ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಆಲ್ಮೋಸ್ಟ್ ಎರಡು ವರ್ಷ ಇದೆ. ಆದರೆ, ಮುಂಬರುವ ಎಲೆಕ್ಷನ್‌ನಲ್ಲಿ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ (PM Candidate) ಯಾರು ಎಂಬ ಚರ್ಚೆಗಳು ಶುರುವಾಗಿವೆ. ಬಿಹಾರ ಸಿಎಂ ನಿತೇಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿ ಹಲವರು ಉಮೇದುವಾರಿಕೆ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಅಂಥದ್ದೇ ಒಂದು ಪ್ರಸಂಗ ಬಿಹಾರದ ಪಟನಾದಲ್ಲಿ ನಡೆದಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪವಾಯಿತು. ಪತ್ರಕರ್ತರು ಪಿಎಂ ಅಭ್ಯರ್ಥಿ ಬಗ್ಗೆ ಕೇಳಿದ ಪ್ರಶ್ನೆಗೆ ತೆಲಂಗಾಣ ಸಿಎಂ ಕೆಸಿಆರ್ ಉತ್ತರಿಸುತ್ತಿದ್ದರು, ಆಗ ಮಧ್ಯೆ ಪ್ರವೇಶಿಸಿದ ನಿತೀಶ್ ಕುಮಾರ್ ಅವರು, ”ಈ ವಿಷಯದಲ್ಲಿ ಸಿಲುಕಿಕೊಳ್ಳಬೇಡಿ” ಎಂದು ಹೇಳುವ ವಿಡಿಯೋ ವೈರಲ್ ಆಗಿದೆ.
ಆಗಿದ್ದೇನು?
ಪಟನಾದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಈ ವೇಳೆ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಹಾಜರಿದ್ದರು. ಈ ವೇಳೆ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆಗ ಪತ್ರಕರ್ತರೊಬ್ಬರು, ನಿತೀಶ್ ಅವರನ್ನು ಪಿಎಂ ಹುದ್ದೆಗೆ ಪರಿಗಣಿಸುತ್ತಿರಾ ಎಂದು ಕೇಳಿದ್ದಕ್ಕೆ ಕೆಸಿಆರ್, ಯಾರಾದರೂ ಬೇಡ ಎನ್ನುತ್ತಾರೆಯೇ ಎಂದು ಪ್ರಶ್ನಿಸಿದರು. ಆಗ ಮತ್ತೊಬ್ಬ ಪತ್ರಕರ್ತ, ಪ್ರತಿಪಕ್ಷ ಕೂಟದಲ್ಲಿ ಕಾಂಗ್ರೆಸ್‌ನ ಪಾತ್ರ ಏನಿರುತ್ತದೆ, ರಾಹುಲ್ ಗಾಂಧಿ ಕೂಡ ಪಿಎಂ ಅಭ್ಯರ್ಥಿಗೆ ದಾವೆದಾರರು ಆಗಿದ್ದಾರೆಂದು ಹೇಳಿದರು. ಇದಕ್ಕೆ ಕೆಸಿಆರ್ ಉತ್ತರಿಸುತ್ತಾ, ನಾವೆಲ್ಲರೂ ಒಟ್ಟಿಗೆ ಕುಳಿತುಕೊಂಡು ಚರ್ಚಿಸುತ್ತೇವೆ ಎನ್ನುತ್ತಿದ್ದಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಮಧ್ಯಪ್ರವೇಶಿಸಿ, ಈ ವಿಷಯದಲ್ಲಿ ನೀವು ಸಿಲುಕಿಕೊಳ್ಳಬೇಡಿ ಎಂದು ಕೆಸಿಆರ್ ಅವರಿಗೆ ನಗುತ್ತಾ ಹೇಳಿದರು. ಬಹುತೇಕ ನಿಂತುಕೊಂಡೇ ಇದ್ದ ನಿತೀಶ್ ಕುಮಾರ್ ಅವರನ್ನು ಕುಳಿತುಕೊಳ್ಳಿ ಎಂದು ಕೆಸಿಆರ್ ಆಗಾಗ ಮನವಿ ಮಾಡುತ್ತಿದ್ದರು.
ಷೇರ್ ಮಾಡಿದ ಬಿಜೆಪಿ
ಈ ವೈರಲ್ ಆಗಿರುವ ವಿಡಿಯೋವನ್ನು ಬಿಜೆಪಿ ಷೇರ್ ಮಾಡಿದ್ದು, ಸಿಕ್ಕಾಪಟ್ಟೆ ಟೀಕೆ ಮಾಡಿದೆ. ಬಿಜೆಪಿಯ ಗಿರಿರಾಜ್ ಸಿಂಗ್ ಮತ್ತು ಅಮಿತ್ ಮಾಳವೀಯ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ರೀತಿಯ ಅವಮಾನ ಎದುರಿಸುವುದಕ್ಕಾಗಿಯೇ ಕೆಸಿಆರ್ ಅವರು ಪಟನಾವರೆಗೆ ಹೋದರೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ಬಿಹಾರದಲ್ಲಿ ತೆಲಂಗಾಣ ಸಿಎಂ ಕೆಸಿಆರ್; ನಿತೀಶ್ ಕುಮಾರ್, ತೇಜಸ್ವಿ ಯಾದವ್ ಭೇಟಿ, ಜಂಟಿ ಸುದ್ದಿಗೋಷ್ಠಿ