Site icon Vistara News

Fact Check: ಪವಿತ್ರ ಗಂಗಾಜಲಕ್ಕೂ 18% ಜಿಎಸ್‌ಟಿ? ಖರ್ಗೆ ಆರೋಪ ಎಷ್ಟು ಸತ್ಯ? ಇಲ್ಲಿದೆ ವಾಸ್ತವ

Mallikarjun Kharge On GST

Do you have to pay GST on Gangajal? Here Is The Fact Check On Mallikarjun Kharge's Claim

ನವದೆಹಲಿ: ಇದೇನಿದ್ದರೂ ಸಾಮಾಜಿಕ ಜಾಲತಾಣಗಳ ಯುಗ. ಒಂದೇ ಒಂದು ಮಾಹಿತಿಯನ್ನು ಫೇಸ್‌ಬುಕ್‌, ಟ್ವಿಟರ್‌ ಸೇರಿ ಯಾವುದೇ ಜಾಲತಾಣಗಳಲ್ಲಿ ಹಂಚಿಕೊಂಡರೆ ಸಾಕು, ಲಕ್ಷಾಂತರ ಜನರಿಗೆ ಅದು ಕ್ಷಣಮಾತ್ರದಲ್ಲಿ ತಲುಪುತ್ತದೆ. ಅದರಲ್ಲೂ, ರಾಜಕಾರಣಿಗಳು, ಗಣ್ಯರು ಸೇರಿ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿದವರು ಒಂದು ಮಾಹಿತಿ ಹಂಚಿಕೊಂಡರೆ, ಅದರ ರೀಚ್‌ ದೊಡ್ಡ ಮಟ್ಟದಲ್ಲಿ ಇರುತ್ತದೆ. ಇದೇ ಕಾರಣಕ್ಕೆ ಜಾಲತಾಣಗಳನ್ನು ಈಗ ನಕಲಿ ಸುದ್ದಿ ಹರಡಿಸಲು ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು, ಕೇಂದ್ರ ಸರ್ಕಾರವು ಪವಿತ್ರ ಗಂಗಾಜಲಕ್ಕೂ (Gangajal) ಶೇ.18ರಷ್ಟು ಜಿಎಸ್‌ಟಿ ವಿಧಿಸಿದೆ ಎಂದು ಟ್ವೀಟ್‌ ಮಾಡಿದ್ದು, ಇವರ ಮಾಹಿತಿ ಎಷ್ಟು ಸತ್ಯದಿಂದ (Fact Check) ಕೂಡಿದೆ ಎಂಬುದು ಬಯಲಾಗಿದೆ.

ಖರ್ಗೆ ಮಾಡಿದ ಆರೋಪವೇನು?

“ನರೇಂದ್ರ ಮೋದಿ ಅವರೇ, ಗಂಗಾ ಮಾತೆಯನ್ನು ಮೋಕ್ಷ ನೀಡುವ ಕಾರಣಕ್ಕಾಗಿ ಹೆಚ್ಚು ಪ್ರಾಮುಖ್ಯತೆಯಿಂದ ನೋಡಲಾಗುತ್ತದೆ. ಪ್ರತಿಯೊಬ್ಬರೂ ಹುಟ್ಟಿನಿಂದ ಸಾವಿನವರೆಗೆ ಗಂಗೆಯನ್ನು ಗೌರವಿಸುತ್ತಾರೆ. ಆದರೆ, ನೀವು ಇಂದು ಉತ್ತರಾಖಂಡಕ್ಕೆ ತೆರಳಿದ್ದೀರಿ. ಇಂತಹ ಹೊತ್ತಿನಲ್ಲಿಯೇ ನಿಮ್ಮ ಸರ್ಕಾರವು ಪವಿತ್ರ ಗಂಗಾ ಜಲಕ್ಕೆ ಶೇ.18ರಷ್ಟು ಜಿಎಸ್‌ಟಿ ವಿಧಿಸಿದೆ. ಮನೆಗಳಲ್ಲಿ ಗಂಗಾ ನದಿ ನೀರು ಇಟ್ಟುಕೊಳ್ಳುವವರನ್ನೂ ನೀವು ಬಿಡುತ್ತಿಲ್ಲ. ನಿಮ್ಮ ಸರ್ಕಾರ ಅವರಿಗೂ ಜಿಎಸ್‌ಟಿ ವಿಧಿಸಿ, ಹಣವನ್ನು ಲೂಟಿ ಮಾಡುತ್ತಿದೆ” ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಪೋಸ್ಟ್‌ ಮಾಡಿದ್ದಾರೆ.

ಅಷ್ಟಕ್ಕೂ ವಾಸ್ತವ ಏನು?

ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಗಂಗಾಜಲಕ್ಕೆ ಜಿಎಸ್‌ಟಿ ವಿಧಿಸಿರುವ ಕುರಿತು ಪೋಸ್ಟ್‌ ಮಾಡುತ್ತಲೇ ಕೇಂದ್ರೀಯ ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್‌ ಮಂಡಳಿಯು (CBIC) ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದೆ. “ಗಂಗಾಜಲಕ್ಕೆ ಯಾವುದೇ ಜಿಎಸ್‌ಟಿ ವಿಧಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಹರಡುತ್ತಿರುವ ಕಾರಣ ಸ್ಪಷ್ಟನೆ ನೀಡಲಾಗುತ್ತಿದೆ” ಎಂದು ತಿಳಿಸಿದೆ.

ಇದನ್ನೂ ಓದಿ: Fact Check: ಕೇರಳ ಯೋಧನ ಮೇಲೆ ಪಿಎಫ್ಐ ದಾಳಿ! ಪ್ರಸಿದ್ಧಿಗಾಗಿ ‘ಫೇಕ್’ ಅಟ್ಯಾಕ್ ಕತೆ ಕಟ್ಟಿದ್ನಾ ಸೈನಿಕ?

“ದೇಶಾದ್ಯಂತ ಗಂಗಾಜಲವನ್ನು ಪೂಜೆಯ ವೇಳೆ ಬಳಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಗಂಗಾಜಲವನ್ನು ಇಟ್ಟುಕೊಳ್ಳುತ್ತಾರೆ. ಹಾಗೆಯೇ, ದೇಶದಲ್ಲಿ ಪೂಜಾ ಸಾಮಗ್ರಿಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. 2017ರ ಮೇ 18, 19 ಹಾಗೂ 2017ರ ಜೂನ್‌ 3ರಂದು ನಡೆದ ಜಿಎಸ್‌ಟಿ ಸಭೆಗಳಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ಇದಾದ ಬಳಿಕವೇ ಪೂಜಾ ಸಾಮಗ್ರಿಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ” ಎಂದು ಸ್ಪಷ್ಟನೆ ನೀಡಿದೆ. ಹಾಗಾಗಿ, ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಪೋಸ್ಟ್‌ ಸತ್ಯಕ್ಕೆ ದೂರವಾಗಿದೆ.

Exit mobile version