Site icon Vistara News

DRDO Espionage: ಹನಿ ಟ್ರ್ಯಾಪ್‌, ಪಾಕ್‌ ಯುವತಿ ಜತೆ ಬ್ರಹ್ಮೋಸ್‌ ಕ್ಷಿಪಣಿ ರಹಸ್ಯ ಹಂಚಿಕೊಳ್ಳಲು ಮುಂದಾಗಿದ್ದ ಡಿಆರ್‌ಡಿಒ ವಿಜ್ಞಾನಿ!

Pradeep Kurulkar drdo espionage

ಹೊಸದಿಲ್ಲಿ: ಬೇಹುಗಾರಿಕೆ, ದೇಶದ್ರೋಹ ಆಪಾದನೆಯ ಅಡಿಯಲ್ಲಿ ಸಿಕ್ಕಿಬಿದ್ದಿರುವ ಪ್ರತಿಷ್ಠಿತ ಡಿಆರ್‌ಡಿಒ (Defence Research and Development Organisation- DRDO) ಸಂಸ್ಥೆಯ ವಿಜ್ಞಾನಿಯ (DRDO Espionage) ವಾಟ್ಸ್ಯಾಪ್‌ ಚಾಟ್‌ (whatsapp chat) ದಾಖಲೆಗಳನ್ನು ತನಿಖಾ ಸಂಸ್ಥೆ ಪರಿಶೀಲಿಸಿದ್ದು, ಬ್ರಹ್ಮೋಸ್-‌ ಅಗ್ನಿ ಮುಂತಾದ ದೇಶಿ ಕ್ಷಿಪಣಿಗಳ ವಿನ್ಯಾಸ ರಹಸ್ಯಗಳನ್ನು ಪಾಕ್‌ ಯುವತಿಗೆ ನೀಡಲು ಮುಂದಾಗಿದ್ದುದು ಪತ್ತೆಯಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯೊಳಗಿನ (ಡಿಆರ್‌ಡಿಒ) ಬೇಹುಗಾರಿಕೆ ಪ್ರಕರಣದ ಕುರಿತು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ ತನಿಖೆಯಲ್ಲಿ, ಬಂಧಿತ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರು ಬ್ರಹ್ಮೋಸ್ ಕ್ಷಿಪಣಿ ಯೋಜನೆಯ ಕುರಿತ ಅತ್ಯಂತ ರಹಸ್ಯ ದಾಖಲೆಯನ್ನು ಪಾಕಿಸ್ತಾನಿ ಗುಪ್ತಚರ ಮಹಿಳೆಗೆ ತೋರಿಸುವ ಒಲವು ವ್ಯಕ್ತಪಡಿಸಿದ್ದರು ಎಂದು ಬಹಿರಂಗಪಡಿಸಿದೆ. ಈಕೆ ತನ್ನನ್ನು ಝರಾ ದಾಸ್‌ಗುಪ್ತಾ ಎಂದು ಗುರುತಿಸಿಕೊಂಡಿದ್ದಳು.

ಬಂಧಿತ ವಿಜ್ಞಾನಿ ಕುರುಲ್ಕರ್‌ (59) ಅವರು DRDOದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಭಾಗ (ಎಂಜಿನಿಯರ್‌ಗಳು) ಪ್ರಯೋಗಾಲಯದ ಮುಖ್ಯಸ್ಥರಾಗಿದ್ದರು. ಮೇ 3ರಂದು ಅಧಿಕೃತ ರಹಸ್ಯ ಕಾಯಿದೆಯ (OSA) ಸೆಕ್ಷನ್‌ಗಳ ಅಡಿಯಲ್ಲಿ ಬೇಹುಗಾರಿಕೆ ಮತ್ತು ಪಾಕಿಸ್ತಾನ ಗುಪ್ತಚಾರಿಣಿ (PIO) ಜೊತೆಗಿನ ಸಂವಹನದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಇದೊಂದು ಹನಿ ಟ್ರ್ಯಾಪ್‌ ಪ್ರಕರಣವಾಗಿದೆ.

ಈಗ ಈ ಪ್ರಕರಣದಲ್ಲಿ ವಾಂಟೆಡ್ ಆರೋಪಿಯಾಗಿರುವ ಝರಾ, ವಾಟ್ಸ್ಯಾಪ್‌ನಲ್ಲಿ ಕುರುಲ್ಕರ್ ಅವರನ್ನು ಸಂಪರ್ಕಿಸಿದ್ದು, ತಾನು ಇಂಗ್ಲೆಂಡ್‌ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿದ್ದರು. ಹಲವಾರು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಳು. ಆಡಿಯೋ ಮತ್ತು ವೀಡಿಯೊ ಕರೆಗಳ ಮೂಲಕ ಕುರುಲ್ಕರ್‌ ಅವರನ್ನು ಪ್ರಚೋದಿಸಿದ್ದಳು. ಕುರುಲ್ಕರ್ ಆಕೆಯ ಜತೆಗೆ 2022ರ ಜೂನ್ 10ರಿಂದ 2023ರ ಫೆಬ್ರವರಿ 24ರ ನಡುವೆ ಅನೇಕ ಸಂಭಾಷಣೆಗಳನ್ನು ನಡೆಸಿದ್ದಾರೆ.

ಭಾರತದಲ್ಲಿನ ವಿವಿಧ ಡಿಆರ್‌ಡಿಒ ಮತ್ತು ರಕ್ಷಣಾ ಯೋಜನೆಗಳ ಬಗ್ಗೆ ಕುರುಲ್ಕರ್‌ನಿಂದ ಗೌಪ್ಯ ಮಾಹಿತಿಯನ್ನು ಹೊರತೆಗೆಯಲು ಝರಾ ಬಯಸಿದ್ದಳು. ಅವಳತ್ತ ಆಕರ್ಷಿತನಾಗಿದ್ದ ಕುರುಲ್ಕರ್‌, ತನ್ನ ಬಳಿ ಇದ್ದ ಗೌಪ್ಯ ಮಾಹಿತಿಯನ್ನು ಆಕೆಯ ಜತೆ ಹಂಚಿಕೊಂಡಿದ್ದ. ಈ ಕುರಿತು 1,837 ಪುಟಗಳನ್ನು ಹೊಂದಿರುವ ಆರೋಪ ಪಟ್ಟಿಯನ್ನು ಪುಣೆಯ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಚಾರ್ಜ್‌ಶೀಟ್‌ನ ಪ್ರಕಾರ ಇಬ್ಬರೂ ಬ್ರಹ್ಮೋಸ್ ಕ್ಷಿಪಣಿ (brahmos missile) ಬಗ್ಗೆ ಚಾಟ್ ಮಾಡಿದ್ದಾರೆ. “ಬೇಬಿ, ಅಪಾಯಕಾರಿ ಬ್ರಹ್ಮೋಸ್ ನಿಮ್ಮ ಆವಿಷ್ಕಾರ ಅಲ್ವೇ?ʼʼ ಎಂದು ಝರಾ ಕೇಳಿದ್ದಳು. “ನನ್ನ ಬಳಿ ಎಲ್ಲಾ ಬ್ರಹ್ಮೋಸ್ ಆವೃತ್ತಿಗಳ ಆರಂಭಿಕ ವಿನ್ಯಾಸ ಇದೆ” ಎಂದಿದ್ದ ಕುರುಲ್ಕರ್, “ನಾನು ಅವುಗಳನ್ನು ವಾಟ್ಸ್ಯಾಪ್‌ನಲ್ಲಿ ಅಥವಾ ಮೇಲ್‌ನಲ್ಲಿ ಕಳುಹಿಸಲು ಸಾಧ್ಯವಿಲ್ಲ. ಅದು ತುಂಬಾ ರಹಸ್ಯದ್ದು. ನಾನು ಅದನ್ನು ಪತ್ತೆಹಚ್ಚಿ ಸಿದ್ಧವಾಗಿಡುತ್ತೇನೆ. ನೀವು ಇಲ್ಲಿ ಬಂದಾಗ ತೋರಿಸುತ್ತೇನೆ” ಎಂದಿದ್ದರು. ಅಂದರೆ ಈ ಮಾಹಿತಿ ಅತ್ಯಂತ ಗೌಪ್ಯವಾದುದು ಎಂದು ತಿಳಿದಿದ್ದರೂ ಕುರುಲ್ಕರ್‌ ಅದನ್ನು ತೋರಿಸುವುದಾಗಿ ಹೇಳಿದ್ದರು.

ಬ್ರಹ್ಮೋಸ್ ಜತೆಗೆ ಅಗ್ನಿ 6, ರುಸ್ತೋಮ್ (ಮಧ್ಯಮ ಎತ್ತರದ ದೀರ್ಘ-ಸಹಿಷ್ಣು ಮಾನವರಹಿತ ವಾಯು ವಾಹನ), ಮೇಲ್ಮೈಯಿಂದ ವಾಯುವಿಗೆ ಉಡಾಯಿಸುವ ಕ್ಷಿಪಣಿಗಳು (SAM), ಮಾನವರಹಿತ ಯುದ್ಧ ವಾಯು ವಾಹನಗಳು (UCAV), DRDOನ ಡ್ರೋನ್ ಯೋಜನೆಗಳು, ಕ್ವಾಡ್‌ಕಾಪ್ಟರ್, ಡಿಆರ್‌ಡಿಒ ಡ್ಯೂಟಿ ಚಾರ್ಟ್, ಮೆಟಿಯರ್ ಕ್ಷಿಪಣಿ, ರಾಫೆಲ್, ಆಕಾಶ್ ಮತ್ತು ಅಸ್ಟ್ರಾ ಕ್ಷಿಪಣಿ ಮುಂತಾದವುಗಳ ಬಗ್ಗೆ ಕೂಡ ಇವರಿಬ್ಬರು ವಾಟ್ಸ್ಯಾಪ್‌ನಲ್ಲಿ ಚಾಟ್‌ ಮಾಡಿದ್ದರು. ಅಗ್ನಿ 6 ಕ್ಷಿಪಣಿ (agni missile) ಲಾಂಚ್‌ ಯಾವಾಗ ಎಂದು ಆಕೆ ಪ್ರಶ್ನಿಸಿದ್ದಳು. ಇದು ಪರಿಶೀಲನೆಯಲ್ಲಿದೆ ಎಂದು ಆತ ಉತ್ತರಿಸಿದ್ದ.

ಎಟಿಎಸ್‌ ಮುಚ್ಚಿದ ಲಕೋಟೆಯಲ್ಲಿ ಅನೇಕ ದಾಖಲೆಗಳನ್ನೂ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಕುರುಲ್ಕರ್‌ ವಾಟ್ಸ್ಯಾಪ್‌ ಗ್ರೂಪೊಂದನ್ನು ಶುರು ಮಾಡಿದ್ದು, ಅದರಲ್ಲಿ ಝರಾ ಹಾಗೂ ಇನ್ನಿಬ್ಬರು ಡಿಆರ್‌ಡಿಒ ವಿಜ್ಞಾನಿಗಳನ್ನೂ ಸೇರಿಸಿದ್ದಾನೆ. ಅವರಿಂದಲೂ ಹೇಳಿಕೆ ಪಡೆಯಲಾಗಿದೆ. ಆರೋಪಿ ಕುರುಲ್ಕರ್‌ ಪಾಕಿಸ್ತಾನಿ ಗೂಢಚರರನ್ನು ಅಕ್ರಮವಾಗಿ ಸಂಪರ್ಕಿಸಿರುವ ಬಗ್ಗೆ ಡಿಆರ್‌ಡಿಒಗೆ ಮೊದಲು ಮಾಹಿತಿ ಸಿಕ್ಕಿದ್ದು, ನಂತರ ಆರೋಪಿ ಬಳಸಿದ ಸೆಲ್ ಫೋನ್‌ಗಳು, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್, ಹಾರ್ಡ್ ಡಿಸ್ಕ್‌ಗಳು ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಸಾಧನಗಳನ್ನು ಫೆಬ್ರವರಿ 24ರಂದು ವಿಧಿವಿಜ್ಞಾನ ತನಿಖೆಗಾಗಿ ವಶಪಡಿಸಿಕೊಳ್ಳಲಾಗಿತ್ತು. ಡಿಆರ್‌ಡಿಒ ಆಂತರಿಕ ತನಿಖೆಯಲ್ಲಿ, ಪಾಕ್‌ ಗೂಢಚಾರಿಣಿಯ ಜತೆ ಕುರುಲ್ಕರ್‌ ಸಂಪರ್ಕದಲ್ಲಿರುವುದು ಸಾಬೀತಾಗಿತ್ತು.

ಇದನ್ನೂ ಓದಿ: ಪಾಕಿಸ್ತಾನಿ ಏಜೆಂಟ್​ಗೆ ಗುಪ್ತ ಮಾಹಿತಿ ರವಾನೆ; ಡಿಆರ್​ಡಿಒ ಹಿರಿಯ ನಿರ್ದೇಶಕನನ್ನು ಬಂಧಿಸಿದ ಮಹಾರಾಷ್ಟ್ರ ಎಟಿಎಸ್​

Exit mobile version