Site icon Vistara News

Supreme Court: ‘ಮಹಾ’ ಸ್ಪೀಕರ್‌ಗೆ ಸುಪ್ರೀಂ ಮಂಗಳಾರತಿ! ಶಾಸಕರ ಅನರ್ಹ ಅರ್ಜಿ ಇತ್ಯರ್ಥಕ್ಕೆ ವಿಳಂಬ ನೀತಿ

supreme court

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ (Maharashtra Speaker) ವಿರುದ್ದ ಹರಿಹಾಯ್ದಿರುವ ಸುಪ್ರೀಂ ಕೋರ್ಟ್(Supreme Court), 2022ರ ಶಾಸಕರ ಅನರ್ಹ ಅರ್ಜಿಗಳನ್ನು ಇತ್ಯರ್ಥ ಮಾಡುವುದರಲ್ಲಿ ವಿಳಂಬ ತೋರಿಸುತ್ತಿರುವುದು ಸರಿಯಲ್ಲ(Disqualification Decision). ಈ ನೀತಿಯನ್ನು ಶಾಶ್ವತವಾಗಿ ಮುಂದುವರಿಯಲು ಸಾಧ್ಯವಿಲ್ಲ. ಕೂಡಲೇ ಈ ಕುರಿತು ವೇಳಾಪಟ್ಟಿಯನ್ನು ನಿಗದಿಪಡಿಸುವಂತೆ ಸೂಚಿಸಿದೆ.

2022ರಲ್ಲಿ ಉದ್ಧವ್ ಠಾಕ್ರೆ ಸರ್ಕಾರದಲ್ಲಿ ಸಚಿವರಾಗಿದ್ದ ಏಕನಾಥ ಶಿಂಧೆ ನೇತೃತ್ವದಲ್ಲಿ 39 ಶಾಸಕರು ಬಂಡೆದ್ದು ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ಈ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಬಂಡೆದ್ದ ಶಾಸಕರು ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದ್ದರು ಮತ್ತು ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ, ಸ್ಪೀಕರ್ ಆದ ಬಿಜೆಪಿಯ ರಾಹುಲ್ ನಾರ್ವೇಕರ್ ಅವರು ತಮ್ಮ ಮುಂದೆ ಬಂದ ಅನರ್ಹ ಅರ್ಜಿಗಳನ್ನು ವಿಲೇವಾರಿ ಮಾಡಲೇ ಇಲ್ಲ. ಇದನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ರ್ಟ್ ಮೆಟ್ಟಿಲೇರಿದ್ದರು. ಕೂಡಲೇ ಅರ್ಜಿಗಳನ್ನು ಇತ್ಯರ್ಥ ಮಾಡಿ ಎಂದು ಸುಪ್ರೀಂ ಕೋರ್ಟ್‌ ಸ್ಪೀಕರ್‌ಗೆ ಸೂಚಿಸಿತ್ತು. ಆದರೂ, ಇತ್ಯರ್ಥವಾಗಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಈಗ ಸ್ಪೀಕರ್ ವಿರುದ್ದ ಗರಂ ಆಗಿದ್ದು, ಆದೇಶವನ್ನು ಪಾಲಿಸಲೇಬೇಕು ಎಂದು ಹೇಳಿದೆ.

ಮುಂದಿನ ಚುನಾವಣೆ ಹೊತ್ತಿಗೆ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರು, ಇದನ್ನು ಶಾಶ್ವತವಾಗಿ ಮುಂದುವರಿಸಲು ಸಾಧ್ಯವಿಲ್ಲ. ವಿಳಂಬ ನೀತಿಯು ಅನರ್ಹತೆಯ ಪ್ರಕ್ರಿಯೆಗಳನ್ನು ನಿಷ್ಪ್ರಯೋಜಕಗೊಳಿಸುವ ಅಪಾಯವಿದೆ ಎಂದು ಹೇಳಿದ್ದಾರೆ.

ನಾವು ಮಂಗಳವಾರಕ್ಕೆ ಈ ವಿಷಯ ಮುಂದೂಡುತ್ತಿದ್ದೇವೆ. ಸ್ಪೀಕರ್ ವೇಳಾಪಟ್ಟಿಯನ್ನು ನೀಡಲಿ. ಒಂದು ವೇಳೆ, ನೀಡದಿದ್ದರೆ ಅನರ್ಹ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನಾವು ಕಾಲಮಿತಿಯನ್ನು ನಿಗದಿ ಮಾಡುತ್ತೇವೆ. ಈ ನ್ಯಾಯಾಲಯದ ತೀರ್ಪನ್ನು ಪಾಲಿಸಲೇಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ, ಜಸ್ಟೀಸ್ ಜೆ ಬಿ ಪರ್ದಿವಾಲಾ ಮತ್ತು ಜಸ್ಟೀಸ್ ಮನೋಜ್ ಮಿಶ್ರಾ ಅವರಿದ್ದ ಪೀಠವು ಖಡಕ್ಕಾಗಿ ಹೇಳಿದೆ. ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ಅವರು ಶಿಂಧೆ ಬಣದ ಪರವಾಗಿ ವಕಾಲತ್ತು ವಹಿಸಿದ್ದರು.

ಈ ನ್ಯಾಯಾಲಯವು, ಸಾಂವಿಧಾನಿಕ ಎಲ್ಲ ಶಾಖೆಗಳ ಅಧಿಕಾರ ವ್ಯಾಪ್ತಿಯನ್ನು ಗೌರವಿಸುತ್ತದೆ ಮತ್ತು ಸ್ಪೀಕರ್ ಕರ್ತವ್ಯದ ಮೇಲೆ ನಂಬಿಕೆ ಇರುವುದಿರಂದ ಡೆಡ್‌ಲೈನ್ ನೀಡುತ್ತಿಲ್ಲ. ಆದರೆ ನ್ಯಾಯಾಲಯದ ಘನತೆಯ ಬಗ್ಗೆ ನಮಗೆ ಆತಂಕವಿದೆ, ಆರು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿದ್ದ ಉದ್ಧವ್ ಠಾಕ್ರೆ ಅವರಿಗೆ, ಶಿಂಧೆ ಬಣದ ಬಂಡಾಯವು ಅವರು ರಾಜೀನಾಮೆ ನೀಡುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲೇ ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಆಗ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಬಹುಮತವನ್ನು ಎದುರಿಸಿದೇ ರಾಜೀನಾಮೆ ನೀಡಿದ್ದರಿಂದ ಉದ್ಧವ್ ಠಾಕ್ರೆ ಅವರನ್ನು ಮತ್ತೆ ಮುಖ್ಯಮಂತ್ರಿಗೆ ಮರಳಿಸಲಾಗದು ಎಂದು ಹೇಳಿತ್ತು.

ನನ್ನ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ- ಕೋರ್ಟ್‌ಗೆ ಸ್ಪೀಕರ್

ಸೆಪ್ಟೆಂಬರ್ 18ರಂದು ಸುಪ್ರೀಂ ಕೋರ್ಟ್, ಶಿಂಧೆ ಮತ್ತು ಅವರಿಗೆ ನಿಷ್ಠೆ ಹೊಂದಿರುವ ಶಾಸಕರ ವಿರುದ್ಧದ ಅನರ್ಹತೆ ಕುರಿತಾದ ಅರ್ಜಿಗಳ ವಿಚಾರಣೆಗೆ ಸಮಯ ನಿಗದಿಗೊಳಿಸುವಂತೆ ತಿಳಿಸಿತ್ತು. ಇದಕ್ಕೂ ಮೊದಲು ಸ್ಪೀಕರ್ ಅವರು, ಅನರ್ಹ ಅರ್ಜಿಗಳನ್ನು ತ್ವರಿತಾಗಿ ವಿಚಾರಣೆ ನಡೆಸಲು ಪ್ರತಿಪಕ್ಷಗಳು ಒತ್ತಡ ಹೇರುತ್ತಿದ್ದೇವೆ. ಆದರೆ ಇದು ನನಗೆ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ನಾನು ಯಾವುದೇ ನಿರ್ಧಾರವನ್ನು ಕೈಗೊಂಡರೂ ಅದು ಕಾನೂನು ಮತ್ತು ಸಂವಿಧಾನದ ಬದ್ಧವಾಗಿರುತ್ತದೆ. ಈ ರೀತಿಯ ಯಾವುದೇ ಹೇಳಿಕೆಗಳು, ವಿಧಾನಸಭೆಯ ಸ್ಪೀಕರ್‌ ಆದ ನನ್ನ ಮೇಲೆ ಯಾವುದೇ ಒತ್ತಡ ಹೇರಲು ಸಾಧ್ಯವಿಲ್ಲ. ನಾನು ಈ ರೀತಿಯ ಯಾವುದೇ ಒತ್ತಡ ತಂತ್ರಗಳಿಗೆ ಬಲಿಯಾಗುವುದಿಲ್ಲ ಎಂದು ವಾರದ ಹಿಂದೆ ಪುಣೆಯಲ್ಲಿ ಸುದ್ದಿಗಾರರಿಗೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಹೇಳಿದ್ದರು.

ಅನರ್ಹ ಅರ್ಜಿಗಳ ವಿಚಾರಣೆಗೆ ಕುರಿತಾದ ವಿಳಂಬಕ್ಕೆ ಸ್ಪಷ್ಟಿಕರಣ ನೀಡಿದ ಸ್ಪೀಕರ್ ರಾಹುಲ್ ನಾರ್ವೇಕರ್, ವಿವಿಧ ವಿವಾದಾತ್ಮಕ ವಿಷಯಗಳ ಬಗ್ಗೆ ನಾವು ನಿರ್ಧರಿಸಬೇಕಾಗಿದೆ. ಮೂಲ ರಾಜಕೀಯ ಪಕ್ಷ ಯಾವುದು? ವಿಪ್ ಜಾರಿ ಮಾಡಲು ಅಧಿಕಾರ ಹೊಂದಿರುವ ವ್ಯಕ್ತಿ ಯಾರು? ಸಂಬಂಧಪಟ್ಟವರಿಗೆ ಅವಕಾಶ ನೀಡದೆ ಮತ್ತು ನೈಸರ್ಗಿಕ ತತ್ವಗಳನ್ನು ಅನುಸರಿಸದೆ ನಾವು ನಿರ್ಧಾರವನ್ನು ನೀಡಿದರೆ. ಅದು ನಿರಂಕುಶವಾಗಿರುತ್ತದೆ ಎಂದು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version