ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಎರಡು ದಿನಗಳ ಹಿಂದಷ್ಟೇ ಬಜೆಟ್ (Union Budget 2024) ಮಂಡಿಸಿದ್ದಾರೆ. ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಬಜೆಟ್ ಕುರಿತು ಟೀಕೆ ಮಾಡುತ್ತಿವೆ. ಬಡವರು, ಮಧ್ಯಮ ವರ್ಗದವರಿಗೆ ಬಜೆಟ್ ನಿರಾಶಾದಾಯಕವಾಗಿದೆ ಎಂಬುದಾಗಿ ಟೀಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಾಂಬಾ (Alka Lamba) ಅವರು ಕೇಂದ್ರ ಬಜೆಟ್‌ಅನ್ನು ಟೀಕಿಸುವ ಭರದಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. “ದೇಶದಲ್ಲಿ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ಹೆಚ್ಚಾಗಲು ಹಣದುಬ್ಬರವೂ ಕಾರಣ” ಎಂದು ಅವರು ಹೇಳಿರುವುದು ಚರ್ಚೆಗೂ ಗ್ರಾಸವಾಗಿದೆ.
ಸುದ್ದಿಗೋಷ್ಠಿ ನಡೆಸಿದ ಅಲ್ಕಾ ಲಾಂಬಾ, “ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಆದ್ಯತೆ ನೀಡಿಲ್ಲ. ಅದರಲ್ಲೂ, ಹಣದುಬ್ಬರದ ಏರಿಕೆಯಿಂದಾಗಿ ದೇಶಾದ್ಯಂತ ಬೆಲೆಯೇರಿಕೆ ಆಗಿದೆ. ಬೆಲೆಯೇರಿಕೆಯಿಂದಾಗಿ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ಹೆಚ್ಚಾಗುತ್ತಿದೆ. ಹಾಗಾಗಿ, ತುರ್ತಾಗಿ ಹಣದುಬ್ಬರವನ್ನು ನಿಯಂತ್ರಣ ಮಾಡಬೇಕಾಗಿದೆ. ಆದರೆ, ಇದರ ದಿಸೆಯಲ್ಲಿ ಕೇಂದ್ರ ಸರ್ಕಾರವು ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂಬುದಾಗಿ ಬೇಸರ ವ್ಯಕ್ತಪಡಿಸಿದರು.
“ಮಧ್ಯಪ್ರದೇಶದಲ್ಲಿ ಇಬ್ಬರು ಮಹಿಳೆಯರನ್ನು ಜೀವಂತವಾಗಿ ಹೂತು ಹಾಕಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಇದನ್ನೇ ನೀವು ಲಡ್ಲಿ ಯೋಜನೆ ಎಂದು ಕರೆಯುತ್ತೀರಾ? ನವಿ ಮುಂಬೈನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ. ಥಾಣೆಯಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ರಸ್ತೆ ಮೇಲೆ ಎಸೆಯಲಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಕುರಿತು ರಾಜಸ್ಥಾನದಲ್ಲಿ 6 ತಿಂಗಳಲ್ಲೇ 20 ಸಾವಿರ ಕೇಸ್ ದಾಖಲಾಗಿವೆ. ಇಂತಹ ಪ್ರಕರಣಗಳಿಗೆ ಹಣದುಬ್ಬರವೂ ಕಾರಣವಾಗಿದೆ” ಎಂದು ಅವರು ಹೇಳಿದರು.
ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಹಾಸ್ಟೆಲ್‌ಗಳ ನಿರ್ಮಾಣ ಸೇರಿ ಮಹಿಳೆಯರು ಹಾಗೂ ಯುವತಿಯರ ಸಬಲೀಕರಣಕ್ಕಾಗಿ ನಿರ್ಮಲಾ ಸೀತಾರಾಮನ್ ಅವರು 3 ಲಕ್ಷ ಕೋಟಿ ರೂ. ಘೋಷಣೆ ಮಾಡಿದ್ದಾರೆ. ಇನ್ನು, ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ಅನ್ನು ವಿರೋಧಿಸಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನಿಂದ ದೇಶಾದ್ಯಂತ ಜುಲೈ 29ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: Union Budget 2024: ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ₹7,559 ಕೋಟಿ ಅನುದಾನ; ಕಳೆದ ವರ್ಷಕ್ಕಿಂತ ಕಡಿಮೆ