ಚೆನ್ನೈ: ಆರು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ ನಿರ್ದೇಶಕ, ಪೊನ್ನಿಯಿನ್ ಸೆಲ್ವನ್ ಎಂಬ ಚಾರಿತ್ರಿಕ ಕಥಾನಕವನ್ನು ಅಣಿ ಮಾಡಿ ಬಿಡುಗಡೆಗೆ ಕಾಯುತ್ತಿರುವ ಮಣಿರತ್ನಂ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಅವರಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ. ಹಾಗಂತ ಪಾಸಿಟಿವ್ ಎಂದು ದೃಢಪಟ್ಟಿಲ್ಲ. ಆದರೆ, ಅವರ ಮನೆಯಲ್ಲಿ ೯೦ ವರ್ಷ ಮೀರಿದ ತಂದೆ-ತಾಯಿ ಇರುವುದರಿಂದ ಐಸೊಲೇಟ್ ಆಗುವ ಉದ್ದೇಶದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಮಹತ್ವಾಕಾಂಕ್ಷೆಯ ಪೊನ್ನಿಯಿನ್ ಸೆಲ್ವನ್ ಚಿತ್ರದ ಟೀಸರ್ ಬಿಡುಗಡೆಯಾದ ಬಿಡುಗಡೆಯಾದ ಬೆನ್ನಿಗೇ ಅವರಿಗೆ ಕೆಲವೊಂದು ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ. ಚೋಳರ ಕಾಲದ ಚಾರಿತ್ರಿಕ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ವಿಕ್ರಮ್, ಐಶ್ವರ್ಯ ರೈ, ಜಯಂ ರವಿ, ಕಾರ್ತಿ, ತೃಷಾ, ಜಯರಾಂ, ಐಶ್ವರ್ಯ ಲಕ್ಷ್ಮಿ, ಶರತ್ ಕುಮಾರ್, ಶೋಭಿತಾ ಧುಲಿಪಾಲಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಚಿತ್ರದ ಟೀಸರ್ ಮತ್ತು ಪೋಸ್ಟರ್‌ಗಳು ಸಾಕಷ್ಟು ಜನಪ್ರಿಯತೆ ಪಡೆದಿವೆ.
ವಿವಾದದ ಸುಳಿಯಲ್ಲಿ ಚಿತ್ರ
ಈ ನಡುವೆ ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕೆ ಸಂಬಂಧಿಸಿ ವಿವಾದವೊಂದು ಎದ್ದಿದೆ. ವಿಕ್ರಮ್ ನಿರ್ವಹಿಸಿರುವ ಆದಿತ್ಯ ಕರಿಕಾಳನ್ ಪಾತ್ರಕ್ಕೆ ಸಂಬಂಧಿಸಿ ಕೆಲವೊಂದು ಐತಿಹಾಸಿಕ ಸತ್ಯಗಳನ್ನು ಹಾಳುಗೆಡವಲಾಗಿದೆ ಎಂದು ಆರೋಪಿಸಿ ವಕೀಲರೊಬ್ಬರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಕರಿಕಾಳನ್ ತಿಲಕ ಧರಿಸಿರುವಂತೆ ತೋರಿಸಲಾಗಿದೆ. ಆದರೆ, ಚೋಳರ ಕಾಲದಲ್ಲಿ ತಿಲಕ ಧರಿಸುವ ಪದ್ಧತಿಯೇ ಇರಲಿಲ್ಲ ಎಂದು ವಕೀಲರು ವಾದಿಸಿದ್ದಾರೆ.
ಇದನ್ನೂ ಓದಿ| ಯೂಟ್ಯೂಬ್ನಲ್ಲಿ ಟ್ರೆಂಡ್ ಆದ ಪೊನ್ನಿಯನ್ ಸೆಲ್ವನ್ ಟೀಸರ್, ನಟಿ ಐಶ್ವರ್ಯಾ ರೈ ಲುಕ್‌ಗೆ ಜನ ಫಿದಾ