Site icon Vistara News

Drone Attack: ಮಂಗಳೂರಿಗೆ ಬರುತ್ತಿದ್ದ ನೌಕೆಯ ಮೇಲೆ ದಾಳಿ ನಡೆಸಿದ್ದು ಇರಾನ್‌ನ ಡ್ರೋನ್‌

drone attack on ship

ಪೋರಬಂದರ್‌: ಸೌದಿ ಅರೇಬಿಯಾದಿಂದ ಹೊರಟು ಮಂಗಳೂರು ಕಡೆಗೆ ಬರುತ್ತಿದ್ದ ಕಚ್ಚಾ ತೈಲದ ಹಡಗಿನ (Oil Tanker ship) ಮೇಲೆ ನಿನ್ನೆ ಅಪ್ಪಳಿಸಿದ ಡ್ರೋನ್‌ (Drone Attack) ಅನ್ನು ಇರಾನ್‌ನಿಂದ ಹಾರಿಸಲಾಗಿದೆ ಎಂದು ಅಮೆರಿಕದ ಭದ್ರತಾ ಸಂಸ್ಥೆ ಪೆಂಟಗನ್‌ (Pentagon) ಹೇಳಿದೆ.

ಅರಬ್ಬಿ ಸಮುದ್ರದ ಗುಜರಾತ್‌ನ ಪೋರಬಂದರ್ ಕರಾವಳಿಯಲ್ಲಿ ಶನಿವಾರ ಸುಮಾರು 20 ಭಾರತೀಯ ಸಿಬ್ಬಂದಿ ಇದ್ದ ಕಚ್ಚಾ ತೈಲದ ಹಡಗಿಗೆ ಡ್ರೋನ್ ದಾಳಿ ನಡೆದಿತ್ತು. ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆಯ ಸುಮಾರಿಗೆ ದಾಳಿ ನಡೆದಿದೆ. ಜಪಾನಿನ ಒಡೆತನದ ಹಡಗು ಇದಾಗಿದ್ದು, ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೆಂಟಗನ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.

ಈ ಹಡಗಿನಲ್ಲಿ 20 ಭಾರತೀಯ ಸಿಬ್ಬಂದಿ ಇದ್ದಾರೆ. ದಾಳಿಗೊಳಗಾದ ಹಡಗಿನತ್ತ ಭಾರತೀಯ ಕರಾವಳಿ ಕಾವಲು ಪಡೆಯ ನೌಕೆ ಧಾವಿಸಿತ್ತು. ಈ ದಾಳಿಯು ಪೋರ್‌ಬಂದರ್ ಕರಾವಳಿಯಿಂದ 217 ನಾಟಿಕಲ್ ಮೈಲ್ಸ್ ದೂರದಲ್ಲಿ ನಡೆದಿದೆ. ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್‌ಗೆ ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ಹೋಗುವಂತೆ ಸೂಚಿಸಲಾಗಿದೆ. ತೊಂದರೆಯಲ್ಲಿ ಸಿಲುಕಿರುವ ಹಡಗಿಗೆ ನೆರವು ನೀಡುವಂತೆ ಕೋಸ್ಟ್ ಗಾರ್ಡ್ ನೌಕೆಯು ಆ ಪ್ರದೇಶದಲ್ಲಿನ ಎಲ್ಲಾ ಹಡಗುಗಳಿಗೆ ಸೂಚಿಸಿದೆ.

ಎಎನ್ಐ ಸುದ್ದಿ ಸಂಸ್ದೆಯ ವರದಿಯ ಪ್ರಕಾರ ಡ್ರೋನ್ ದಾಳಿಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಂದಿಸಲಾಗದೆಯಾದರೂ ಹಡಗಿನ ಒಟ್ಟಾರೆ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ. ಹಾಗೆಯೇ ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

“ಹಡಗು ಭಾರತದ ಕಡೆಗೆ ಮುಂದುವರಿಯುತ್ತಿದ್ದು, ಹಡಗಿನೊಂದಿಗೆ ಸಂವಹನ ಮುಂದುವರಿಸಲಾಗಿದೆ. ಲೈಬೀರಿಯಾ ಧ್ವಜವುಳ್ಳ, ಜಪಾನೀಸ್ ಒಡೆತನದ ಮತ್ತು ನೆದರ್ಲ್ಯಾಂಡ್ಸ್ ಚಾಲಿತ ರಾಸಾಯನಿಕ ಟ್ಯಾಂಕರ್ ಮೋಟಾರು ನೌಕೆ CHEM PLUTOಗೆ ಶನಿವಾರ ಸ್ಥಳೀಯ ಕಾಲಮಾನ ಸುಮಾರು 10 ಗಂಟೆಗೆ (ಬೆಳಿಗ್ಗೆ 6 ಗಂಟೆಗೆ GMT) ಹಿಂದೂ ಮಹಾಸಾಗರದಲ್ಲಿ, ಭಾರತದ ಕರಾವಳಿಯಿಂದ 200 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಡ್ರೋನ್‌ ಅಪ್ಪಳಿಸಿತು. ಇರಾನ್‌ನಿಂದ ಹಾರಿಸಲಾದ ಏಕಮುಖ ದಾಳಿಯ ಡ್ರೋನ್‌ ಇದಾಗಿದೆ” ಎಂದು ಪೆಂಟಗನ್ ವಕ್ತಾರರು ತಿಳಿಸಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಹಾಗೂ ನಂತರ ಗಾಜಾ ಮೇಲೆ ಇಸ್ರೇಲ್‌ ನಡೆಸಿರುವ ಪ್ರತಿರೋಧದ ದಾಳಿಯ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಹಡಗು ಮಾರ್ಗಗಳಿಗೆ ಹೊಸ ಅಪಾಯ ಸೃಷ್ಟಿಯಾಗಿದ್ದು, ಇರಾನ್‌ನ ಹೌತಿ ಬಂಡುಕೋರರು ಇಸ್ರೇಲ್‌ಗೆ ಸಂಬಂಧಿಸಿದ ಎಲ್ಲ ನೌಕೆಗಳ ಮೇಲೆ ದಾಳಿ ಮಾಡುವುದಾಗಿ ಘೋಷಿಸಿದ್ದಾರೆ.

ಸೋಮವಾರ ಅಪಹರಣಕ್ಕೊಳಗಾದ ಮಾಲ್ಟಾ ಧ್ವಜದ ಸರಕು ಹಡಗಿನಿಂದ ಗಾಯಗೊಂಡ ನಾವಿಕನನ್ನು ಸ್ಥಳಾಂತರಿಸಲು ಭಾರತೀಯ ನೌಕಾಪಡೆಯು ಸಹಾಯ ಮಾಡಿದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಅರೇಬಿಯನ್ ಸಮುದ್ರದಲ್ಲಿ ಎಂವಿ ರುಯೆನ್ ಎಂಬ ಹಡಗನ್ನು ಆರು “ಕಡಲ್ಗಳ್ಳರು” ಅಕ್ರಮವಾಗಿ ಹತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿಯು ಹೊರ ಬರಬೇಕಾಗಿದೆ.

ಇದನ್ನೂ ಓದಿ: Drone Attack: ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ಡ್ರೋನ್ ದಾಳಿ! ಅಪಾಯದಿಂದ ಸಿಬ್ಬಂದಿ ಪಾರು

Exit mobile version