ಬೆಂಗಳೂರು: ಭಾರತದಲ್ಲಿ ಡಿಜಿಟಲ್ ಪೇಮೆಂಟ್ (Digital Payments) ವಿಧಾನ ಜನಪ್ರಿಯವಾಗಿದೆ. ಮಾಲ್‌ಗಳಿಂದ ಹಿಡಿದು ತಳ್ಳುಗಾಡಿಯವರೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (UPI) ಮೂಲಕ ವ್ಯವಹಾರ ನಡೆಸಲಾಗುತ್ತದೆ. ಗೂಗಲ್ ಪೇ, ಪೇಟಿಎಂ, ಫೋನ್ ಪೇ, ಅಮೆಜಾನ್ ಪೇ ಹಾಗೂ ಇತರ ಪಾವತಿ ವ್ಯವಸ್ಥೆಗಳು ಭಾರತದಲ್ಲಿ ಯುಪಿಐ ಪಾವತಿ ವ್ಯವಸ್ಥೆಯ ಬಳಕೆಯನ್ನು ವ್ಯಾಪಕಗೊಳಿಸಿವೆ. ಇದೀಗ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ (NPCI) ಪಾವತಿ ಅಪ್ಲಿಕೇಶನ್‌ಗಳಿಗೆ ಕೆಲವೊಂದು ನಿರ್ದೇಶನಗಳನ್ನು ನೀಡಿವೆ. ಅದರ ಪ್ರಕಾರ ಬಳಕೆಯಲ್ಲಿ ಇಲ್ಲದ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳ್ಳಲಿವೆ.
ಎನ್‌ಪಿಸಿಐ ನೀಡಿರುವ ಸೂಚನೆ ಏನು?
ಡಿಸೆಂಬರ್ 31ರವರೆಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಬಳಸದೇ ಇರುವ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸುವಂತೆ ಎನ್‌ಪಿಸಿಐ ಪಾವತಿ ಅಪ್ಲಿಕೇಶನ್‌ಗಳಿಗೆ ನಿರ್ದೇಶನ ನೀಡಿದೆ. ಗ್ರಾಹಕರು ತಮ್ಮ ಹಳೆಯ ಸಂಖ್ಯೆಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ಬೇರ್ಪಡಿಸದೆ ತಮ್ಮ ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸಿದರೆ ಅನಪೇಕ್ಷಿತ ಹಣ ವರ್ಗಾವಣೆಯನ್ನು ತಡೆಯುವ ಗುರಿಯನ್ನು ಇದು ಹೊಂದಿದೆ.
ಈ ಬಗ್ಗೆ ಎಲ್ಲ ಬಳಕೆದಾರರಿಗೆ ಸುತ್ತೋಲೆ ನೀಡಲಾಗಿದೆ. ಎನ್‌ಪಿಸಿಐ ನಿರ್ದೇಶನದ ಪ್ರಕಾರ, ಒಂದು ವರ್ಷದಿಂದ ನಿಷ್ಕ್ರಿಯವಾಗಿರುವ ಯುಪಿಐ ಐಡಿಗಳನ್ನು ಅಂದರೆ ಒಂದು ವರ್ಷದವರೆಗೆ ಯಾವುದೇ ವಹಿವಾಟುಗಳಿಲ್ಲದ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇದಕ್ಕಾಗಿ ಡಿಸೆಂಬರ್ 31, 2023 (ನಾಳೆ) ಗಡುವು ನಿಗದಿಪಡಿಸಲಾಗಿದೆ. ಒಂದು ವರ್ಷದವರೆಗೆ ವ್ಯವಹಾರಕ್ಕಾಗಿ ತಮ್ಮ ಯುಪಿಐ ಐಡಿಯನ್ನು ಬಳಸದಿದ್ದರೆ ಅಂತಹ ವ್ಯಕ್ತಿ ಮತ್ತು ಅವರ ಬ್ಯಾಂಕ್ ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ (ಗೂಗಲ್ ಪೇ, ಫೋನ್ ಪೇ, ಪೇಟಿಎಂ ಇತ್ಯಾದಿ)ಗೆ ಇಮೇಲ್ ಅಥವಾ ಸಂದೇಶವನ್ನು ಕಳುಹಿಸಿ ಎಚ್ಚರಿಸಲಾಗುತ್ತಿದೆ ಎಂದು ಎನ್‌ಪಿಸಿಐ ಹೇಳಿದೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಪ್ರಕಾರ, ಟೆಲಿಕಾಂ ಕಂಪನಿಗಳು 90 ದಿನಗಳ ನಂತರ ಹೊಸ ಚಂದಾದಾರರಿಗೆ ನಿಷ್ಕ್ರಿಯಗೊಂಡ ಮೊಬೈಲ್ ಸಂಖ್ಯೆಗಳನ್ನು ನೀಡಬಹುದು. ಬಳಕೆದಾರರು ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆಯನ್ನು ನವೀಕರಿಸದಿದ್ದರೆ ಇದು ಉದ್ದೇಶಪೂರ್ವಕವಲ್ಲದ ವರ್ಗಾವಣೆಗಳಿಗೆ ಕಾರಣವಾಗಬಹುದು. ಇದರ ಪರಿಣಾಮವಾಗಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ಸ್ (TPAP) ಮತ್ತು ಪಾವತಿ ಸೇವಾ ಪೂರೈಕೆದಾರರು (PSP) ಡಿಸೆಂಬರ್ 31, 2023ರೊಳಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಯುಪಿಐ ಖಾತೆ ರದ್ದಾಗದಂತೆ ನೋಡಿಕೊಳ್ಳುವುದು ಬಹಳ ಸುಲಭ. ಯುಪಿಐ ಐಡಿ ರದ್ದಾಗದಿರಲು 2023ರ ಡಿಸೆಂಬರ್ 31ರೊಳಗೆ ಅದನ್ನು ಬಳಸಿ ಕನಿಷ್ಠ ಒಂದಾದರೂ ವ್ಯವಹಾರ ಪೂರ್ಣಗೊಳಿಸಿದರೆ ಸಾಕು. ಕೆಲವೊಮ್ಮೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದಾಗ ಆ ನಂಬರ್‌ಗೆ ಲಿಂಕ್ ಮಾಡಲಾದ ಯುಪಿಐ ಐಡಿಯನ್ನು ನಿಷ್ಕ್ರಿಯಗೊಳಿಸಲು ಮರೆತು ಹೋಗುವುದು ಈ ಸಮಸ್ಯೆಗೆ ಕಾರಣ. ತಮ್ಮ ಯುಪಿಐ ಐಡಿಗಳಿಗೆ ಸಂಬಂಧಿಸಿದ ಎಲ್ಲ ಫೋನ್ ಸಂಖ್ಯೆಗಳನ್ನು ಪರಿಶೀಲಿಸಬೇಕು ಮತ್ತು ಅವುಗಳಲ್ಲಿ ಯಾವುದೂ ಮೂರು ತಿಂಗಳಿಗಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.
ಎನ್‌ಪಿಸಿಐ ಹೇಳಿದ್ದೇನು?
- ಎಲ್ಲ ಟಿಪಿಎಪಿಗಳು ಮತ್ತು ಪಿಎಸ್ಪಿ ಬ್ಯಾಂಕ್ಗಳು ಯುಪಿಐ ಅಪ್ಲಿಕೇಷನ್ಗಳಿಂದ ಕನಿಷ್ಠ ಒಂದು ವರ್ಷದವರೆಗೆ ಯಾವುದೇ ಹಣಕಾಸು ವಹಿವಾಟು ಅಥವಾ ಹಣಕಾಸೇತರ ವಹಿವಾಟುಗಳನ್ನು ಮಾಡದ ಗ್ರಾಹಕರ ಯುಪಿಐ ಐಡಿಗಳು ಮತ್ತು ಸಂಬಂಧಿತ ಯುಪಿಐ ಸಂಖ್ಯೆಗಳು ಮತ್ತು ಫೋನ್ ಸಂಖ್ಯೆಗಳನ್ನು ಗುರುತಿಸಬೇಕು.
- ವಹಿವಾಟು ನಡೆಸದ ಗ್ರಾಹಕ ಯುಪಿಐ ಐಡಿಗಳು ಮತ್ತು ಯುಪಿಐ ಸಂಖ್ಯೆಗಳನ್ನು ರದ್ದುಗೊಳಿಸಲಾಗುತ್ತದೆ.
- ಇನ್ವರ್ಡ್ ಕ್ರೆಡಿಟ್ ಬ್ಲಾಕ್ ಯುಪಿಐ ಐಡಿಗಳು ಮತ್ತು ಫೋನ್ ಸಂಖ್ಯೆಗಳನ್ನು ಹೊಂದಿರುವ ಗ್ರಾಹಕರು ಯುಪಿಐ ಮ್ಯಾಪರ್ ಲಿಂಕ್ಗಳಿಗಾಗಿ ಆಯಾ ಯುಪಿಐ ಅಪ್ಲಿಕೇಶನ್ಗಳಲ್ಲಿ ಮರು ನೋಂದಾಯಿಸಿಕೊಳ್ಳಬೇಕು.
ಇದನ್ನೂ ಓದಿ: New Year 2024: ಹೊಸ ವರ್ಷಕ್ಕೆ ನಿರ್ಣಯಗಳನ್ನು ಹೀಗೂ ಕೈಗೊಳ್ಳಬಹುದು!