ಚೆನ್ನೈ: ರಾಜ್ಯಕ್ಕೆ ಅಗತ್ಯವಾದ ಸ್ವಾಯತ್ತತೆಯನ್ನು ಕೇಂದ್ರ ಸರಕಾರ ನೀಡದೇ ಹೋದರೆ ನಾವು ಪ್ರತ್ಯೇಕ ತಮಿಳುನಾಡು ಕೇಳಬೇಕಾಗುತ್ತದೆ ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಎ. ರಾಜಾ ಅವರು ಕೇಂದ್ರವನ್ನು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸಮ್ಮುಖದಲ್ಲಿ ನಾಮಕ್ಕಲ್‌ನಲ್ಲಿ ಡಿಎಂಕೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡುತ್ತ ರಾಜಾ ಅವರು ಈ ಮಾತು ಹೇಳಿದ್ದಾರೆ.
ಡಿಎಂಕೆ ಪಕ್ಷವು ʼಅಣ್ಣಾ ಮಾರ್ಗʼ ಅನುಸರಿಸುತ್ತಿದೆ. ನಾವು ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂದು ದುರಹಂಕಾರದಿಂದ ಇಲ್ಲಿ ಮಾತನಾಡುತ್ತಿಲ್ಲ. ಪ್ರತ್ಯೇಕ ತಮಿಳುನಾಡು ಬೇಡಿಕೆಯನ್ನು ಡಿಎಂಕೆ ಕೈಬಿಟ್ಟಿತ್ತು. ಆದರೆ ಈಗ ರಾಜ್ಯಕ್ಕೆ ಸ್ವಾಯತ್ತತೆ ನೀಡುವಂತೆ ಕೇಳುತ್ತಿದೆ. ನಮ್ಮ ತತ್ವದ ಪಿತಾಮಹರಾದ ಪೆರಿಯಾರ್ ಅವರು ಪ್ರತ್ಯೇಕ ತಮಿಳುನಾಡಿಗಾಗಿ ಸದಾ ಹೋರಾಡಿದ್ದರು. ನಮ್ಮ ಸಿಎಂ (ಸ್ಟಾಲಿನ್) ಅಣ್ಣಾದೊರೈ (ಅಣ್ಣಾ) ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ. ನಮಗೆ ಪೆರಿಯಾರ್ ಮಾರ್ಗ ಅನಿವಾರ್ಯ ಆಗುವಂತೆ ವರ್ತಿಸಬೇಡಿ. ರಾಜ್ಯಕ್ಕೆ ಅಗತ್ಯವಾದ ಸ್ವಾಯತ್ತತೆಯನ್ನು ಉಳಿಸಿ ಎಂದು ಅವರು ವಿನಂತಿ ಮಾಡಿದರು.
ರಾಜ್ಯವು ಪ್ರತಿಯೊಂದು ಸಣ್ಣ ವಿಷಯಕ್ಕಾಗಿಯೂ ಕೇಂದ್ರವನ್ನು ಕೇಳಬೇಕಾಗಿ ಬರುತ್ತಿದೆ. ಜಿಎಸ್‌ಟಿ ಮೂಲಕ ನಮ್ಮ ಆದಾಯವನ್ನು ಕಿತ್ತುಕೊಳ್ಳಲಾಗಿದೆ. ಜಿಎಸ್‌ಟಿಯಲ್ಲಿ ನಮ್ಮ ಪಾಲು 6.5% ಇದ್ದರೂ ನಮಗೆ ಕೇವಲ 2.5% ನೀಡಲಾಗಿದೆ. ಇದು ಅನ್ಯಾಯ. ಹೀಗಾದರೆ ನಾವು ಪ್ರತ್ಯೇಕತೆ ಧ್ವನಿ ಮೊಳಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಮೇಕೆದಾಟು ವಿಷಯದಲ್ಲಿ ಕೋರ್ಟೇ ಸುಪ್ರೀಂ, ಪ್ರಾಧಿಕಾರದ ಮಾತು ಕೇಳಲ್ಲ ಎಂದ ಸ್ಟಾಲಿನ್