Site icon Vistara News

ವಿಮಾನದ ಪೈಲಟ್‌, ಸಿಬ್ಬಂದಿ ಪರ್ಫ್ಯೂಮ್ ಬಳಸುವಂತಿಲ್ಲ! ಡಿಜಿಸಿಎ ಹೊಸ ರೂಲ್ಸ್?

perfume

ನವದೆಹಲಿ: ವಿಮಾನ ಪೈಲಟ್‌ಗಳು(Flight Pilots), ಸಿಬ್ಬಂದಿ (Flight Attendants) ಕುಡಿದು ಕೆಲಸ ಮಾಡುವುದು ನಿಷಿದ್ಧ ಇದ್ದೇ ಇದೆ. ಆದರೆ, ಸುಗಂಧ ದ್ರವ್ಯ (Perfume) ಕೂಡ ಬಳಸಬಾರದು ಎಂಬ ನಿಯಮ ಮಾಡಲಾಗುತ್ತಿದೆ ಎಂಬುದು ಕೊಂಚ ವಿಲಕ್ಷಣ ಎನಿಸಬಹುದು. ಆದರೆ, ಇದು ನಿಜ. ಭಾರತವು ಇಂಥದೊಂದು ರೂಲ್ಸ್ (DGCA Rules) ಮಾಡಲು ಹೊರಟಿದೆ. ಸುಗಂಧ ದ್ರವ್ಯ ಬಳಸುವ ಪೈಲಟ್ ಮತ್ತು ವಿಮಾನ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವ ನಿಯಮಗಳನ್ನು ಜಾರಿಗೆ ತರಲು ಹೊರಟಿದೆ.

ದೇಶದ ವಾಯುಯಾನ ಉದ್ಯಮವನ್ನು ಮೇಲ್ವಿಚಾರಣೆ ಹೊಣೆ ಹೊತ್ತಿರುವ ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶಕರ ಕಚೇರಿ (DGCA), ಇತ್ತೀಚೆಗೆ ಮದ್ಯ ಸೇವನೆಗೆ ಸಂಬಂಧಿಸಿದಂತೆ ಅದರ ಬೈಲಾಗಳಿಗೆ ಕೆಲವು ಅಪ್‌ಡೇಟ್ಸ್ ಮಾಡಲು ಸೂಚಿಸಿದೆ. ಅಲ್ಕೋಹಾಲಿಕ್ ಪಾನೀಯಗಳು ಮಾತ್ರವಲ್ಲದೇ ಪಾಸಿಟಿವ್ ಬ್ರೆತ್ ಟೆಸ್ಟ್‌ಗೆ ಕಾರಣವಾಗುವ ಮೌತ್ ವಾಶ್ ಸೇರಿದಂತೆ ಇನ್ನಿತರ ವಸ್ತುಗಳನ್ನು ನಿಷೇಧಿಸಿದ ಪ್ರಸ್ತಾಪ ಗೈಡ್‌ಲೈನ್ಸ್‌ನಲ್ಲಿದೆ. ಈ ಕೆಟಗರಿಗೆ ಹೊಸ ವಸ್ತುವನ್ನು ಸೇರಿಸಲಾಗುತ್ತಿದೆ. ಅದುವೇ- ಸುಗಂಧ ದ್ರವ್ಯ. ಪೈಲಟ್‌ಗಳು ಮತ್ತು ವಿಮಾನ ಸಿಬ್ಬಂದಿ ಪೈಲಟ್‌ಗಳು ಸುಗಂಧ ದ್ರವ್ಯವನ್ನು ಬಳಸುವಂತಿಲ್ಲ ಎನ್ನಲಾಗುತ್ತಿದೆ.

ವಿಮಾನ ಸಿಬ್ಬಂದಿ ಸದಸ್ಯರು ಯಾವುದೇ ಔಷಧವನ್ನು ಸೇವಿಸಬಾರದು ಅಥವಾ ಮೌತ್‌ವಾಶ್/ಟೂತ್ ಜೆಲ್/ಸುಗಂಧ ದ್ರವ್ಯ ಅಥವಾ ಆಲ್ಕೋಹಾಲುಯುಕ್ತ ಅಂಶವನ್ನು ಹೊಂದಿರುವ ಯಾವುದೇ ಉತ್ಪನ್ನವನ್ನು ಬಳಸಬಾರದು. ಈ ಸೇವನೆಗಳು ಪಾಸಿಟಿವ್ ಬ್ರೆಥ್ ಟೆಸ್ಟ್‌ಗೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: DGCA Report: ದೇಶಿ ವಿಮಾನಯಾನ ಪ್ರಯಾಣಿಕರಲ್ಲಿ ಶೇ.25 ಹೆಚ್ಚಳ! ಯಾವೆಲ್ಲ ಕಂಪನಿಗಳಿಗೆ ಲಾಭ?

ಔಷಧ ಅಥವಾ ಸೂಚಿಸಲಾದ ಯಾವುದೇ ಪಾನೀಯ ಹಾಗೂ ಸುಗಂಧ ದ್ರವ್ಯವನ್ನು ಬಳಸಿದ್ದರೆ ಅಂಥ ಸಿಬ್ಬಂದಿ ವಿಮಾನ ಹಾರಾಟ ನಡೆಸುವ ಮುಂಚೆಯೇ ಕಂಪನಿಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ. ಸುಗಂಧ ದ್ರವ್ಯಗಳು ಅಲ್ಪ ಪ್ರಮಾಣದ ಆಲ್ಕೋಹಾಲ್ ಹೊಂದಿರುತ್ತವೆ. ಹಾಗಿದ್ದೂ, ಸುಗಂಧ ದ್ರವ್ಯವನ್ನು ಬಳಸುವುದರಿಂದ ಪಾಸಿಟಿವ್ ಬ್ರೆತ್ ಟೆಸ್ಟ್‌ಗೆ ಕಾರಣವಾಗುತ್ತದೆ ಎಂಬುದರಲ್ಲಿ ಯಾವುದೇ ಖಚಿತತೆ ಇಲ್ಲ.

ಕುಡಿದು ವಿಮಾನ ಹಾರಾಟ ನಡೆಸಿದ್ದ ಜಪಾನ್ ಏರ್‌ಲೈನ್ಸ್ ಪೈಲಟ್ ಕತ್ಸುತೋಶಿ ಜಿತ್ಸುಕವಾ ಅವರಿಗೆ 2018ರಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ವಿಮಾನ ಟೇಕ್ ಆಫ್‌ ಕೆಲವೇ ಕ್ಷಣಗಳಲ್ಲಿ ಪೈಲಟ್ ಅವರ ಬ್ರೆತ್ ಟೆಸ್ಟ್ ಮಾಡಲಾಗಿತ್ತು. ಆಗ ಅವರ ರಕ್ತದಲ್ಲಿ ಅಲ್ಕೋಹಾಲ್ ಕಂಟೆಂಟ್ ಇರುವುದು ಪತ್ತೆಯಾಗಿತ್ತು. ಇದೇ ರೀತಿಯ ಘಟನೆಯು ಅಮೆರಿಕದಲ್ಲೂ ನಡೆದಿತ್ತು. ಆದರೆ, ಈಗ ಸುಗಂಧ ದ್ರವ್ಯ ಕೂಡ ಬ್ರೆತ್ ಟೆಸ್ಟ್‌ನಲ್ಲಿ ಪಾಸಿಟಿವ್ ಫಲಿತಾಂಶ ದೊರೆಯಲಿದೆ ಎಂಬುದು ಅಚ್ಚರಿಗೆ ಕಾರಣವಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version