ಅಹಮದಾಬಾದ್: ಖ್ಯಾತ ಹೃದ್ರೋಗ ತಜ್ಞ, ತಮ್ಮ ವೃತ್ತಿಜೀವನದಲ್ಲಿ 16,000ಕ್ಕೂ ಅಧಿಕ ಹೃದ್ರೋಗಿಗಳಿಗೆ ಸರ್ಜರಿ ನೆರವೇರಿಸಿದ್ದ ಡಾ.ಗೌರವ್ ಗಾಂಧಿ (41) ಅವರು ಹೃದಯಾಘಾತದಿಂದ (Heart attack) ಮೃತಪಟ್ಟಿದ್ದಾರೆ.
ಸೋಮವಾರ ಪೇಷೆಂಟ್‌ಗಳನ್ನು ವಿಚಾರಿಸಿಕೊಂಡು ಮನೆಗೆ ಬಂದಿದ್ದ ಗೌರವ್ ಗಾಂಧಿ, ರಾತ್ರಿ ಊಟ ಮಾಡಿ ಮಲಗಿದ್ದರು. ಯಾವುದೇ ಹೃದಯಾಘಾತದ ಸೂಚನೆ ತೋರಿಸಿರಲಿಲ್ಲ. ಬೆಳಗ್ಗೆ ಮನೆಯವರು ಎಬ್ಬಿಸಲು ಹೋದಾಗ ಮೂರ್ಛೆ ಹೋಗಿರುವುದು ತಿಳಿದುಬಂದಿತ್ತು. ಕೂಲಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಜಾಮ್‌ನಗರದಲ್ಲಿ ಎಂಬಿಬಿಎಸ್ ಮತ್ತು ಎಂಡಿ ವ್ಯಾಸಂಗ ಮಾಡಿದ್ದ ಡಾ. ಗೌರವ್ ಗಾಂಧಿ, ಅಲ್ಲಿಯೇ ಹೃದ್ರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಅತ್ಯಂತ ಕಡಿಮೆ ಅವಧಿಯಲ್ಲಿ ತಮ್ಮ ಗುಣಮಟ್ಟದ ವೈದ್ಯಕೀಯ ಸೇವೆಯಿಂದ ಖ್ಯಾತಿ ಗಳಿಸಿದ್ದರು. ವೈದ್ಯಕೀಯ ಸೇವೆ ಮತ್ತು ಸಂಶೋಧನೆಗಳಿಗಾಗಿ ಅವರನ್ನು ಗಣರಾಜ್ಯೋತ್ಸವದಂದು ಗೌರವಿಸಲಾಗಿತ್ತು. ʼಹಾಲ್ಟ್ ಹಾರ್ಟ್ ಅಟ್ಯಾಕ್ʼ ಎಂಬ ಅಭಿಯಾನದಲ್ಲಿ ಅವರು ಭಾಗಿಯಾಗಿ ಹೃದಯಾಘಾತದಿಂದ ಪಾರಾಗುವ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದರು.
ಅವರ ಪತ್ನಿ ದೇವಾಂಶಿ ದಂತವೈದ್ಯೆಯಾಗಿದ್ದಾರೆ. ಇವರಿಗೆ ಹತ್ತು ವರ್ಷದ ಮಗಳು ಮತ್ತು ಐದು ವರ್ಷದ ಮಗ ಇದ್ದಾರೆ.
ಇದನ್ನೂ ಓದಿ: Heart Attack: ಹೃದಯಾಘಾತಕ್ಕೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಬಲಿ, ಏನು ಕಾರಣ?