ಪಾಟ್ನಾ: ಬಿಹಾರದ ಗೋಪಾಲ್ಗಂಜ್ ಕಾರಾಗೃಹದಲ್ಲಿ, ಜೈಲು ಅಧಿಕಾರಿಗಳ ತಪಾಸಣೆಗೆ ಹೆದರಿ ಮೊಬೈಲ್ ನುಂಗಿದ್ದ ಕೈದಿಗೆ ಅಂತೂ ವೈದ್ಯರು ನೋವಿನಿಂದ ಮುಕ್ತಿ ಕೊಟ್ಟಿದ್ದಾರೆ. ಆತನ ಹೊಟ್ಟೆಯಲ್ಲಿ ಇದ್ದಿದ್ದ ಮೊಬೈಲ್ನ್ನು ಹೊರಗೆ ತೆಗೆದಿದ್ದಾರೆ. ಗೋಪಾಲ್ ಗಂಜ್ ಕಾರಾಗೃಹದಲ್ಲಿ ಇದ್ದ ಕೈದಿ ಖಾಸಿರ್ ಅಲಿ ಕದ್ದು ಮೊಬೈಲ್ ಬಳಕೆ ಮಾಡುತ್ತಿದ್ದ. ಶನಿವಾರ ಕಾರಾಗೃಹ ಅಧಿಕಾರಿಗಳು ತಪಾಸಣೆಗೆ ಬರುವ ವಿಚಾರ ತಿಳಿದು, ತಾನು ಸಿಕ್ಕಿಬೀಳುತ್ತೇನೆ ಎಂದು ಹೆದರಿ ಅದನ್ನು ನುಂಗಿದ್ದ. ಮರುದಿನ ಭಾನುವಾರ ಖಾಸಿರ್ಗೆ ಸಿಕ್ಕಾಪಟೆ ಹೊಟ್ಟೆನೋವು ಬಂದಿತ್ತು. ಆತ ಮೊಬೈಲ್ ನುಂಗಿದ್ದಾನೆಂದು ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಅವನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.
ಇದೀಗ ಪಾಟ್ನಾದ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಖಾಸಿರ್ ಅಲಿಗೆ ಚಿಕಿತ್ಸೆ ನೀಡಲಾಗಿದೆ. ಮೊದಲಿಗೆ ಆತನ ರಕ್ತ ಪರೀಕ್ಷೆ ಮಾಡಿ, ಎಕ್ಸ್ ರೇ ತೆಗೆಯಲಾಯಿತು. ಬಳಿಕ ಎಂಡೋಸ್ಕೊಪಿಕ್ ಯಂತ್ರ ಬಳಸಿ, ಮೊಬೈಲ್ನ್ನು ಹೊರಗೆ ತೆಗೆದಿದ್ದಾರೆ.
ಇದನ್ನೂ ಓದಿ: Viral News: ಜೈಲ್ ಅಧಿಕಾರಿಗಳ ತಪಾಸಣೆಗೆ ಹೆದರಿ ಮೊಬೈಲ್ ಫೋನ್ ಅನ್ನೇ ನುಂಗಿದ ಕೈದಿ!
ಉತ್ತರ ಪ್ರದೇಶದ ಬರೇಲಿ ನಗರದ ಹಾಜಿಯಾಪುರ ಗ್ರಾಮದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ 2020ರಲ್ಲಿ ಖಾಸಿರ್ ಅಲಿಯನ್ನು ಬಂಧಿಸಿದ್ದರು. ಕಳೆದ ಮೂರು ವರ್ಷಗಳಿಂದಲೂ ಆತ ಜೈಲಿನಲ್ಲಿಯೇ ಇದ್ದಾನೆ. ಜೈಲಿನಲ್ಲಿ ಮೊಬೈಲ್ ಬಳಕೆಗೆ ಅನುಮತಿ ಇಲ್ಲ. ಬಹುಶಃ ಈತನನ್ನು ನೋಡಲು ಬಂದವರು ಯಾರೋ ಕೊಟ್ಟು ಹೋಗಿದ್ದರು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.