ನವದೆಹಲಿ: ಒಂದು ಕಾಲದಲ್ಲಿ ಅಮೆರಿಕ ಸೇರಿ ಬೇರೆ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದ, ಭಾರತದಲ್ಲಿ ಪಿಜ್ಜಾ-ಬರ್ಗರ್ ಎಂದರೆ ಜನ ಮೂಗು ಮುರಿಯುತ್ತಿದ್ದರು. ಆದರೆ, ಪಿಜ್ಜಾ ಈಗ ಭಾರತದ ಆಹಾರ ಪದ್ಧತಿಯಲ್ಲಿ ಹಾಸುಹೊಕ್ಕಾಗಿದೆ. ಬೆಂಗಳೂರು ಬಿಡಿ, ಸಣ್ಣ ಸಣ್ಣ ಜಿಲ್ಲೆಗಳಲ್ಲೂ ಇಂದು ಪಿಜ್ಜಾ ಸಿಗುತ್ತದೆ, ಮನೆಗೇ ಡೆಲಿವರಿ ಆಗುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಎಲ್ಲ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಡಾಮಿನೋಸ್ ಪಿಜ್ಜಾ (Domino’s Pizza) ಬೆಲೆ ಕಡಿಮೆ ಎಂದು ಕಂಪನಿ ತಿಳಿಸಿದೆ.
ಡಾಮಿನೋಸ್ ಸೇರಿ ಹಲವು ಪಿಜ್ಜಾ ಕಂಪನಿಗಳ ಫ್ರಾಂಚೈಸಿಗಳ ಹಿರಿಯ ಅಧಿಕಾರಿಗಳನ್ನು ರಾಯಿಟರ್ಸ್ ಸಂಸ್ಥೆಯು ಸಂದರ್ಶನ ಮಾಡಿದೆ. ಇದೇ ವೇಳೆ ಡಾಮಿನೋಸ್‌ನ ಫ್ರಾಂಚೈಸಿಯಾದ ಜುಬಿಲಂಟ್ ಫುಡ್‌ವರ್ಕ್ಸ್‌ನ ಸಮೀರ್ ಖೇತರ್‌ಪಾಲ್ ಅವರು ಪಿಜ್ಜಾ ಬೆಲೆ ಕುರಿತು ಮಾತನಾಡಿದ್ದಾರೆ. “ಭಾರತದಲ್ಲಿ ಹಣದುಬ್ಬರ ಏರಿಕೆಯಾಗಿದೆ. ಇದರಿಂದ ಎಲ್ಲ ವಸ್ತುಗಳ ಬೆಲೆಗಳು ಹೆಚ್ಚಾಗಿವೆ. ಹಾಗಾಗಿ, ಜನ ಕಡಿಮೆ ತಿನ್ನುವಂತಾಗಿದೆ. ಟೊಮ್ಯಾಟೊ ಬೆಲೆಯೂ ಗಗನಕ್ಕೇರಿದೆ. ಆದರೆ, ಡಾಮಿನೋಸ್ ಮಾತ್ರ ಕೇವಲ 49 ರೂಪಾಯಿಗೆ ಒಂದು ಪಿಜ್ಜಾ ನೀಡುತ್ತದೆ. 140 ಕೋಟಿ ಜನ ಇರುವ ಭಾರತದಲ್ಲಿ ಜಗತ್ತಿನಲ್ಲೇ ಕಡಿಮೆ ಬೆಲೆಗೆ ಪಿಜ್ಜಾ ನೀಡುತ್ತಿದೇವೆ” ಎಂಬುದಾಗಿ ತಿಳಿಸಿದ್ದಾರೆ.
“ಕಳೆದ ಫೆಬ್ರವರಿಯಿಂದ ಭಾರತದಲ್ಲಿ ಕಡಿಮೆ ಬೆಲೆಗೆ ಪಿಜ್ಜಾ ನೀಡುತ್ತಿದ್ದೇವೆ. ಏಳು ಇಂಚಿನ, ಚೀಸ್‌ಯುಕ್ತ ಪಿಜ್ಜಾಗೆ ಭಾರತದಲ್ಲಿ ನಾವು 49 ರೂ. ಪಡೆಯುತ್ತೇವೆ. ಇದೇ ಪಿಜ್ಜಾಗೆ ಅಮೆರಿಕದಲ್ಲಿ 985 ರೂ. ಆಗುತ್ತದೆ. ಚೀನಾ ಸೇರಿ ವಿವಿಧ ರಾಷ್ಟ್ರಗಳಲ್ಲೂ ಕಡಿಮೆ ಬೆಲೆ ಇದೆ. ಇದಕ್ಕೂ ಮೊದಲು ಭಾರತದಲ್ಲಿ 59 ರೂ. ಇತ್ತು. ಈಗ ಅದನ್ನು 49 ರೂ.ಗೆ ಇಳಿಸಿದ್ದೇವೆ” ಎಂದು ಬೇರೆ ದೇಶಗಳಿಗೆ ಹೋಲಿಕೆ ಮಾಡಿ ತಿಳಿಸಿದರು. ಭಾರತದಲ್ಲಿ ಪಿಜ್ಜಾ ಬೆಲೆ ಕುರಿತು ಹಲವು ಕಂಪನಿಗಳ ಮಧ್ಯೆ ಸ್ಪರ್ಧೆ ಇದ್ದು, ಪಿಜ್ಜಾ ಹಟ್ 79 ರೂ.ಗೆ ಪಿಜ್ಜಾ ನೀಡುತ್ತಿದೆ.
ಇದನ್ನೂ ಓದಿ: Oregano Benefits: ಪಿಜ್ಜಾ ಟಾಪಿಂಗ್ ʻಓರಿಗಾನೋʼ ಘಮದಲ್ಲಷ್ಟೇ ಅಲ್ಲ, ಗುಣದಲ್ಲೂ ಮೇಲು!
ಭಾರತದಲ್ಲಿ ಡಾಮಿನೋಸ್‌ನ 1,816 ಮಳಿಗೆಗಳನ್ನು ಜುಬಿಲಂಟ್ ಫುಡ್‌ವರ್ಕ್ಸ್ ನಿರ್ವಹಿಸುತ್ತದೆ. ಭಾರತದ ಪಿಜ್ಜಾ ಮಾರುಕಟ್ಟೆಯಲ್ಲಿ ಡಾಮಿನೋಸ್ ಪಾಲು ಶೇ.37ರಷ್ಟಿದೆ. ಪಿಜ್ಜಾ ಬೆಲೆ ಕಡಿಮೆ ಮಾಡಿದರೂ ಕಂಪನಿಯ ಮಳಿಗೆಗಳು ಲಾಭದಲ್ಲಿಯೇ ಇವೆ ಎಂದು ವರದಿಗಳು ತಿಳಿಸಿವೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಹಣದುಬ್ಬರ ಜಾಸ್ತಿಯಾಗಿದ್ದು, ಅಗತ್ಯ ವಸ್ತುಗಳ ಬೆಲೆಯೇರಿಕೆಯು ಜನರನ್ನು ಬಾಧಿಸುತ್ತದೆ. ಇಂತಹ ಸಂದರ್ಭದಲ್ಲಿಯೂ ಬೆಲೆ ನಿಯಂತ್ರಣ ಮಾಡಿದ್ದೇವೆ ಎಂಬುದರ ಕುರಿತು ಸಮೀರ್ ಖೇತರ್‌ಪಾಲ್ ತಿಳಿಸಿದ್ದಾರೆ.