Site icon Vistara News

Budget 2024: ನೇರ ಹಣ ವರ್ಗಾವಣೆಯಿಂದ 2.7 ಲಕ್ಷ ಕೋಟಿ ರೂ. ಉಳಿತಾಯ!

Nirmala Seetaraman

Direct benefit transfer helps govt save Rs 2.7 lakh crore, FM says in budget 2024 speech

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಬಜೆಟ್‌ಗೆ (Budget 2024) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ತೆರೆ ಎಳೆದಿದ್ದಾರೆ. ದೇಶದ ಜನರ ಮನೆಗಳಿಗೆ ಸೋಲಾರ್‌ ಅಳವಡಿಕೆಯಿಂದ ಹಿಡಿದು ಎರಡು ಕೋಟಿ ಮನೆ ನಿರ್ಮಾಣ ಸೇರಿ ಹಲವು ಘೋಷಣೆಗಳನ್ನು ನಿರ್ಮಲಾ ಸೀತಾರಾಮನ್‌ ಮಾಡಿದ್ದಾರೆ. ಇದೇ ವೇಳೆ ಅವರು, ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಿಂದ (Direct Benefit Transfers) ಕೇಂದ್ರ ಸರ್ಕಾರಕ್ಕೆ 2.7 ಲಕ್ಷ ಕೋಟಿ ರೂ. ಉಳಿತಾಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

“ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವುದರಿಂದ ಕೇಂದ್ರ ಸರ್ಕಾರದ ಹಣ ಪೋಲಾಗುವುದನ್ನು ತಡೆಯಲಾಗಿದೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳ ಮೂಲಕ ಜನರ ಖಾತೆಗಳಿಗೆ 26.5 ಲಕ್ಷ ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ಹಣ ಉಳಿತಾಯವಾಗಿದೆ. ನೇರ ಹಣ ವರ್ಗಾವಣೆಯಿಂದಾಗಿ ಕೇಂದ್ರ ಸರ್ಕಾರದ 2.7 ಲಕ್ಷ ಕೋಟಿ ರೂಪಾಯಿಯನ್ನು ಉಳಿಸಲಾಗಿದೆ” ಎಂದು ಬಜೆಟ್‌ ವೇಳೆ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪಿಸಿದರು.

ಬಜೆಟ್‌ಗೆ ಮೋದಿ ಮೆಚ್ಚುಗೆ

ಮುಂಗಡಪತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ದೇಶದ ಬಡವರು, ಮಹಿಳೆಯರು, ಯುವಕರು ಹಾಗೂ ರೈತರ ಏಳಿಗೆಯನ್ನು ದೃಷ್ಟಿಯಲ್ಲಿಕೊಂಡು ಮಂಡಿಸಿರುವ ಬಜೆಟ್‌ ಇದಾಗಿದೆ. 2047ರ ವೇಳೆಗೆ ವಿಕಸಿತ ಭಾರತದ ಕಲ್ಪನೆ ಸಾಕಾರಗೊಳ್ಳಲು ಇದು ಸಹಕಾರಿಯಾಗಲಿದೆ” ಎಂದು ಹೇಳಿದ್ದಾರೆ. “ವಿಕಸಿತ ಭಾರತ ಕಲ್ಪನೆಗೆ ಪ್ರಮುಖವಾಗಿರುವ ರೈತರು, ಮಹಿಳೆಯರು, ಯುವಕರು ಹಾಗೂ ಬಡವರ ಏಳಿಗೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಅದರಲ್ಲೂ, ನಾವೀನ್ಯತೆ ಹಾಗೂ ಸಂಶೋಧನೆಗೆ ಒಂದು ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ ಯುವಕರಿಗೆ ಹೊಸ ಉದ್ಯೋಗಗಳು ಸಿಗಲಿವೆ. ಆಧುನಿಕ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು ಬಜೆಟ್‌ ಏಣಿಯಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Budget 2024: ಇದು ‘ನಿರ್ಮಲ’ ಬಜೆಟ್! ತೆರಿಗೆ ಬದಲಾವಣೆಯೂ ಇಲ್ಲ, ಪುಕ್ಕಟೆ ಯೋಜನೆಯೂ ಇಲ್ಲ!

ರೈಲ್ವೆ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟ ಕುರಿತು ಮಾತನಾಡಿದ ಅವರು, “ಸುಮಾರು 40 ಸಾವಿರ ರೈಲು ಬೋಗಿಗಳನ್ನು ವಂದೇ ಭಾರತ್‌ ರೈಲು ಬೋಗಿಗಳ ದರ್ಜೆಗೆ ಏರಿಸಲಾಗುತ್ತದೆ. ಇವುಗಳನ್ನು ಸಾಮಾನ್ಯ ರೈಲುಗಳಿಗೆ ಅಳವಡಿಸಲಾಗುತ್ತದೆ. ಇದರಿಂದ ದೇಶದ ಲಕ್ಷಾಂತರ ಜನ ಉನ್ನತ ಮಟ್ಟದ ರೈಲು ಬೋಗಿಗಳಲ್ಲಿ ಆರಾಮದಾಯಕವಾಗಿ ಪ್ರಯಾಣಿಸಲು ಸಾಧ್ಯವಾಗಲಿದೆ. ಸರ್ವರ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬಜೆಟ್‌ ಮಂಡಿಸಿದೆ” ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version