Site icon Vistara News

Doda Terror Attacks: ಶಂಕಿತ ನಾಲ್ವರು ಭಯೋತ್ಪಾದಕರ ರೇಖಾಚಿತ್ರ ಬಿಡುಗಡೆ; ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ

Doda Terror Attacks

Doda Terror Attacks

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu & Kashmir) ದೋಡಾ ಜಿಲ್ಲೆಯಲ್ಲಿ ನಡೆದ ಎರಡು ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ನಾಲ್ವರು ಶಂಕಿತರ ರೇಖಾಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಮಾಹಿತಿ ನೀಡಿದವರಿಗೆ 20 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ (Doda Terror Attacks). ಮಂಗಳವಾರ ಭದೇರ್ವಾದ ಚಟರ್ಗಲ್ಲಾದಲ್ಲಿ ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸರ ಜಂಟಿ ಚೆಕ್‌ ಪಾಯಿಂಟ್‌ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಬುಧವಾರ ಗಂಡೋಹ್ ಪ್ರದೇಶದಲ್ಲಿ ಶೋಧ ತಂಡದ ಮೇಲೆ ಮತ್ತೆ ದಾಳಿ ನಡೆದಿದ್ದು, ಪೊಲೀಸ್ ಸೇರಿದಂತೆ ಏಳು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ʼʼಈ ನಾಲ್ವರು ಭಯೋತ್ಪಾದಕರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂ. ನೀಡಲಾಗುವುದುʼʼ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಜತೆಗೆ ಭಯೋತ್ಪಾದಕರ ಚಟುವಟಿಕೆ, ಚಲನವಲನಗಳ ಬಗ್ಗೆ ಸಂಶಯ ಮೂಡಿದರೆ ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ದೋಡಾ ಜಿಲ್ಲೆಯ ಚೆಕ್ ಪೋಸ್ಟ್ ಮೇಲೆ ಭಯೋತ್ಪಾದಕರ ಒಂದು ಗುಂಪು ದಾಳಿ ನಡೆಸಿದ ನಂತರ ಬುಧವಾರ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಐವರು ಸೈನಿಕರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಸದ್ಯ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಘಟನೆ ವಿವರ

ಮೊದಲ ದಾಳಿಯಲ್ಲಿ, ಮೂರರಿಂದ ನಾಲ್ಕು ಭಯೋತ್ಪಾದಕರ ಗುಂಪು ಬುಧವಾರ ಮುಂಜಾನೆ 1.45ಕ್ಕೆ ಭದೇರ್ವಾ-ಪಠಾಣ್ಕೋಟ್ ರಸ್ತೆಯ ದೋಡಾದ ಚಟ್ಟರ್ಗಲಾ ಪ್ರದೇಶದಲ್ಲಿ ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಚೆಕ್‌ಪೋಸ್ಟ್‌ ಮೇಲೆ ಗುಂಡು ಹಾರಿಸಿತು. ನಂತರ ಛತ್ತರ್ಗಾಲದಿಂದ 150 ಕಿ.ಮೀ. ದೂರದಲ್ಲಿರುವ ಕೋಟಾ ಟಾಪ್ ಪ್ರದೇಶದಲ್ಲಿ ಎರಡನೇ ದಾಳಿ ನಡೆದಿತ್ತು. ಭಯೋತ್ಪಾದಕರ ಗುಂಪು ಪೊಲೀಸ್ ತಂಡದ ಮೇಲೆ ದಾಳಿ ನಡೆಸಿ ಹೆಡ್ ಕಾನ್ಸ್‌ಸ್ಟೇಬಲ್‌ ಗಾಯಗೊಂಡಿದ್ದರು.

ಇನ್ನು ಕಥುವಾದಲ್ಲಿ ಮಂಗಳವಾರ ತಡರಾತ್ರಿ ಪ್ರಾರಂಭವಾದ ಮತ್ತೊಂದು ಗುಂಡಿನ ಚಕಮಕಿ ಬುಧವಾರ ಬೆಳಿಗ್ಗೆಯವರೆಗೂ ಮುಂದುವರೆದಿದ್ದು, ಒಬ್ಬ ಕೇಂದ್ರ ಮೀಸಲು ಪೊಲೀಸ್ ಪಡೆ ಜವಾನ್ ಹುತಾತ್ಮರಾಗಿದ್ದಾರೆ. ಜತೆಗೆ ಆರು ಭದ್ರತಾ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಗಾಯಗೊಂಡಿದ್ದಾರೆ. ಪ್ರತೀಕಾರವಾಗಿ ಭದ್ರತಾ ಸಿಬ್ಬಂದಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: Reasi Terror Attack: ರಿಯಾಸಿ ಭಯೋತ್ಪಾದಕ ದಾಳಿಯ ಶಂಕಿತನ ರೇಖಾಚಿತ್ರ ಬಿಡುಗಡೆ; ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಘೋಷಣೆ

ಹಿರಿಯ ಪೊಲೀಸ್ ಅಧಿಕಾರಿಗಳು ಜಮ್ಮುವಿನಲ್ಲಿ ಒಳನುಸುಳುವಿಕೆ ಹೆಚ್ಚಾಗುತ್ತಿದೆ, ವಿದೇಶಿ ಭಯೋತ್ಪಾದಕರ ಹಾವಳಿ ಮಿತಿ ಮೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವನ್ನು ಹೆಸರಿಸದೆ ಎಡಿಜಿಪಿ ಆನಂದ್ ಜೈನ್, “ಶತ್ರು” ನೆರೆಹೊರೆಯವರು ಯಾವಾಗಲೂ ಜಮ್ಮು ಪ್ರದೇಶದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಪೋಲೀಸರು ಪೊಲೀಸರು ರಿಯಾಸಿ ಜಿಲ್ಲೆಯ ಪೂನಿ ಪ್ರದೇಶದಲ್ಲಿ ಇತ್ತೀಚೆಗೆ ಬಸ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕನ ರೇಖಾ ಚಿತ್ರ ಬಿಡುಗಡೆ ಮಾಡಿದ್ದರು. ಜತೆಗೆ ಆತನ ಸುಳಿವು ನೀಡಿದವರಿಗೆ 20 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದರು.

Exit mobile version