು ಜರ್ಮನ್ (German) ಮ್ಯಾಗ್‌ಜಿನ್‌ವೊಂದು ಭಾರತವನ್ನು ವ್ಯಂಗ್ಯ ಮಾಡುವ ಕಾರ್ಟೂನ್ ಪ್ರಕಟಿಸಿದೆ. ಈ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜರ್ಮನಿಯ ಡೆರ್ ಸ್ಪೀಗೆಲ್ (Der Spiegel) ಮ್ಯಾಗ್‌ಜಿನ್‌ನಲ್ಲಿ ಜನಾಂಗೀಯ ನಿಂದನೆಯ ಕಾರ್ಟೂನ್ (Cartoon) ಪ್ರಕಟವಾಗಿದೆ. ವ್ಯಂಗ್ಯಚಿತ್ರದಲ್ಲಿ ಜನರಿಂದ ತುಂಬಿ ತುಳುಕುತ್ತಿರುವ ಟ್ರೈನ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಜನರು ಟಾಪ್ ಮೇಲೂ ಕುಳಿತಿದ್ದಾರೆ. ಹಾಗೆಯೇ ಮತ್ತೊಂದು ಟ್ರಾಕ್‌ನಲ್ಲಿ ಚೀನಾದ ಬುಲೆಟ್ ರೈಲು ಕಾಣಬಹುದು. ಈ ವ್ಯಂಗ್ಯಚಿತ್ರದ ಮೂಲಕ ಭಾರತವು ಮೂಲಭೂತ ಸೌಕರ್ಯದಿಂದ ಬಳಲುತ್ತಿದ್ದು, ಚೀನಾ ತಾಂತ್ರಿಕವಾಗಿ ಮುಂದುವರಿದಿದೆ ಎಂಬುದನ್ನು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಜರ್ಮನ್ ಪತ್ರಿಕೆಯ ಈ ವರ್ಣಭೇದ ನೀತಿಯ ಕಾರ್ಟೂನ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
Der Spiegel: ಕಾಂಚನ್ ಗುಪ್ತಾ ಅವರ ಟ್ವೀಟ್
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಅವರು ಈ ವ್ಯಂಗ್ಯಚಿತ್ರವನ್ನು ಜನಾಂಗೀಯ ನಿಂದನೆ ಎಂದು ಕರೆದಿದ್ದಾರೆ. ಹಾಯ್ ಜರ್ಮನಿ, ಇದು ಅತಿರೇಕದ ತಾರತಮ್ಯವಾಗಿದೆ. ಡೆರ್ ಸ್ಪೀಗೆಲ್ ಭಾರತವನ್ನು ಈ ರೀತಿ ವ್ಯಂಗ್ಯಚಿತ್ರ ಮಾಡುವುದು ವಾಸ್ತವಕ್ಕೆ ಹೋಲಿಕೆಯಾಗುವುದಿಲ್ಲ. ಈ ಕಾರ್ಟೂನ್ ಉದ್ದೇಶವು ಭಾರತವನ್ನು ಕೆಳಮಟ್ಟಕ್ಕಿಳಿಸಿಸುವುದಾಗಿದೆ. ಭಾರತವು ಮಂಗಳಯಾನ ಕೈಗೊಂಡ ದೇಶವಾಗಿದೆ ಎಂದು ಕಾಂಚನ್ ಗುಪ್ತಾ ಅವರು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್‌ಗೆ ಸಾಕಷ್ಟು ಭಾರತೀಯರು ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಟೂನ್‌ನಲ್ಲಿ ಭಾರತೀಯರು ಟ್ರೈನ್ ಟಾಪ್ ಮೇಲೆ ಪ್ರಯಾಣ ಮಾಡುತ್ತಿರುವುದು ಜನಾಂಗೀಯ ನಿಂದನೆ ಮಾತ್ರವಲ್ಲದೇ, ತಪ್ಪು ಮಾಹಿತಿ ನೀಡುವುದೂ ಹೌದು ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: BBC Documentary: ಚೀನಾ ಹಣಕ್ಕಾಗಿ ಮೋದಿ ವಿರುದ್ಧ ಬಿಬಿಸಿ ಡಾಕ್ಯುಮೆಂಟರಿ; ಬಿಜೆಪಿ ಸಂಸದ ಮಹೇಶ್ ಜೇಠ್ಮಲಾನಿ ಆರೋಪ
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರೂ ಈ ವ್ಯಂಗ್ಯಚಿತ್ರ ಪ್ರಕಟಿಸಿದ ಮ್ಯಾಗ್‌ಜಿನ್ ವಿರುದ್ಧ ಕೆಂಡಕಾರಿದ್ದಾರೆ. ಭಾರತವನ್ನು ಅಪಹಾಸ್ಯ ಮಾಡುವ ನಿಮ್ಮ ಪ್ರಯತ್ನದ ಹೊರತಾಗಿಯೂ… ಪಿಎಂ ನರೇಂದ್ರ ಮೋದಿ ನೇತೃತ್ವದ ಭಾರತದ ವಿರುದ್ಧ ಬಾಜಿ ಕಟ್ಟಲು ಇದು ಬುದ್ಧಿವಂತಿಕೆ ಎನಿಸಿಕೊಳ್ಳುವುದಿಲ್ಲ. ಕೆಲವು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಜರ್ಮನಿಗಿಂತ ದೊಡ್ಡದಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.