ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೈನಿಕರು 2016ರಲ್ಲಿ ನುಗ್ಗಿ, ಸರ್ಜಿಕಲ್ ಸ್ಟ್ರೈಕ್ (Surgical Strike) (ನಿರ್ದಿಷ್ಟ ದಾಳಿ) ಮೂಲಕ ಉರಿ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದು ಈಗ ಇತಿಹಾಸ. ಆದರೆ, ಭಾರತೀಯ ಸೈನಿಕರು ಈಗ ಮತ್ತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿದ್ದಾರೆ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ಈ ವರದಿಯನ್ನು ರಕ್ಷಣಾ ಸಚಿವಾಲಯ ಅಲ್ಲಗಳೆದಿದೆ.
ವರದಿ ಹೇಳುವುದೇನು?
“ಭಾರತೀಯ ಸೇನೆಯ ಕಮಾಂಡೋಗಳು ಪಾಕ್ ಆಕ್ರಮಿತ ಕಾಶ್ಮೀರದ (PoK) ನೈಕಾಲ್ ಪ್ರದೇಶದಲ್ಲಿರುವ ಕೊಟ್ಲಿಯ ಮೇಲೆ ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿದ್ದಾರೆ. 2ರಿಂದ 2.5 ಕಿಲೋಮೀಟರ್ ಒಳನುಗ್ಗಿ ಉಗ್ರರ ನಾಲ್ಕು ನೆಲೆಗಳನ್ನು ಧ್ವಂಸಗೊಳಿಸಿದ್ದಾರೆ. ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ 8 ಉಗ್ರರನ್ನು ಹೊಡೆದುರುಳಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಬಳಿಕ ಭಾರತದ ಕಮಾಂಡೋಗಳು ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ” ಎಂದು ಹಿಂದಿ ಪತ್ರಿಕೆಯೊಂದು ವರದಿ ಮಾಡಿದೆ.
ಸರ್ಜಿಕಲ್ ಸ್ಟ್ರೈಕ್ ಕುರಿತು ಪತ್ರಿಕಾ ವರದಿ
ವರದಿ ಅಲ್ಲಗಳೆದ ಸಚಿವಾಲಯ
ರಕ್ಷಣಾ ಸಚಿವಾಲಯವು ಸರ್ಜಿಕಲ್ ಸ್ಟ್ರೈಕ್ ಕುರಿತ ವರದಿಯನ್ನು ಅಲ್ಲಗಳೆದಿದೆ. “ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಯಾವುದೇ ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿಲ್ಲ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯು ಸತ್ಯಕ್ಕೆ ದೂರವಾಗಿದೆ. ಬಾಲಾಕೋಟ್ ಸೆಕ್ಟರ್ ಸೇರಿ ಯಾವುದೇ ಪ್ರದೇಶದಲ್ಲಿ ಸೈನಿಕರು ಕಾರ್ಯಾಚರಣೆ ಕೈಗೊಂಡಿಲ್ಲ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Bipin Rawat: ಜನರಲ್ ಬಿಪಿನ್ ರಾವತ್ ಸ್ಮರಣಾರ್ಥ 2 ಟ್ರೋಫಿ ಘೋಷಿಸಿದ ನೌಕಾಪಡೆ
ಒಳನುಸುಳುವಿಕೆ ಯತ್ನ ವಿಫಲ
ಬಾಲಾಕೋಟ್ ಸೆಕ್ಟರ್ ಸೇರಿ ಹಲವು ಪ್ರದೇಶಗಳಿಂದ ಜಮ್ಮು-ಕಾಶ್ಮೀರ ಪ್ರವೇಶಿಸಲು ಉಗ್ರರು ನಡೆಸಿದ ಯತ್ನವನ್ನಷ್ಟೇ ಯೋಧರು ವಿಫಲಗೊಳಿಸಿದ್ದಾರೆ. ಕಾಶ್ಮೀರ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಮಾತ್ರ ಸದೆಬಡೆಯಲಾಗಿದೆ. ಆ ಮೂಲಕ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ. ಕಾಶ್ಮೀರವನ್ನು ಪ್ರವೇಶಿಸಲು ಹೆಚ್ಚಿನ ಉಗ್ರರು ಕಾಯುತ್ತಿದ್ದಾರೆ. ಹಾಗಾಗಿ ಹೆಚ್ಚಿನ ನಿಗಾ ವಹಿಸಿ, ಅವರ ಯತ್ನ ವಿಫಲಗೊಳಿಸಲಾಗಿದೆಯೇ ಹೊರತು ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿಲ್ಲ ಎಂದು ಸಚಿವಾಲಯ ತಿಳಿಸಿದೆ.