ನವದೆಹಲಿ: ಆಂತರಿಕ ಬಿಕ್ಕಟ್ಟು, ರಾಜಸ್ಥಾನದಲ್ಲಿ ಬಂಡಾಯ ಸೇರಿ ಹಲವು ನಕಾರಾತ್ಮಕ ಅಂಶಗಳ ಮಧ್ಯೆಯೇ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಗೆ ನಡೆಯಲಿರುವ ಚುನಾವಣೆಯು (Congress President) ರಂಗೇರುತ್ತಿದೆ. ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸ್ಪರ್ಧೆ ಖಚಿತವಾಗಿದ್ದು, ಶಶಿ ತರೂರ್ ಅವರಿಗೆ ತೀವ್ರ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಹಾಗಾಗಿ, ಅಕ್ಟೋಬರ್ ೧೭ರಂದು ನಡೆಯುವ ಚುನಾವಣೆಯು ಕುತೂಹಲ ಮೂಡಿಸಿದೆ.
ಚುನಾವಣೆಗೆ ಸ್ಪರ್ಧಿಸಲು ದಿಗ್ವಿಜಯ್ ಸಿಂಗ್ ಅವರು ಪಕ್ಷದಿಂದ ನಾಮಪತ್ರ ಸ್ವೀಕರಿಸಿದ್ದು, ಉಮೇದುವಾರಿಕೆ ಸಲ್ಲಿಕೆಯ ಕೊನೆಯ ದಿನವಾದ ಶುಕ್ರವಾರ ಸಲ್ಲಿಸಲಿದ್ದಾರೆ. “ನಾಮಪತ್ರ ಸ್ವೀಕರಿಸಲು ಪಕ್ಷದ ಕಚೇರಿಗೆ ಆಗಮಿಸಿದ್ದೇನೆ” ಎಂದು ಸುದ್ದಿಗಾರರಿಗೆ ತಿಳಿಸುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದಾರೆ. ಶಶಿ ತರೂರ್ ಅವರೂ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮತ್ತೊಂದೆಡೆ, ದಿಗ್ವಿಜಯ ಸಿಂಗ್ ಅವರೂ ಸ್ಪರ್ಧಿಸುತ್ತಿರುವುದಕ್ಕೆ ಶಶಿ ತರೂರ್ ಸಂತಸ ವ್ಯಕ್ತಪಡಿಸಿದ್ದಾರೆ.
ಸೋನಿಯಾ-ಗೆಹ್ಲೋಟ್ ಭೇಟಿ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ. ರಾಜಸ್ಥಾನ ಸಿಎಂ ಆಗಿಯೇ ಮುಂದುವರಿಯುವ ಕಾರಣ ಗೆಹ್ಲೋಟ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಗೆಹ್ಲೋಟ್ ಭೇಟಿಯು ನಿರೀಕ್ಷೆ ಹೆಚ್ಚಿಸಿದೆ. ಭೇಟಿಗೆ ನಿಖರ ಕಾರಣ ತಿಳಿದುಬರದಿದ್ದರೂ, ಇತ್ತೀಚೆಗೆ ರಾಜಸ್ಥಾನದಲ್ಲಿ ಭುಗಿಲೆದ್ದ ಭಿನ್ನಮತದ ಕುರಿತು ವಿವರಣೆ ನೀಡಲು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Congress President | ಕೈ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ದಿಗ್ವಿಜಯ್ ಸಿಂಗ್ ರೆಡಿ, ಸೆ.30ಕ್ಕೆ ನಾಮಪತ್ರ ಸಲ್ಲಿಕೆ?