Site icon Vistara News

ಹಿರಿಯ ರಾಜತಾಂತ್ರಿಕ ಸತಿಂದರ್‌ ಕುಮಾರ್‌ ಲಾಂಬಾ ನಿಧನ

Satinder Kumar Lambah

ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ಕುರಿತಾದ ನೇಪಥ್ಯದ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ರಾಜತಾಂತ್ರಿಕ ಸತಿಂದರ್‌ ಕುಮಾರ್‌ ಲಾಂಬಾ ನಿಧನರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಸಲುತ್ತಿದ್ದ ಅವರಿಗೆ ೮೧ ವರ್ಷ ವಯಸ್ಸಾಗಿತ್ತು.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ರಷ್ಯಾದೊಂದಿಗಿನ ಭಾರತದ ರಾಜತಾಂತ್ರಿಕ ಸಂಬಂಧ ನಿರ್ವಹಣೆಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಅಟಲ್‌ ಬಿಹಾರಿ ವಾಜಪೇಯಿ ಅವರ ಸರಕಾರವಿದ್ದಾಗ ೨೦೦೧-೨೦೦೪ರವರೆಗೆ ಅಫ್ಘಾನಿಸ್ತಾನದಲ್ಲಿ ಭಾರತದ ವಿಶೇಷ ರಾಯಭಾರಿಯಾಗಿ ಕೆಲಸ ಮಾಡಿದ್ದರು. ನಂತರ, ಮನಮೋಹನ್‌ ಸಿಂಗ್‌ ಅವರ ಸರಕಾರದಲ್ಲೂ ತಮ್ಮ ಈ ಸೇವೆಯನ್ನು ಮುಂದುವರೆಸಿದ್ದು, ರಾಜಕೀಯ ಒಲವು-ನಿಲುವುಗಳ ಹೊರತಾಗಿ ರಾಜತಾಂತ್ರಿಕ ವಲಯದಲ್ಲಿ ಬೇಕಾದವರಾಗಿದ್ದರು ಎಂಬುದನ್ನು ತೋರಿಸುತ್ತದೆ. ಲಾಂಬ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌, ʻʻನಮ್ಮ ಗೌರವಾನ್ವಿತ ರಾಜತಾಂತ್ರಿಕರಲ್ಲಿ ಒಬ್ಬರಾಗಿದ್ದ ಅವರು, ತಮ್ಮ ಮುಂದಿನ ಪೀಳಿಗೆಗೆ ನೈಜ ಮಾರ್ಗದರ್ಶಕರುʼ’ ಎಂದು ಟ್ವೀಟ್‌ ಮಾಡಿದ್ದಾರೆ. 

೧೯೭೧ರಲ್ಲಿ ಬಾಂಗ್ಲಾದೇಶದ ರಚನೆಯ ನಂತರ ಢಾಕಾದಲ್ಲಿ ಆರಂಭವಾದ ಭಾರತೀಯ ದೂತಾವಾಸದ ಭಾಗವಾಗಿದ್ದರು. ೨೦೦೧ರಲ್ಲಿ ತಾಲಿಬಾನ್‌ ಆಡಳಿತ ಕೊನೆಗೊಂಡ ನಂತರ ಅಫ್ಘಾನಿಸ್ತಾನದಲ್ಲಿ ಭಾರತವನ್ನು ಪ್ರತಿನಿಧಿಸಿದ ತಂಡದ ನೇತೃತ್ವ ವಹಿಸಿದ್ದರು. ೨೦೦೦ ಇಸವಿಯಲ್ಲಿ ರಷ್ಯಾದ ಮಾಸ್ಕೋದಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದ ಅವರು, ಆ ದೇಶದೊಂದಿಗಿನ ಸಂಬಂಧ ವೃದ್ಧಿಯಲ್ಲಿ ಮಹತ್ತರ ಕೆಲಸ ಮಾಡಿದ್ದರು.

ಪಾಕಿಸ್ತಾನದಲ್ಲಿ ಮುಷರಫ್‌ ಆಡಳಿತಾವಧಿಯಲ್ಲಿ ನೇಮಕಗೊಂಡಿದ್ದ ತಾರಿಖ್‌ ಅಜೀಜ್‌ ಅವರೊಂದಿಗೆ ಲಾಂಬ ನಡೆಸಿದ ನೇಪಥ್ಯದ ಮಾತುಕತೆ ರಾಜತಾಂತ್ರಿಕ ವಲಯದಲ್ಲಿ ʻನಾಲ್ಕಂಶಗಳ ಸೂತ್ರʼ ಎಂದೇ ಹೆಸರಾಗಿದ್ದು, ಕಾಶ್ಮೀರ ಬಿಕ್ಕಟ್ಟಿನ ಪರಿಹಾರದತ್ತ ಇರಿಸಿದ ಮಹತ್ವದ ಹೆಜ್ಜೆ ಎನಿಸಿತ್ತು. ಈ ಸೂತ್ರದಲ್ಲಿ, ಗಡಿಯನ್ನು ಪರಾಮರ್ಶಿಸದೆ ಸೇನೆಯನ್ನು ಹಿಂತೆಗೆದುಕೊಳ್ಳಬೇಕು, ಈ ಪ್ರದೇಶ ಸ್ವಾಯತ್ತ ಆಡಳಿತಕ್ಕೆ ಒಳಪಡಬೇಕು ಮತ್ತು ಈ ಭಾಗದಲ್ಲಿ ಎರಡೂ ದೇಶಗಳು ಜಂಟಿಯಾಗಿ ಮೇಲ್ವಿಚಾರಣೆ ನಡೆಸಬೇಕು ಎಂಬ ಅಂಶಗಳು  ಸೇರಿದ್ದವು. ಆದರೆ ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಪಾಕಿಸ್ತಾನದ ಆಂತರಿಕ ಸಮಸ್ಯೆಗಳು ಅಡ್ಡಿಯಾಗಿ, ಮುಷರಫ್‌ ಸರಕಾರದ ಪತನದೊಂದಿಗೆ ಈ ಕಾರ್ಯಸೂಚಿಯೂ ನನೆಗುದಿಗೆ ಬಿತ್ತು. ಆನಂತರದ ವರ್ಷಗಳಲ್ಲಿ ಭಾರತದಲ್ಲಿ ಪದೇಪದೆ ನಡೆದ ಭಯೋತ್ಪಾದಕ ದಾಳಿಗಳಿಂದಾಗಿ ಉಭಯ ದೇಶಗಳ ಸಂಬಂಧ ಇನ್ನಷ್ಟು ಹದಗೆಟ್ಟು, ಇಂಥ ಪ್ರಸ್ತಾಪವನ್ನು ಜಾರಿಗೊಳಿಸುವುದು ದುಸ್ತರ ಎನ್ನುವ ಸ್ಥಿತಿ ತಲುಪಿದ್ದು ಈಗ ಇತಿಹಾಸ.

ಭಾರತ-ಪಾಕ್‌ ನಡುವಿನ ನೇಪಥ್ಯದ ಮಾತುಕತೆಗಳ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತನಾಡದೆ ಉಳಿದ ಲಾಂಬ, ೨೦೧೪ರಲ್ಲಿ ಶ್ರೀನಗರದ ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಮಾತನಾಡುವಾಗ ಒಮ್ಮೆ ಈ ಬಗ್ಗೆ ಪ್ರಸ್ತಾಪಿಸಿದ್ದರು. ʻ‌ʻಮನಮೋಹನ್‌ ಸಿಂಗ್‌ ಅವರು ಉಭಯ ದೇಶಗಳ ನಡುವಿನ ಗಡಿಯ ವಿಷಯಕ್ಕೆ ಕೈಹಾಕಲು ಅಥವಾ ಈ ಕುರಿತ ಸಂವಿಧಾನ ತಿದ್ದುಪಡಿ ಮಾಡಲು ಬಯಸಿರಲಿಲ್ಲ. ಬದಲಿಗೆ, ಗಡಿಯ ಎರಡೂ ಕಡೆಗಿರುವ ಕಾಶ್ಮೀರಿಗರ ನಡುವೆ ವ್ಯಾಪಾರ, ವ್ಯವಹಾರ, ಸಂವಹನವನ್ನು ಸಾಧ್ಯವಾಗಿಸಿ, ಕಾಶ್ಮೀರದ ಜನತೆಯ ಅಭಿವೃದ್ಧಿಯನ್ನು ಸಾಧ್ಯವಾಗಿಸುವ ಮೂಲಕ ಹಿಂಸೆಯ ವೃತ್ತಕ್ಕೆ ಅಂತ್ಯ ಹಾಡಬಯಸಿದ್ದರುʼʼ ಎಂದು ವಿವರಿಸಿದ್ದರು.

೩೫ ವರ್ಷಗಳ ಅವಧಿಯಲ್ಲಿ ಆರು ಪ್ರಧಾನಮಂತ್ರಿಗಳ ಜೊತೆಯಲ್ಲಿ ತಾವು ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದ ಅವರು, ʻಪ್ರತಿಯೊಬ್ಬರೂ ಪಾಕಿಸ್ತಾನದ ಜೊತೆಗಿನ ಸಂಬಂಧ ಸುಧಾರಣೆಯನ್ನೇ ಬಯಸಿದ್ದರುʼ ಎಂದು ಹೇಳಿದ್ದರು. ಅವಿಭಜಿತ ಭಾರತದ ಪೇಶಾವರದ ಸಮೀಪ ೧೯೪೧ರಲ್ಲಿ ಜನಿಸಿದ್ದ ಲಾಂಬ, ಪಾಕಿಸ್ತಾನ-ಅಫ್ಘಾನಿಸ್ತಾನ-ಇರಾನ್‌ ದೇಶಗಳ ಜಂಟಿ ಕಾರ್ಯದೃಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಹಂಗರಿ ಮತ್ತು ಜರ್ಮನಿ ದೇಶಗಳ ದೂತಾವಾಸದ ನೇತೃತ್ವ ವಹಿಸಿದ್ದ ಅವರು, ಭಾರತ ಮತ್ತು ರಷ್ಯಾದ ನಡುವೆ ತೈಲ ಒಪ್ಪಂದಗಳು ಏರ್ಪಡುವಲ್ಲಿ ಪ್ರಮುಖರಾಗಿದ್ದರು.

ಇದನ್ನೂ ಓದಿ: 23 ಗಣ್ಯರ ಕಣ್ಣಲ್ಲಿ 20 ವರ್ಷದ ಮೋದಿ ಆಡಳಿತ: ಮೋದಿ@20 ಕೃತಿ ಬಿಡುಗಡೆ

Exit mobile version