ಮುಂಬೈ: ಪೆನ್ಸಿಲ್ ತಯಾರಕ ಮತ್ತು ಬರವಣಿಗೆ ಉಪಕರಣಗಳ ಕಂಪನಿಯಾದ ಡೋಮ್ಸ್ ಇಂಡಸ್ಟ್ರೀಸ್‌ನ (DOMS Industries) ಆರಂಭಿಕ ಸಾರ್ವಜನಿಕ ಷೇರು ಮಾರಾಟ(IPO) ಬುಧವಾರ ಪ್ರಾರಂಭವಾಯಿತು. ಅಲ್ಲದೇ, ಮೊದಲ ದಿನವೇ ಅದ್ಭುತ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಬಿಡ್ಡಿಂಗ್‌ನ ಮೊದಲ ದಿನದ ಸಂಜೆ 4.30 ರವರೆಗೆ 1,200 ಕೋಟಿ ರೂ. ಐಪಿಒ 5.72 ಪಟ್ಟು ಚಂದಾದಾರಿಕೆ ದಾಖಲಾಗಿದೆ. ಆಫರ್‌ನಲ್ಲಿ 83,19,620 ಷೇರು ಪೈಕಿ, 4,75,67,034 ಷೇರ್‌ಗಳಿಗೆ ಬಿಡ್ ಸ್ವೀಕರಿಸಲಾಗಿದೆ(DOMS Industries IPO Day 1).
ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ ಮೀಸಲಾದ ವರ್ಗವು 7.63 ಪಟ್ಟು ಚಂದಾದಾರಿಕೆಯನ್ನು ಪಡೆದಿದೆ. ಆದರೆ ಚಿಲ್ಲರೆ ವೈಯಕ್ತಿಕ ಹೂಡಿಕೆದಾರರ (RIIs) ಕೋಟಾವು 19.41 ಪಟ್ಟು ಚಂದಾದಾರಿಕೆಯನ್ನು ಪಡೆದುಕೊಂಡಿದೆ. ಅರ್ಹ ಸಾಂಸ್ಥಿಕ ಖರೀದಿದಾರರ ವರ್ಗವು 0.05ರಷ್ಟು ಚಂದಾದಾರರಾಗಿದ್ದಾರೆ. ಡೋಮ್ಸ್ ಐಪಿಒ ಶುಕ್ರವಾರದವರೆಗೂ ಮುಕ್ತವಾಗಿರಲಿದೆ. ಐಪಿಒನ ಪ್ರತಿ ಷೇರ್‌ಗೆ 750ರಿಂದ 790 ರೂ. ನಿಗದಿ ಮಾಡಲಾಗಿದ್ದು, ಕಂಪನಿಯು 1200 ಕೋಟಿ ರೂ. ಐಪಿಒ ಬಿಡುಗಡೆ ಮಾಡಿದೆ. ಷೇರ್ ಹಂಚಿಕೆಯು ಡಿಸೆಂಬರ್ 18ರಂದು ನಡೆಯಲಿದೆ.
ಮಾರುಕಟ್ಟೆ ವೀಕ್ಷಕರ ಪ್ರಕಾರ, ಡೋಮ್ಸ್ ಇಂಡಸ್ಟ್ರೀಸ್‌ನ ಪಟ್ಟಿ ಮಾಡದ ಷೇರುಗಳು ಅದರ ಸಂಚಿಕೆ ಬೆಲೆಗೆ ಹೋಲಿಸಿದರೆ 505 ರೂ. ಹೆಚ್ಚಿನ ವ್ಯಾಪಾರವನ್ನು ಕಂಡಿದೆ. 505 ರೂ. ಗ್ರೇ ಮಾರ್ಕೆಟ್ (ಜಿಎಂಪಿ) ಎಂದರೆ, ಸಾರ್ವಜನಿಕ ಷೇರುಗಳ ಮೂಲಕ ಗ್ರೇ ಮಾರ್ಕೆಟ್ ಶೇ.63.92ರಷ್ಟು ಪಡೆಯು ನಿರೀಕ್ಷೆ ಇದೆ. ಜಿಎಂಪಿಯು ಮಾರುಕಟ್ಟೆಯ ಬೆಳವಣಿಗೆಗಳನ್ನು ಅವಲಂಬಿಸಿದ್ದು, ಬದಲಾಗುತ್ತಲೇ ಇರುತ್ತದೆ. ‘ಗ್ರೇ ಮಾರ್ಕೆಟ್ ಪ್ರೀಮಿಯಂ’ ನಿಗದಿ ಪಡಿಸಲಾದ ಬೆಲೆಗಿಂತ ಹೆಚ್ಚಿನ ಹಣವನ್ನು ಪಾವತಿಸಲು ಹೂಡಿಕೆದಾರರ ಸಿದ್ಧತೆಯನ್ನು ಸೂಚಿಸುತ್ತದೆ.
ಈ ವಾರದ ಐದು ಐಪಿಒಗಳು ಬಿಡುಗಡೆ
ಇಂಡಿಯಾ ಶೆಲ್ಟರ್ ಫೈನಾನ್ಸ್ (India Shelter Finance) ಮತ್ತು ಡೋಮ್ಸ್(DOMS) ಇಂಡಸ್ಟ್ರೀಸ್ ಸೇರಿದಂತೆ ಐದು ಕಂಪನಿಗಳು ಈ ವಾರ ಷೇರು ಮಾರುಕಟ್ಟೆಗೆ ಐಪಿಒ (IPO) ಬಿಡುಗಡೆ ಮಾಡುತ್ತಿವೆ. ಐನಾಕ್ಸ್ ಗ್ರೂಪ್ ಘಟಕದ ಐನಾಕ್ಸ್ ಇಂಡಿಯಾ(Inox India), ಜೈಪುರ ಮೂಲದ ಚಿಲ್ಲರೆ ಆಭರಣ ಕಂಪನಿ ಮೋತಿಸನ್ಸ್ ಜ್ಯುವೆಲರ್ಸ್ (Motisons Jewellers) ಮತ್ತು ಮುಂಬೈ ಮೂಲದ ಸೂರಜ್ ಎಸ್ಟೇಟ್ ಡೆವಲಪರ್(Suraj Estate Developers) ಮೊದಲ ಐಪಿಒ ಮೂಲಕ ಷೇರುಪೇಟೆಗೆ ಲಗ್ಗೆ ಇಡುತ್ತಿವೆ. ಈ ಐದು ಕಂಪನಿಗಳು ಸುಮಾರು 4,200 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿವೆ.
ಕಳೆದ ತಿಂಗಳು 10 ಕಂಪನಿಗಳು ತಮ್ಮ ಐಪಿಒ ಯಶಸ್ವಿಯಾಗಿ ಮುಕ್ತಾಯಗೊಳಿಸಿದ ಹಿನ್ನೆಲೆಯಲ್ಲಿ ಮತ್ತೆ ಐದು ಕಂಪನಿಗಳು ಬರುತ್ತಿವೆ. ಈ ಪಟ್ಟಿಯು ಟಾಟಾ ಟೆಕ್ನಾಲಜೀಸ್‌ನ IPO (ಆರಂಭಿಕ ಸಾರ್ವಜನಿಕ ಆಫರಿಂಗ್) ಅನ್ನು ಒಳಗೊಂಡಿತ್ತು, ಇದು ಟಾಟಾ ಗ್ರೂಪ್‌ನಿಂದ ಸುಮಾರು ಎರಡು ದಶಕಗಳಲ್ಲಿ ಆರಂಭಿಕ ಷೇರು ಮಾರಾಟವನ್ನು ನಡೆಸಿದ ಮೊದಲ ಕಂಪನಿಯಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 2004ರಲ್ಲಿ ಐಪಿಒ ಬಿಡುಗಡೆ ಮಾಡಿತ್ತು.
ಒಟ್ಟಾರೆಯಾಗಿ ಭಾರತೀಯ ಐಪಿಒ ಮಾರುಕಟ್ಟೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (ನವೆಂಬರ್ ವರೆಗೆ) ಸುಮಾರು 35,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿರುವ 44 ಕ್ಕೂ ಹೆಚ್ಚು ಐಪಿಒಗಳಿಗೆ ಸಾಕ್ಷಿಯಾಗಿದೆ. ಉತ್ತಮ ಲಾಭದ ಗ್ಯಾರಂಟಿಯ ಹಿನ್ನೆಲೆಯಲ್ಲಿ ಐಪಿಒಗಳ ಖರೀದಿಗೆ ಹೆಚ್ಚು ಹೂಡಿಕೆದಾರರು ಮುಂದಾಗುತ್ತಿದ್ದಾರೆ. ಹಾಗಾಗಿ, ಹೆಚ್ಚಿನ ಕಂಪನಿಗಳು ಷೇರು ಮಾರುಕಟ್ಟೆಗೆ ಕಾಲಿಡುತ್ತಿವೆ.
ಈ ಸುದ್ದಿಯನ್ನೂ ಓದಿ: IPO: ಈ ವಾರ 5 ಕಂಪನಿಗಳ ಐಪಿಒ ಬಿಡುಗಡೆ; ಷೇರು ಬೆಲೆ ಚೆಕ್ ಮಾಡ್ಕೊಳ್ಳಿ