Site icon Vistara News

Draupadi Murmu: ಎಲ್ಲ ರಾಷ್ಟ್ರಪತಿಗಳು ಜುಲೈ 25ಕ್ಕೇ ಯಾಕೆ ಪ್ರಮಾಣವಚನ ಸ್ವೀಕರಿಸುತ್ತಾರೆ?

draupadi murmu

ನವ ದೆಹಲಿ: ಭಾರತದ ಹದಿನೈದನೇ ರಾಷ್ಟ್ರಪತಿಯಾಗಿ ಒಡಿಶಾದ ರಾಯ್‌ರಂಗ್‌ಪುರ ಎಂಬ ಹಳ್ಳಿಯ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರು ಅಧಿಕಾರ ಸ್ವೀಕರಿಸಿದ್ದಾರೆ. ಪ್ರತಿಭಾ ಪಾಟೀಲ್‌ ಅವರ ಬಳಿಕ ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಅವರದ್ದು. ೬೪ ವರ್ಷದ ದ್ರೌಪದಿ ಮುರ್ಮು ಅವರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಹುಟ್ಟಿದವರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಹುಟ್ಟಿ ರಾಷ್ಟ್ರಪತಿಯಾದವರೆಂಬ ಹೆಗ್ಗಳಿಕೆಯೂ ಅವರಿಗೆ ಇದೆ.

ದ್ರೌಪದಿ ಮುರ್ಮು ಅವರು ಜುಲೈ ೨೫ರಂದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದರ ಹಿಂದೆಯೂ ವಿಶೇಷತೆ ಇದೆ. ಕಳೆದ ಹತ್ತು ರಾಷ್ಟ್ರಪತಿಗಳು ಸತತವಾಗಿ ಜುಲೈ ೨೫ರಂದೇ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಈ ಸಂಪ್ರದಾಯಕ್ಕೆ ೪೫ ವರ್ಷಗಳ ಇತಿಹಾಸವೇ ಇದೆ.

ಹಾಗಂತ ಇದು ಯಾವುದೋ ಸಂಪ್ರದಾಯ ಅಲ್ಲ. ಆದರೆ, ಸಂಪ್ರದಾಯದಂತೆ ಮುಂದುವರಿದಿದೆ ಅಷ್ಟೆ. ೧೯೭೭ರಿಂದ ಶುರುವಾದ ಜುಲೈ ೨೫ರ ಪ್ರತಿಜ್ಞಾವಚನ ಮತ್ತು ಅಧಿಕಾರ ಸ್ವೀಕಾರ ಯಾವುದೇ ಬದಲಾವಣೆ ಇಲ್ಲದೆ ನಡೆದುಕೊಂಡು ಬರುತ್ತಿದೆ.

ನಿಜವೆಂದರೆ, ದೇಶದ ಮೊದಲ ರಾಷ್ಟ್ರಪತಿಯಾಗಿ ಬಾಬು ರಾಜೇಂದ್ರ ಪ್ರಸಾದ್‌ ಅವರು ಅಧಿಕಾರ ಸ್ವೀಕರಿಸಿದ್ದು ದೇಶವನ್ನು ಗಣರಾಜ್ಯವಾಗಿ ಘೋಷಿಸಲಾದ ೧೯೫೦ರ ಜನವರಿ ೨೬ರಂದು. ರಾಷ್ಟ್ರಪತಿ ಹುದ್ದೆಗೆ ಮೊದಲ ಚುನಾವಣೆ ನಡೆದಿದ್ದು ೧೯೫೨ರಲ್ಲಿ. ಅಲ್ಲೂ ಗೆಲುವು ಸಾಧಿಸಿದ ರಾಜೇಂದ್ರ ಪ್ರಸಾದ್‌ ಆ ಹುದ್ದೆಯಲ್ಲೇ ಮುಂದುವರಿದರು. ರಾಜೇಂದ್ರ ಪ್ರಸಾದ್‌ ಅವರು ೧೯೬೨ರ ಮೇ ವರೆಗೆ ಅಧಿಕಾರದಲ್ಲಿದ್ದರು. ಭಾರತದ ಮೂರನೇ ರಾಷ್ಟ್ರಪತಿಯಾಗಿ ಸರ್ವೇಪಲ್ಲಿ ರಾಧಾಕೃಷ್ಣನ್‌ ಅವರು ಅಧಿಕಾರ ಸ್ವೀಕರಿಸಿದ್ದು ೧೯೬೨ರ ಮೇ ೧೩ರಂದು. ಅವರು ೧೯೬೭ರ ಮೇ ೧೩ರವರೆಗೆ ಅಧಿಕಾರದಲ್ಲಿದ್ದರು.

ಅನಂತರ ಅಧಿಕಾರ ಸ್ವೀಕರಿಸಿದ ಇಬ್ಬರು ರಾಷ್ಟ್ರಪತಿಗಳಾದ ಝಾಕಿರ್‌ ಹುಸೇನ್‌ ಮತ್ತು ಫಕ್ರುದ್ದೀನ್‌ ಅಲಿ ಅಹ್ಮದ್‌ ಅವರು ಅಧಿಕಾರದಲ್ಲಿದ್ದಾಗಲೇ ನಿಧನರಾದ ಹಿನ್ನೆಲೆಯಲ್ಲಿ ಅಧಿಕಾರಾವಧಿ ಪೂರ್ಣಗೊಳಿಸಲಾಗಲಿಲ್ಲ. ದೇಶದ ಆರನೇ ರಾಷ್ಟ್ರಪತಿಯಾಗಿ ನೀಲಂ ಸಂಜೀವ ರೆಡ್ಡಿ ಅವರು ಅಧಿಕಾರ ಸ್ವೀಕರಿಸಿದ್ದು ೧೯೭೭ರ ಜುಲೈ ೨೫ರಂದು.

ಅಂದಿನಿಂದ ಅಧಿಕಾರ ಸ್ವೀಕಾರ ಸಮಾರಂಭ ನಿರಂತರವಾಗಿ ಜುಲೈ ೨೫ರಂದೇ ನಡೆಯುತ್ತಾ ಬರುತ್ತಿದೆ. ಗ್ಯಾನಿ ಜೈಲ್‌ ಸಿಂಗ್‌, ಆರ್‌. ವೆಂಕಟರಾಮನ್‌, ಶಂಕರ್‌ ದಯಾಳ್‌ ಶರ್ಮ, ಕೆ.ಆರ್‌. ನಾರಾಯಣನ್‌, ಎ.ಪಿ.ಜೆ ಅಬ್ದುಲ್‌ ಕಲಾಂ, ಪ್ರತಿಭಾ ಪಾಟೀಲ್‌, ಪ್ರಣಬ್‌ ಮುಖರ್ಜಿ, ರಾಮನಾಥ್‌ ಕೋವಿಂದ್‌ ಅವರು ಜುಲೈ ೨೫ರಂದೇ ಅಧಿಕಾರ ಸ್ವೀಕರಿಸಿದರು.

ಇದನ್ನೂ ಓದಿ| Draupadi Murmu | 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದ್ರೌಪದಿ ಮುರ್ಮು
ಇದನ್ನೂ ಓದಿ| Draupadi Murmu | ಬುಡಕಟ್ಟು ಜನಾಂಗದ ಪ್ರಥಮ ರಾಷ್ಟ್ರಪತಿ ಮುರ್ಮು; ಕುಟುಂಬ, ರಾಜಕೀಯ ಹಿನ್ನೆಲೆ ಏನು?

Exit mobile version