ನವದೆಹಲಿ: ಸೋಮವಾರದಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ (Parliament Session 2024) ಆರಂಭವಾಗಿದ್ದು, ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ 280 ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು, ನರೇಂದ್ರ ಮೋದಿ ಅವರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸಂವಿಧಾನದ ಪ್ರತಿಯನ್ನು ತೋರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಸಂಸತ್ ಅಧಿವೇಶನದ ವೇಳೆ ರಾಷ್ಟ್ರಗೀತೆ ಹಾಡುವಾಗ ರಾಹುಲ್ ಗಾಂಧಿ ಗೈರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಹೌದು, ಸಂಸತ್ ಅಧಿವೇಶನ ಆರಂಭವಾಗುವ ಮೊದಲು ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆ ಹಾಡುವುದು ವಾಡಿಕೆ. ಆದರೆ, ನರೇಂದ್ರ ಮೋದಿ ಅವರಿಂದ ಹಿಡಿದು ಎಲ್ಲರೂ ರಾಷ್ಟ್ರಗೀತೆ ಹಾಡುವಾಗ ರಾಹುಲ್ ಗಾಂಧಿ ಅವರು ಗೈರಾಗಿದ್ದರು ಎಂಬುದಾಗಿ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಆಂಧ್ರಪ್ರದೇಶ ಬಿಜೆಪಿ ಉಪಾಧ್ಯಕ್ಷ ವಿಷ್ಣು ಕುಮಾರ್ ರೆಡ್ಡಿ ಅವರು ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದು, “ರಾಹುಲ್ ಗಾಂಧಿ ಅವರು ಭಾರತದ ರಾಷ್ಟ್ರಗೀತೆಗಿಂತ ದೊಡ್ಡವರು ಎಂಬುದಾಗಿ ಭಾವಿಸಿದ್ದಾರೆ. ರಾಷ್ಟ್ರಗೀತೆ ಮುಗಿದ ಬಳಿಕ ಅವರು ಸಂಸತ್‌ಗೆ ತಡವಾಗಿ ಬಂದಿದ್ದಾರೆ” ಎಂಬುದಾಗಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದ್ದಾರೆ.
So, Shehzada @RahulGandhi thinks he is bigger than the national anthem of our country.
— Vishnu Vardhan Reddy (@SVishnuReddy) June 24, 2024
He arrived late and entered the parliament just as the national anthem ended. pic.twitter.com/lpjfzvNbA7
ರಾಹುಲ್ ಗಾಂಧಿ ಅವರು ಸಂಸತ್ ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆ ಹಾಡುವಾಗ ಇರಲಿಲ್ಲ ಎಂಬ ಆರೋಪ ಕೇಳಿಬಂದು, ವಿಡಿಯೊ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ರಾಹುಲ್ ಗಾಂಧಿ ಅವರು ರಾಷ್ಟ್ರಗೀತೆ ಹಾಡುವ ಉಪಸ್ಥಿತರಿದ್ದರು. ಅವರು ಕೂಡ ಎದ್ದು ನಿಂತು ರಾಷ್ಟ್ರಗೀತೆ ಹಾಡಿ, ಗೌರವ ನೀಡಿದ್ದಾರೆ. ಇದೆಲ್ಲ ಬಿಜೆಪಿ ನಾಯಕರು, ಐಟಿ ಸೆಲ್ ಹರಡಿಸುತ್ತಿರುವ ಸುಳ್ಳು ಸುದ್ದಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದಕ್ಕೆ ಹೀಗೆ ಸುಳ್ಳು ಅನುಭವಿಸುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಬಿಳಿ ಟಿ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿ ಸಂಸತ್ ಅಧಿವೇಶನಕ್ಕೆ ಹಾಜರಾಗಿದ್ದರು. ಅವರು ರಾಷ್ಟ್ರಗೀತೆ ಹಾಡುವಾಗ ಉಪಸ್ಥಿತರಿದ್ದರು. ಸಂಸತ್ ಟಿವಿ ಲೋಗೊ ರಾಹುಲ್ ಗಾಂಧಿ ಅವರ ಮುಖದ ಮೇಲೆ ಇರುವುದರಿಂದ ವೈರಲ್ ಆಗಿರುವ ವಿಡಿಯೊದಲ್ಲಿ ರಾಹುಲ್ ಗಾಂಧಿ ಕಾಣಿಸುತ್ತಿಲ್ಲ. ಬಿಜೆಪಿ ಐಟಿ ಸೆಲ್ ಹರಡಿಸುವ ಸುಳ್ಳು ಸುದ್ದಿಗಳನ್ನು ಜನ ನಂಬುವುದಿಲ್ಲ ಎಂಬುದಾಗಿ ಫೋಟೊ ಸಮೇತ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Rahul Gandhi: ಎಲ್ಲರೂ ಬೈಯುವಾಗ ನೀವು ಪ್ರೀತಿ ಕೊಟ್ರಿ; ವಯನಾಡು ಜನತೆಗೆ ರಾಹುಲ್ ಗಾಂಧಿ ಭಾವುಕ ಪತ್ರ