ಜೋಧಪುರ್: ಮನುಷ್ಯ ಕ್ರೂರಪ್ರಾಣಿಗಳಿಗಿಂತಲೂ ಅತಿ ಕ್ರೂರ ಎಂಬುದಕ್ಕೆ ಆಗಾಗ ಸಾಕ್ಷ್ಯಗಳು ಸಿಗುತ್ತಲೇ ಇರುತ್ತವೆ. ಅಂಥದ್ದೇ ಮಾನವನ ಕ್ರೂರತನಕ್ಕೆ ಪಂಜಾಬ್‌ನ ಜೋಧಪುರ ನಗರದಲ್ಲಿ ಸಾಕ್ಷ್ಯ ದೊರೆತಿದೆ. ವ್ಯಕ್ತಿಯೊಬ್ಬ ತನ್ನ ಕಾರಿಗೆ ನಾಯಿಯನ್ನು (Dog Abuse) ಕಟ್ಟಿ, ಅದನ್ನು ಎಳೆದುಕೊಂಡ ಹೋಗುತ್ತಿದ್ದ ಘಟನೆ ಭಾನುವಾರ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಟೀಕೆ ವ್ಯಕ್ತವಾಗಿದೆ.
ವೃತ್ತಿಯಲ್ಲಿ ವೈದ್ಯನಾಗಿರುವ ಡಾ. ರಜನೀಶ್ ಗಾಲ್ವಾ ತನ್ನ ಕಾರಿಗೆ ನಾಯಿಯನ್ನು ಚೈನ್‌ನಿಂದ ಕಟ್ಟಿ ಓಡಿಸಿದ್ದಾನೆ. ಕಾರಿನ ವೇಗಕ್ಕೆ ನಾಯಿ ಓಡಲಾಗದೆ ಪರದಾಡುತ್ತಿರುವ ದೃಶ್ಯ ಮನಕಲಕುವಂತಿದೆ. ಅಂದ ಹಾಗೆ, ಡಾ ರಜನೀಶ್ ಪ್ಲಾಸ್ಟಿಕ್ ಸರ್ಜನ್ ಆಗಿದ್ದು, ಜೋಧಪುರದ ಅತ್ಯಂತ ಪ್ರಸಿದ್ಧ ವೈದ್ಯರಾಗಿದ್ದಾರೆ. ಆದರೆ, ನಾಯಿಯನ್ನು ಅಮಾನುಷವಾಗಿ ಕಾರಿಗೆ ಕಟ್ಟಿ ಎಳೆದುಕೊಂಡು ಹೋಗುವ ಮೂಲಕ ತಮ್ಮ ರಕ್ಕಸತನವನ್ನು ಪ್ರದರ್ಶಿಸಿದ್ದಾರೆ.
ನಾಯಿಯ ಮೇಲಿನ ಹಿಂಸೆಯನ್ನು ಕಂಡ ದಾರಿಹೋಕರು ಕೂಡಲೇ ಕಾರನ್ನು ತಡೆದಿದ್ದಾರೆ. ಬಳಿಕ ನಾಯಿಯನ್ನು ಬಂಧನದಿಂದ ಬಿಡಿಸಿ, ಡಾಗ್ ಹೋಮ್ ಫೌಂಡೇಷನ್‌ಗೆ ಕರೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಾಯಿಯನ್ನು ಆಂಬುಲೆನ್ಸ್ ಮೂಲಕ ಪಶುಆಸ್ಪತ್ರೆಗೆ ಕರೆದೊಯ್ಯಲು ದಾರಿಹೋಕರೇ ನೆರವು ನೀಡಿದ್ದಾರೆ.
ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಬೀದಿ ನಾಯಿ ತಮ್ಮ ಮನೆಯ ಬಳಿ ಇತ್ತು. ಎಷ್ಟೇ ಪ್ರಯತ್ನಪಟ್ಟರೂ ಅಲ್ಲಿಂದ ಹೋಗಲಿಲ್ಲ. ಹಾಗಾಗಿ, ಅದನ್ನು ಬೇರೇಡೆಗೆ ತೆಗೆದುಕೊಂಡು ಹೋಗುತ್ತಿದ್ದೆ ಎಂದು ವೈದ್ಯ ತಿಳಿಸಿದ್ದಾರೆ. ಏತನ್ಮಧ್ಯೆ, ಡಾಗ್ ಹೋಮ್ ಫೌಂಡೇಷನ್ ಆರೋಪಿ ವೈದ್ಯನ ವಿರುದ್ಧ ದೂರು ನೀಡಿದೆ.
ಇದನ್ನೂ ಓದಿ | Dog killed | ತನ್ನ ನೋಡಿ ಬೊಗಳ್ತಿದೆ ಅಂತ ನಾಯಿಯನ್ನು ಅಟ್ಟಾಡಿಸಿ ಗುಂಡು ಹಾರಿಸಿ ಕೊಂದ!