ನವದೆಹಲಿ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyar) ಅವರು ಪಾಕಿಸ್ತಾನದ ಕುರಿತು ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. “ಪಾಕಿಸ್ತಾನದ ಬಳಿ ಅಣುಬಾಂಬ್‌ಗಳು ಇವೆ, ನಾವು ಆ ರಾಷ್ಟ್ರವನ್ನು ಗೌರವಿಸಬೇಕು” ಎಂದು ಮಣಿಶಂಕರ್ ಅಯ್ಯರ್ ನೀಡಿದ ಹೇಳಿಕೆಯಿಂದ ಖುದ್ದು ಕಾಂಗ್ರೆಸ್ ಪಕ್ಷವೇ ಅಂತರ ಕಾಯ್ದುಕೊಂಡಿದೆ. ಇದರ ಬೆನ್ನಲ್ಲೇ, ಮಣಿಶಂಕರ್ ಅಯ್ಯರ್ ಅವರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರು ತಿರುಗೇಟು ನೀಡಿದ್ದು, “ನಮ್ಮ ಬಳಿಯ ಅಣುಬಾಂಬ್‌ಗಳು ಫ್ರಿಡ್ಜ್‌ನಲ್ಲಿ ಇಡಲು ತಯಾರಿಸಿದ್ದೇವೆಯೇ” ಎಂದಿದ್ದಾರೆ.
ಇಂಡಿಯಾ ಟಿವಿ ಚಾನೆಲ್‌ನ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೋಗಿ ಆದಿತ್ಯನಾಥ್, ಮಣಿಶಂಕರ್ ಅಯ್ಯರ್ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದರು. “ನಾವೇನೂ ಫ್ರಿಡ್ಜ್‌ನಲ್ಲಿ ಇರಿಸಲು ಅಣುಬಾಂಬ್ ತಯಾರಿಸಿಲ್ಲ. ಇದು ನವ ಭಾರತ. ಹೊಸ ಭಾರತವು ಯಾರ ತಂಟೆಗೂ ಹೋಗುವುದಿಲ್ಲ. ಹಾಗಂತ, ನಮ್ಮ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ. ನಮ್ಮ ತಂಟೆಗೆ ಬಂದವರ ಮನೆಗೆ ನುಗ್ಗಿ ಪ್ರತ್ಯುತ್ತರ ನೀಡುವ ಸಾಮರ್ಥ್ಯ ಹೊಂದಿದ್ದೇವೆ” ಎಂದು ಹೇಳಿದರು.
हमारे एटम बम फ्रिज में रखने के लिए हैं क्या! pic.twitter.com/boH7bjLHGe
— Yogi Adityanath (मोदी का परिवार) (@myogiadityanath) May 11, 2024
“ಮನೆಗೆ ನುಗ್ಗಿ ಪ್ರತ್ಯುತ್ತರ ನೀಡುವುದನ್ನು ಭಾರತ ಸಾಬೀತುಪಡಿಸಿದೆ. ಇದಕ್ಕೂ ಮೊದಲು ದೇಶದ ಹಲವೆಡೆ ಸ್ಫೋಟಗಳು ಸಂಭವಿಸಿದವು. ಮುಂಬೈ, ಅಯೋಧ್ಯೆ, ದೆಹಲಿ, ಕಾಶಿ, ಲಖನೌ, ವಾರಾಣಸಿ, ಗೋರಖ್‌ಪುರ ಸೇರಿ ಹಲವೆಡೆ ದಾಳಿಗಳು ನಡೆದವು. ದೇಶದ ಸಂಸತ್ ಮೇಲೆಯೇ ದಾಳಿ ನಡೆಯಿತು. ವಿವಿಧ ಸಂದರ್ಭಗಳಲ್ಲಿ ಹಲವು ರೀತಿಯ ದಾಳಿ ನಡೆದವು. ಆದರೆ, ಕಳೆದ 10 ವರ್ಷಗಳಲ್ಲಿ ಉಗ್ರವಾದ, ನಕ್ಸಲ್‌ವಾದವನ್ನು ನಿಗ್ರಹಿಸಲಾಗಿದೆ. ಭಾರತದಲ್ಲಿ ಜೋರಾಗಿ ಪಟಾಕಿ ಸಿಡಿದರೂ, ಇದರ ಹಿಂದೆ ನಮ್ಮ ಕೈವಾಡವಿಲ್ಲ ಎಂದು ಪಾಕಿಸ್ತಾನ ಹೇಳುತ್ತದೆ. ಇದು ಭಾರತದ ತಾಕತ್ತು. ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಅಂತಹ ಸಾಮರ್ಥ್ಯ ಬೆಳೆಸಿಕೊಂಡಿದೆ” ಎಂದು ತಿಳಿಸಿದರು.
ಮಣಿಶಂಕರ್ ಅಯ್ಯರ್ ಹೇಳಿದ್ದೇನು?
“ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ, ಲಾಹೋರ್‌ನಲ್ಲಿ ಅಣುಬಾಂಬ್ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್ ಬಗ್ಗೆ ಯೋಚನೆ ಮಾಡುವುದೇ ಇಲ್ಲ” ಎಂದು ಅಯ್ಯರ್ ಹೇಳಿದ್ದರು.
ಇದನ್ನೂ ಓದಿ: ಪಿತ್ರೋಡಾ ‘ಸಂಪತ್ತು ಹಂಚಿಕೆ’ ಹೇಳಿಕೆ, ಮಣಿಶಂಕರ್ ಅಯ್ಯರ್ ಪಾಕ್ ಪ್ರೇಮ; ಕಾಂಗ್ರೆಸ್‌ಗೆ ಈಗ ತೀವ್ರ ಫಜೀತಿ!